ಲೋಹಿಯಾ ಮತ್ತು ಐನ್‌ಸ್ಟೀನರ ವಿಚಾರಸಂಗಮ

ಲೋಹಿಯಾ ಮತ್ತು ಐನ್‌ಸ್ಟೀನರ ವಿಚಾರಸಂಗಮ

ಚಿತ್ರ: ವಿಕಿಮೀಡಿಯ

(ಲೋಹಿಯಾ: ಜನನ : ೨೩-೩-೧೯೧೦ ಮರಣ ೧೧/೧೨-೧೦-೧೯೬೭ ಐನ್‌ಸ್ಟೀನ್ : ಜನನ : ೧೪-೩-೧೮೭೯ ಮರಣ ೧೭/೧೮-೪-೧೯೫೫)

ಗಾಂಧಿಯ ಆಹಿಂಸಾ ತತ್ವ ಹಾಗೂ ಐನ್‌ಸ್ಟೀನರ ಅಣುವಾದ ಈ ಯುಗದ ಎರಡು ಅದ್ಭುತಗಳೆಂದು ಪರಿಗಣಿಸಲಾಗಿದೆ. ಆದರೆ ಅವು ಯಾವ ರೀತಿಯಲ್ಲಿ ಅದ್ಭುತ ಎಂದು ನನಗೆ ಆರ್ಥವಾಗಿಲ್ಲ. ಅದ್ಭುತ ಎನ್ನುವ ಅರ್ಥಕ್ಕಾಗಿಯೇ ಅದ್ಭುತವಾಗಿದ್ದರೆ ಅದರಿಂದ ಆಶ್ಚರ್ಯವಿಲ್ಲ. ನನ್ನ ದ್ಬಷ್ಟಿಯಲ್ಲಿ ಮಾನವ ಕಲ್ಯಾಣಕ್ಕೆ ಮಾರಕವಾಗುವ ಯಾವುದೇ ತತ್ವ ಹಾಗೂ ವಾದ ತಿರಸ್ಕಾರ ಯೋಗ್ಯವಾದದ್ದು. ನನಗೆ ಅನ್ನಿಸುವಂತೆ ಈ ಅಹಿಂಸಾ ತತ್ವ ಹಾಗೂ ಆಣುವಾದ ಎರಡೂ ಮಾನವಕಲ್ಯಾಣ ದೃಷ್ಟಿಯಿಂದ ತಿರಸ್ಕರಿಸಲು ಯೋಗ್ಯವಾದವುಗಳಾಗಿವೆ.

