ಮೆಸಪೊಟೇಮಿಯಾದ ಒಬ್ಬ ರಾಜ
ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು
ಕೆತ್ತಿಸಿದ ತನ್ನ ಹೆಸರನ್ನು
ಹೆಸರು ಅಖಿಟೋಪನೆಂದು
ಹೆಬ್ಬಂಡೆಗಳ ಮೇಲೆ
ಮೃತ್ತಿಕೆಗಳ ಮೇಲೆ
ಮರದ ಕಾಂಡಗಳ ಮೇಲೆ
ಬರೆಸಿದ ಪಠ್ಯ ಪುಸ್ತಕಗಳಲ್ಲಿ
ಸೇರಿಸಿದ ಧರ್ಮಗ್ರ೦ಥಗಳಲ್ಲಿ
ಪೂಜಾರಿಗಳ ಮಂತ್ರಗಳಲ್ಲಿ
ಎಲ್ಲೆಲ್ಲು ಅಖಿಟೋಪ ಅಖಿಟೋಪ
ಎಷ್ಟೆಂದರವನ ಕೋಪ
ಕುದುರೆಗಳು ಕೆನೆಯುವುದೂ
ಕಪ್ಪೆಗಳು ವಟಗುಟ್ಟುವುದೂ
ಆದವು ಅಖಿಟೋಪ
ಅಖಿಟೋಪನೆಂದರ ಅಂದಿನ ಭಾಷೆಯಲ್ಲಿ
ಅನೇಕ ಸೂರ್ಯರ ತಾಪ-
ವೆಂದು ಅರ್ಥ
ಆದರೆ ಮೊಂಗೋಲರೆಂಬವರು
ಮಹಾ ನಿರ್ದಯರು
ಅವರು ಮಾಂಸ ಬೇಯಿಸದೆ ತಿನ್ನುತ್ತಿದ್ದರು
ಕಳ್ಳಿನ ಭಾಂಡಿ ಕುಡಿಯುತ್ತಿದ್ದರು
ಕುಡಿದು ಢರ್ರನೆ ತೇಗುತಿದ್ದರು
ದೊಡ್ಡದಾಗಿ ನಗುತಿದ್ದರು
ಅವರು ಚೀನಾ ದೇಶದಿಂದ
ಸಿಡಿಮದ್ದನ್ನು ತಂದರು
ಕುದುರೆಗಳ ಮೇಲೆ ಬಂದರು
ಸಂತೆಗೆಂದು ಹೋದ ದೋಣಿಗಳು
ಸಂಜೆಯಾದರೂ ಮರಳಲಿಲ್ಲ
ನಗರದ ಬಾಗಿಲುಗಳು
ಹೊತ್ತಿಗೆ ಮೊದಲೇ ಮುಚ್ಚಿದುವು
ದೀಪಗಳೂ ಆರಿದುವು
ಯಾವಾಗಲೂ ಹಾಡುತಿದ್ದವರು
ಯಾಕೆ ಹಾಡಲಿಲ್ಲ?
ಮತ್ತೆ ಬೆಳಗಾಯಿತು?
ವರ್ಷಗಳು ಉರುಳಿದುವೆ?
ಯಾರಾದರೂ ಸುದ್ದಿಯನು ತಂದರೆ?
ಮೆಸಪೊಟೇಮಿಯಾ!
ಹರಿವ ನೀರಿನಲಿ
ಕೆತ್ತಿರುವುದೆ ಚರಿತ್ರೆ?
ಹೇಳೀಗ ನಮ್ಮ ಮೆಚ್ಚಿನ ಅಖಿಟೋಪನೆಲ್ಲಿ?
ಎಲ್ಲಿ ಆ ಮಂತ್ರಗಳು
ಹೆಸರು ಬರೆಸಿದ ಗ್ರಂಥಗಳು
ಎಲ್ಲಿ ಕುದುರೆಗಳು ಎಲ್ಲಿ ಕಪ್ಪೆಗಳು
ಎಲ್ಲಿ ಆ ಹೆಬ್ಬಂಡೆ
ಸಿಡಿದ ನದಿ ದಂಡೆ
ಅನೇಕ ಸೂರ್ಯರ ತಾಪ
ಅಖಿಟೋಪ
ಯಾವ ಸಮುದ್ರದಲಿ ಬಿದ್ದ
ಹೇಳು ಮೆಸಪೊಟೇಮಿಯಾ
ಅಂಥ ಪತನಕ್ಕೆ
ಇಂಥ ಸಾಲುಗಳು ಸಾಕೆ?
*****


















