ವಸ್ತು ಪ್ರದರ್ಶನದಲ್ಲಿ
ಮುಗಿಯುವ ಹಗಲಿನ ತುದಿಗೆ
ಬಣ್ಣದ ಬೆಳಕಿನ ಹೊಳೆ.
ಸಂಜೆ ಹಾಯಾದ ಹೊತ್ತಲ್ಲೂ
ಇಗೊ ಬಂದೆ ಎಂದು
ಬೆದರಿಕೆ ಹಾಕುವ ಮಳೆ.
ಹೊಳಚುವ ಮೀನಿನ ಹಿಂಡು
ಪ್ರಮೀಳೆಯರ ಹಿಂಡು.
ಅವರನ್ನು ಕಣ್ಣಲ್ಲೇ ಉಣ್ಣುತ್ತ
ಬೀದಿಕಾಮಣ್ಣರ ಗಸ್ತು
ಕಾಯುವ ಪೋಲೀಸರೂ ಸುಸ್ತು
ಹೊಳೆಯುತ್ತಿದೆ ಸುತ್ತ
ಥರಾವರಿ ಸ್ಟಾಲುಗಳಲ್ಲಿ
ಚಿಲಿಪಿಲಿ ಬಣ್ಣಗಳಲ್ಲಿ
ನಾನಾ ಥರ ವಸ್ತು

ಬಂದೇ ಬಿಟ್ಟಿತು ನೋಡಿ
ಬೆದರಿಕೆ ಹಾಕಿದ ಮಳೆ-
ಆಕಾಶ ಅಕ್ಷತೆ ಎರಚಿದಂತೆ
ಸಣ್ಣಗೆ ಪನ್ನೀರ ಹನಿಸಿದಂತೆ
ಮಂಜಿನ ಬೆರಳನ್ನು ಯಾರೋ
ಬೆನ್ನಲ್ಲಿ ಆಡಿಸಿದಂತೆ.
ಬಿಡಿಸಿದಂತೆ ಬಾನಲ್ಲಿ
ಬಣ್ಣದ ರಂಗೋಲಿ
ಬಗೆ ಬಗೆ ನಮೂನೆ ಮುಗಿಲು
ಸಂಜೆ ಬೆಳಕಲ್ಲಿ ಮಿಂಚಿದೆ
ಕನಕಾಂಬರಿ ಹಗಲು.

ಹವೆ ತುಂಬ ಹರಡುತ್ತಿದೆ
ಬೆಚ್ಚನೆ ಹಾಯಾದ ಪರಿಮಳ
ಬಿರಿದಿವೆ ಮೂಗಿನ ಹೊಳ್ಳ
ಮುದುಕರ ನಾಲಿಗೆಯಲ್ಲೂ ತಳಮಳ
ಗಾಲಿಗಾಡಿಗಳಲ್ಲಿ
ಟೆಂಟಿನ ಅಂಗಡಿಗಳಲ್ಲಿ
ಕರಿದ ತಿಂಡಿಗಳ ಭಾಂಡ,
ಅಲ್ಲೇ
ಪಳಕ್ಕನೆ ಜಿಗಿಯುತ್ತಿವೆ
ಬಾಣಲಿಯಿಂದ ತಟ್ಟೆಗೆ
ಬಿಸಿ ಬಿಸಿ ಬೊಂಬಾಯ್ ಬೋಂಡ!
ಕಾಫಿ ಟೀ ಕೋಲಾ
ಐಸ್-ಕ್ರೀಮ್ ಪಾಪ್‌ಕಾರನ್ ಜಾಲ,
ಜಗ್ಗಿ ಎಳೆಯುತ್ತಿವೆ ಮಕ್ಕಳು
ಅಮ್ಮಂದಿರ ಸೆರಗನ್ನು
ಗುರಿಸಾಧಿಸಿ ಕಡೆಗೂ
ಅಂಗಡಿಯವನ ಗಾಳ!

ವಸ್ತು ಪ್ರದರ್ಶನ ನೋಡುತ್ತ
ವಸ್ತು ಪ್ರದರ್ಶನ ಮಾಡುವ ಹುಚ್ಚು
ಬಣ್ಣದ ವಸ್ತ್ರ ಒಡವೆ
ತಿದ್ದಿದ ತುಟಿ ಕಣ್ಣು,
ಪ್ರಾಯದ ದಡ ಕುಸಿದಿದ್ದರೂ
ಮೈಮರೆಸುವ ಹೆಣ್ಣು
ಏರು ಪೇರು, ಮಿದುಬದಿ
ಕಿಬ್ಬೊಟ್ಟೆಯ ಜಾರು ;
ಚಲಿಸಿದೆ ಬಣ್ಣದ ಬಾವುಟ
ಬೆಡಗಿನ ತೇರು.

ಮುಗಿಸಿ ಬರುವಾಗ ಪ್ರದರ್ಶನ
ಏನೋ ತಳಮಳ,
ಮುಗಿದೇ ಹೋಯಿತೆ ಸಂಭ್ರಮ ?
ಏನೋ ಕಳವಳ.
ಒದ್ದುಡುತ್ತಿದೆ ಸುಮ್ಮನೆ
ಯಾಕೋ ಚಡಪಡಿಸಿ
ನೀರಾಚೆಗೆ ಎಸೆದ ಮೀನು ಮನಸ್ಸು ವಿಲವಿಲ.
*****