ಕಾರಣ ಕೊಡದೆ ಈ ಮಾತನ್ನು ಹೇಳಿದರೆ ಸಾಧುವಾಗಲಾರದು. ನನಗೆ ಗಾಂಧಿಯ ಅಹಿಂಸಾತತ್ವ ಏಕೆ ಮಾನವ ಮಾರಕವಾಗಿದೆ ಎಂದರೆ ಉಳ್ಳವರ, ಬಂಡವಾಳಶಾಹಿಗಳ, ಆಯುಧಸನ್ನದ್ಧರ, ಅಧಿಕಾರದ ಎದುರು ಈ ಅಹಿಂಸಾ ತತ್ವ ಬೇಡುವ ಭಿಕ್ಷೆಯಾಗಿ ಒಂದು ಚೋದ್ಯವಾಗುತ್ತಾದ್ದರಿಂದ. ಸಾಮಾನ್ಯವಾಗಿ ಉಳ್ಳವರ ದೃಷ್ಟಿ ಅವರವರ ಹಿತ ಕಾಪಾಡಿಕೊಳ್ಳುವಷ್ಟು ಸಂಕುಚಿತವಾದದ್ದು. ಅಲ್ಲಿ, ಈ ಆಹಿಂಸಾ ತತ್ವ ಅದನ್ನು ಅಪ್ಪಿಕೊಂಡವರ ಪಾಲಿಗೆ ಹಿಂಸೆಯಾಗುತ್ತದೆ, ಅಲ್ಲದೆ ಉಳ್ಳವರ ಪ್ರತ್ಯಸ್ತ್ರವೂ ಆಗಿ ಬಿಡುತ್ತದೆ. ಉಳ್ಳವರು ಶಸ್ತ್ರಸನ್ನದ್ಧರಾಗಿ ದಬ್ಬಾಳಿಕೆ ನಡೆಸುವಲ್ಲಿ ನಿಶ್ಶಸ್ತ್ರೀಕರಣವಾದ ಹೂಡಿಕೊಂಡು ಮೂಕ ಪ್ರೇಕ್ಷಕರಾಗಿರುವವರು ಆಹಿಂಸಾ ತತ್ವದ ಹೇಡಿಗಳಾಗಿ ಇತಿಹಾಸದ ವ್ಯಂಗ್ಯಕ್ಕೆ ತುತ್ತಾಗುವರು. ಮಾನವತೆಯ ಗುಣ ದಿನದಿಂದ ದಿನಕ್ಕೆ ನಿಜದತ್ತ ನಡೆಯುವುದು ; ವಂಚನೆಗೆ ಒಳಗಾಗುವುದಲ್ಲ. ಆದ್ದರಿಂದ ಈ ಆಹಿಂಸಾ ತತ್ವ ಸದ್ಯಕ್ಕಂತು ಉಳ್ಳವರ ಪೋಷಣೆಗೆ ಒಳ್ಳೆಯ ಆಹಾರವಾಗಿದೆಯೇ ಹೊರತು ಬರಿಗೈಯ ಬಡವರಿಗೆ ಪೂರಕವಾಗಿಲ್ಲ ; ಬದಲಿಗೆ ಅವರಿಗೆ ಮಾರಕವಾಗಿದೆ. ಸ್ವಾತಂತ್ರ್ಯಾನಂತರದ ಭಾರತ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಗಾಂಧಿಯ ಭಾರತ ಎಲ್ಲಿ ಹೋಯಿತು ? ಆದ್ದರಿಂದಲೇ ಗಾಂಧಿಯೊಂದಿಗೆ ಅಹಿಂಸೆಯನ್ನೂ ಸಹ ಗುಂಡು ಬಲಿಗೊಂಡು ಬಿಟ್ಟಿತು. ಈಗ ಎಲ್ಲರ ಪಾಲಿಗೆ ಮ್ಯೂಸಿಯಂನಲ್ಲಿ ಉಳಿದ ಗಾಂಧಿಯಂತೆ ಈ ಆಹಿಂಸಾ ತತ್ವವೂ ಕೂಡ!

ಪ್ರತಿಯೊಬ್ಬ ವಿಜ್ಞಾನಿಯ ಅಂತರಂಗವೂ ದೀನದಲಿತರ ಸಂಕಷ್ಟಗಳಿಗೆ ಮಿಡಿದದ್ದು ಕಂಡು ಬಂದರೂ ಅವರ ಶ್ರಮದ ಫಲ ಮೊತ್ತ ದೀನದಲಿತರ ಉದ್ಧಾರಕ್ಕೆ, ಮಾನವ ಕಲ್ಯಾಣಕ್ಕೆ ಒದಗುವ ಬದಲು ಅಧಿಕಾರ ಆರೂಢರಿಗೇ ಮಠಾಧಿಪತಿಗಳ ಮುಷ್ಟಿಗೆ ಪುಷ್ಟಿ ಕೊಟ್ಟಿದ್ದು ಇತಿಹಾಸದ ವ್ಯಂಗ್ಯ. ಹಾಗೆ ಐನ್‌ಸ್ಟೀನ್ ಅದ್ಭುತ ಕೊಡುಗೆ ಅಣುವಾದ ಕೂಡ!

ತಮ್ಮ ಇಡೀ ಜೀವನದ ಉಸಿರನ್ನು ವಿಜ್ಞಾನದಲ್ಲಿ ತೊಡಗಿಸಿಕೊಂಡು ಮಾನವ ಕಲ್ಯಾಣದ ಹಿರಿಯಾಸೆಯನ್ನು ಹೃದಯದಲ್ಲಿ ಮಿಡಿಯುತ್ತ ವಿಶ್ವದ ನಗುಮೊಗವನ್ನು ಕಾಣುವ ಕಾತರದ ಐನ್‌ಸ್ಟೀನ್‌ರಿಗೆ ಎರಡನೆ ವಿಶ್ವಮಹಾಯುದ್ಧದಲ್ಲಿ ಅವರ ಬದುಕಿನಲ್ಲೆ ಅಣುಬಾಂಬು ಸಿಡಿದದ್ದು ; ಜಪಾನಿನ ಹಿರೋಷಿಮಾ ನಾಗಸಾಕಿ ಬೆಟ್ಟಗುಡ್ಡಗಳನ್ನು ನುಚ್ಚುನೂರು ಮಾಡಿ ಮಾನವ ಜೀವಿಗಳನ್ನು ಮಣ್ಣುಮಾಡಿದ್ದು ಐನ್‌ಸ್ಟೀನ್‌ರಿಗೆ ಇತಿಹಾಸ ಕೊಟ್ಟ ಅತ್ಯಂತ ನೀಚ ಕೊಡುಗೆ. ಕಲ್ಯಾಣವನ್ನು ಕಾಣುವ ಕಾತರದ ಕಣ್ಣಿಗೆ ಅಣುವಿನ ಸುಡುವ ಕಿಡಿ; ಆನಂದದ ಕಣ್ಣೀರಿಗೆ ಬದಲು ದುಃಖತಪ್ತ ನಿಟ್ಟುಸಿರು ಏಕೆ ? ಅಂದಿನಿಂದ ಇಂದಿಗೂ ಐನ್‌ಸ್ಟೀನ್‌ರ ಶ್ರಮದ ಫಲ ಮಾನವತೆಯ ವಿನಾಶ ವಿನಾಶ ವಿನಾಶ. ಇದು ಐನ್‌ಸ್ಟೀನ್‌ರ ತಪ್ಪು ಎಂದು ಹೇಳುವ ಮೂರ್ಖ ಸಾಹಸ ನನ್ನದಲ್ಲ.

ಹೀಗಾಗಿ ಲೋಹಿಯಾ ಓದುವ ನನಗೆ ಅಹಿಂಸೆ ಮತ್ತು ಅಣು ಎರಡೂ ಅರ್ಥ ಕಳೆದುಕೊಳ್ಳುತ್ತವೆ. ಮಾನವ ಕಲ್ಯಾಣಕ್ಕಾಗಿ ಲೋಹಿಯಾ ಹಾಕಿರುವ ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿ, ಅಹಿಂಸೆ ಮತ್ತು ಅಣುವಾದಕ್ಕಿಂತ ಸತ್ವಯುತವಾದದ್ದು. ಈ ಕಾರಣದಿಂದಲೇ ನನಗೆ ಲೋಹಿಯಾ ಹತ್ತಿರವಾಗುತ್ತಾರೆ. ಅತ್ಯಂತ ಮುಖ್ಯವಾದದ್ದೆಂದರೆ ಲೋಹಿಯಾರವರನ್ನು ಓದಿ ಅರ್ಥಮಾಡಿಕೊಳ್ಳುವ ಯಾರೇ ಆಗಲಿ ಅವರು ಮೂಲಭೂತವಾಗಿ ಮನುಷ್ಯರಾಗುತ್ತಾರೆ ; ತಮ್ಮ ಪ್ರತಿಕ್ಷಣಕ್ಕೂ ಜೀವಂತವಾಗಿ ಸ್ಪಂದಿಸುತ್ತಾರೆ; ಮುಖ್ಯವಾಗಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡು ಬದುಕಿಗೆ ಜೀವಂತ ಸಾಕ್ಷಿಯಾಗುತ್ತಾರೆ. ಹೀಗಾಗಿ ಅಹಿಂಸೆ, ಅಣು ಅರ್ಥ ಕಳೆದುಕೊಳ್ಳುವಲ್ಲಿ ಲೋಹಿಯಾ ಅರ್ಥ ಹಚ್ಚುತ್ತಾರೆ.

ವಿಶ್ವದ ಮಾನವತಾವಾದಿಯೊಬ್ಬ ಮತ್ತೊಬ್ಬ ಮಹಾನ್ ವ್ವಕ್ತಿಯನ್ನು ಭೇಟಿಯಾದ ಐತಿಹಾಸಿಕ ದಿನ ೧೫ ಜುಲೈ ೧೯೫೧. ಬಂದ ಲೋಹಿಯಾರವರನ್ನು ವರಾಂಡದಲ್ಲಿ ಕಾಯ್ದಿದ್ದ ಐನ್‌ಸ್ಟೀನ್‌ ಆತ್ಮೀಯತೆಯಿಂದ ಆಲಂಗಿಸಿಕೊಂಡರು. ಕುಶಲೋಪರಿಯ ನಂತರ ತಿರಸ್ಕಾರಕ್ಕೆ ಗುರಿಯಾಗಿ ದಾರುಣ ಸ್ಥಿತಿಯಲ್ಲಿರುವ ಇಡೀ ವಿಶ್ವದ ಮಾನವ ಜನಾಂಗವನ್ನು ಕುರಿತು ಪರಸ್ಪರ ವಿಚಾರ ವಿನಿಮಯಕ್ಕೆ ತಮ್ಮ ಸಂಭಾಷಣೆಯನ್ನು ತೊಡಗಿಸಿಕೊಂಡರು.

ಐನ್‌ಸ್ಟೀನ್‌ರ ಅಂತರಂಗದ ತುಡಿತ ಶಾಂತಿ ಸ್ಥಾಪನೆ, ವಿಶ್ವಸರ್ಕಾರ ಹಾಗೂ ಜೀವನ ದರ್ಶನ. ಡಾ. ಲೋಹಿಯಾರವರು ಸಹ ಸಮಾಜವಾದದ ತಳಹದಿಯ ಮೇಲೆ ವಿಶ್ವಸರ್ಕಾರದ ಆಲೋಚನೆಯನ್ನು ಒಳಗೊಂಡಿದ್ದವರು. ವಿಶ್ವದ ಈ ಮಹಾನ್ ವ್ಯಕ್ತಿಗಳಿಬ್ಬರೂ ಬಾಲ್ಯದಿಂದಲೂ ಸಮಾಜದ ದುರ್ಬಲ ವರ್ಗಗಳಲ್ಲಿ ಹಾಗೂ ಶೋಷಿತ ಜನಗಳ ಬಗ್ಗೆ ಅನುಕಂಪ ಹೊಂದಿದವರು. ಇಬ್ಬರೂ ಶೋಷಣೆಗೆ ಒಳಗಾದ ಶೂದ್ರ ವರ್ಗದಿಂದ ಬಂದವರಾದ್ದರಿಂದ ಅದು ಅವರ ರಕ್ತದಲ್ಲಿ ಒಡಮೂಡಿತ್ತು. ಆರ್ಥಿಕ ಹಾಗೂ ಸಾಮಾಜಿಕ ಶೋಷಣೆಯನ್ನು ಸಹಿಸುತ್ತಿರಲಿಲ್ಲ. ಹೀಗೆ ಅನ್ಯಾಯದ, ಶೋಷಣೆಯ, ಅಸಮತೆಯ ವಿರುದ್ಧ ಸಿಡಿದೆದ್ದು ವಿಶ್ವ ಸರ್ಕಾರದ ಮೂಲಕ ವಿಶ್ವ ಶಾಂತಿಯ ಪ್ರತಿಪಾದಕರಾದ ಈ ಈರ್ವರ ಭೇಟಿ ಒಂದು ಅಪೂರ್ವ ಸಂಗಮವಲ್ಲದೆ ಮತ್ತೇನು!

ವಿಶ್ವಶಾಂತಿ ಅಹಿಂಸೆಯಿಂದಲೆ ಅಥವಾ ಅಣುವಿನಿಂದಲೆ ? ಇದು ಈ ಶತಮಾನದಲ್ಲಿ ಎದ್ದ ಗೊಂದಲ. ಈ ಎರಡೂ ಸರ್ವನಾಶಕಾರಕವಾದದ್ದು. ಶಾಂತಿ ಸಾಧನೆಗೆ ಈ ಎರಡರ ಸಮತೋಲನ ಉಪಯುಕ್ತವಾದದ್ದಾಗಿದೆ. ಜರ್ಮನಿ ಅಣುಬಾಂಬು ತಯಾರಿಸಿದರೆ ವಿಶ್ವನಾಶ ಖಂಡಿತ ಎಂದು ಭಾವಿಸಿ ಶಾಂತಿಗಾಗಿ ಅಮೆರಿಕಕ್ಕೆ ಸಹಕಾರವಿತ್ತು ದುರುಪಯೋಗದ ನೋವನ್ನುಂಡ ಐನ್‌ಸ್ಟೀನ್‌ ನಿಶ್ಶಸ್ತ್ರೀಕರಣವಾದವನ್ನು ಮುಂದಿಡುತ್ತಾರೆ. ಡಾ. ಲೋಹಿಯಾ: “ನಾನು ಅಣುಬಾಂಬನ್ನು ಅದು ಸಿಗುವುದಿದ್ದರೆ ದೊರಕಿಸಿಕೊಳ್ಳಬೇಕೆಂದು ಕೇಳಿದ್ದೇನೆ. ನಾನು ಎಂದೆಂದೂ ಇನ್ನೊಬ್ಬನ ಮನೆಯನ್ನು ವಶಪಡಿಸಿಕೊಳ್ಳುಲು ಆಯುಧಗಳನ್ನು ಉಪಯೋಗಿಸಲಾರೆ. ಆದರೆ ನನ್ನ ಮಾತೃಭೂಮಿಯೇ ಶತ್ರುಗಳ ಆಕ್ರಮಣಕ್ಕೆ ತುತ್ತಾದಾಗ ನಾನು ಯಾವುದೇ ಅವಶ್ಯವಿರುವ ಹಾಗೂ ದೊರಕುವ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಹಿಂದೆಗೆಯಲಾರೆ. ನಾನು ಅಹಿಂಸೆಗೆ ಬದ್ಧನಾಗಲು ಇಚ್ಛಿಸುತ್ತೇನೆ. ಆದರೆ ಈ ಕ್ರೂರ, ಅಮಾನುಷ, ಬರ್ಬರ ಹಿಂಸೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಸಂಘಟಿತ ಹಿಂಸೆಯನ್ನೇ ಅವಲಂಬಿಸಬೇಕಾದುದು ಏಕೈಕ ಮಾರ್ಗವಾದರೆ, ಅದನ್ನು ಪ್ರಯೋಗಿಸಲು ನಾನು ಇಚ್ಛಿಸುತ್ತೇನೆ. ಉಳ್ಳವರ, ಶೋಷಕರ, ಪ್ರಭುಗಳ ಮತ್ತು ಉತ್ತಮರ ಮನಸ್ಸನ್ನು ಪರಿವರ್ತಿಸುವುದು ಒಳ್ಳಿಯದೇನೋ ಸರಿ. ಆದರೆ ದರಿದ್ರನ, ದುಃಖಿತನ, ಶೋಷಕನ, ತುಳಿತಕ್ಕೆ ಒಳಗಾಗಿರುವವನ ಮನಸ್ಸನ್ನೂ ಪರಿವರ್ತಿಸಿ ಅವನ ಕ್ಲೈಬ್ಯಕ್ಕೆ ಬದಲು ಧೈರ್ಯ ಸ್ಥೈರ್ಯಗಳನ್ನು ತುಂಬುವುದೂ ಮುಖ್ಯ. ಬಂಜೆ ಗಾಂಧೀವಾದ ಈಗ ಅಸ್ತಿತ್ವಕ್ಕೆ ಬಂದು, ಅದು ಮುಖ್ಯವಾಗಿ ಶ್ರೀಮಂತರ, ಉಳ್ಳವರ ಪರಿವರ್ತನೆಗೇ ಹೆಚ್ಚಾಗಿ ಪ್ರಾರ್ಥಿಸುತ್ತದೆ; ಬಡವನ, ದಲಿತನ, ಅಂತರಂಗ ಪರಿವರ್ತನೆಗೆ ಅದು ಯತ್ನಿಸುತ್ತಲೇ ಇಲ್ಲ. ಭಾರತದ ಮತ್ತು ಅಗಾಧ ವಿಶ್ವದ ಬಹುಪಾಲು ಜನಸ್ತೋಮವು ಸಾಕುಪ್ರಾಣಿಯಂಥ ಚಿರಂತನ ಶರಣಾಗತಿಯಲ್ಲಿಯೂ ಮತ್ತೆ ಒಮ್ಮೊಮ್ಮೆ ಇದ್ದಕ್ಕಿದ್ದಂತೆಯೇ ಮೇಲೆದ್ದು ಕಾದಾಡುವ ಮೃಗೀಯ ಕ್ರೌರ್ಯಕ್ಕೂ ಸಿಕ್ಕಿಕೊಂಡಿದೆ” ಎಂದು ವಾಸ್ತವ ಅರಿವಿನ ಸಮತೋಲನದ ಸಮಂಜಸ ಅಭಿಪ್ರಾಯವನ್ನು ಮುಂದಿಡುತ್ತಾರೆ. ಅಹಿಂಸೆಯೇ ಹಿಂಸೆಯಾದಾಗ ಅಣುವಿನ ಆಸರೆಯೇ ಅದಕ್ಕೆ ತಕ್ಕ ಮದ್ದು.

ಬಂಡವಾಳಶಾಹಿಗಳಿಂದ, ಭೂಮಾಲೀಕರಿಂದ ಆಗುತ್ತಿರುವ ಶೋಷಣೆಗೆ ಸಂಬಂಧಿಸಿದಂತೆ ಬಂಡವಾಳ ವಿಕೇಂದ್ರೀಕರಣ, ಭೂಮಿಯ ಮರುವಿಂಗಡಣೆ, ತನ್ಮೂಲಕ ಸಮಪಾಲು ಹಾಗೂ ಸರ್ವೋದಯವನ್ನು ಕುರಿತು ಮಾತನಾಡುತ್ತಾ ಡಾ.ಲೋಹಿಯಾರವರು ಭಾರತದಲ್ಲಿ ಜಮೀನ್ದಾರಿ ಪದ್ಧತಿಯನ್ನು ರದ್ದುಮಾಡಬೇಕೆನ್ನುವ ವಿಚಾರಕ್ಕೆ ಬಂದು ಭೂಮಾಲೀಕರಿಗೆ ಪರಿಹಾರವಾಗಿ ಅವರಿಗೆ ಪುನರ್ವಸತಿ ವ್ಯವಸ್ಥೆಯ ಸಹಾಯ ಧನವನ್ನಷ್ಟೆ ಕೊಡಬೇಕಲ್ಲದೆ ಭೂಮಿಯ ಬೆಲೆಯ ಪರಿಹಾರವನ್ನು ಕೊಡಕೂಡದು ಎಂದು ಹೇಳಿದಾಗ ಸರ್ವೋದಯದ ನಗುಮೊಗದಲ್ಲಿ ಮಿನುಗಿದ ಐನ್‌ಸ್ಟೀನ್‌ ಬಹಳ ಸರಿ ಎಂದರು. ಕ್ಷಣದಲ್ಲೆ ತಮ್ಮ ಸುಕ್ಕುಗಟ್ಟಿದ ಹಣೆಯೊಂದಿಗೆ ಪ್ರಶ್ನಿಸಿದರು: ಆದರೆ ಅದನ್ನು ನೆಹರೂ ಏಕೆ ಮಾಡುವುದಿಲ್ಲ ? ಆಗ ಡಾ. ಲೋಹಿಯಾ ಆದರ್ಶಕ್ಕೂ ಆಚರಣೆಗೂ ಅಂತರವಿದ್ದ ಭಾರತದ ಸ್ಥಿತಿ ನೆನಪಿಗೆ ಬಂದು ನೊಂದ ಧ್ವನಿಯಿಂದ ಅದು ನನಗೆ ಗೊತ್ತಿಲ್ಲ. ಅಲ್ಲಿ ಕೆಲವರು ಒಳ್ಳೆಯ ಮಾತನ್ನು ಆಡುತ್ತಾರೆ. ಆದರೆ ಅವರ ಕಾರ್ಯಗಳು ಒಳ್ಳೆಯವಾಗಿರುವುದಿಲ್ಲ ಎಂದು ನುಡಿದರು. ವಿಷಾದದ ಛಾಯೆ ಮೊಗದಲ್ಲಿ ಮೂಡಿತ್ತು.

ಪ್ರತಿಯೊಬ್ಬನಿಗೂ ಜೀವನದ ಕನಿಷ್ಠ ಸೌಲಭ್ಯವಮ್ನ ಒದಗಿಸುವುದು ಸಮಾಜದ ಜವಾಬ್ದಾರಿ. ವ್ಯಕ್ತಿ ಅವನ ಶಕ್ತಿಗೆ ಅನುಸಾರವಾಗಿ ಬೆಳೆಯುವ ಅವಕಾಶವಿರಬೇಕು. ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಸರ್ಕಾರವಾಗಲೀ, ಸಮಾಜವಾಗಲೀ ಕುಂಠಿತಗೊಳಿಸಲಾರದು ಎಂದು ಲೋಹಿಯಾರವರು ತಮ್ಮನ್ನು ತಾವು ವ್ಯಕ್ತಪಡಿಸಿದಾಗ ಮೂಲಭೂತವಾಗಿ ಈ ವಿಚಾರಗಳಲ್ಲೆ ತಮ್ಮ ಬದುಕನ್ನು ತೊಡಗಿಸಿಕೊಂಡಿದ್ದು, ಮಾನವ ಸಹೋದರತ್ವದ ಆದರ್ಶದಲ್ಲಿ ನಂಬಿಕೆ ಉಳ್ಳವರಾಗಿದ್ದು, ನೀಗ್ರೋ ಅವಹೇಳನವನ್ನು ಉಗ್ರವಾಗಿಖಂಡಿಸಿದ್ದ ಐನ್‌ಸ್ಟೀನ್‌ ಅವರು ಲೋಹಿಯಾರವರ ವಿಚಾರದಲ್ಲಿ ಸಾಮ್ಯವನ್ನು ಕಂಡು ಸಂತಸಗೊಂಡು ನೀವು ನಿಜವಾಗಿಯೂ ಸ್ವತಂತ್ರ ಮನಸ್ಸುಳ್ಳವರು ಎಂದು ಅಭಿನಂದನೆಯ ಮಾತುಗಳನ್ನಾಡಿದರು. ಆಗ ಲೋಹಿಯಾ ನಾನೊಂದು ಪ್ರಶ್ನೆ ಕೇಳಲೆ? ರಾಜಕೀಯವನ್ನು ಕುರಿತಲ್ಲ. ನಾನು ನಿಮ್ಮಲ್ಲಿಗೆ ಬಂದಿರುವುದು ಬೇರೆಯದನ್ನು ತಿಳಿದುಕೊಳ್ಳುವುದಕ್ಕೆ. ಬಹುಶಃ ರಾಜಕೀಯವನ್ನು ನಾನು ನಿಮಗೆ ತಿಳಿಯ ಹೇಳಬಲ್ಲೆ, ನನಗೆ ನಿಮ್ಮ ಸಹಾಯ ಬೇಕಾಗಿರುವುದು ಮಾನವನ ಸಂಕೀರ್ಣ ಮನಸ್ಸಿನ ಉನ್ನತ ವಲಯದಲ್ಲಿ. ನಾನು ಭಾರತದಲ್ಲಿ ಹೇಳಿದೆ. ಈ ಶತಮಾನದಲ್ಲಿ ಮೂವರು ದೊಡ್ಡವರೆಂದರೆ – ಗಾಂಧಿ, ಬರ್ನಾಡ್‌ಷಾ ಮತ್ತು ನೀವು ಎಂದು! ನಾನು ಬರ್ಲಿನ್‌ನಲ್ಲಿ ಹೇಳಿದೆ: ನಮ್ಮ ಕಾಲದಲ್ಲಿ ಎರಡು ಆಲೋಚನೆಗಳು ಬಂದುವು – ಗಾಂಧಿ ಮತ್ತು ಅಣ್ವಸ್ತ್ರ ಎಂದು. ಈಗಾಗಲೇ ಗಾಂಧಿ ಇಲ್ಲವಾಗಿದ್ದಾರೆ. ನಿಮ್ಮ ಅಣ್ವಸ್ತ್ರ ಮಾತ್ರ ಮಾನವ ವಿನಾಶದ ನಿರಂತರ ಸಾಧನವಾಗಿದೆ. ಈ ವಿನಾಶದಿಂದ ಮಾನವನ ಮನಸ್ಸು ಹೊರಬರುವುದು ಹೇಗೆ ? ಉಸಿರುಗಟ್ಟಸುತ್ತಿರುವ ಈ ಅನಿಷ್ಟ ಸಂಕೋಲೆಯಿಂದ ಬಿಡುಗಡೆಯ ದಾರಿ ಯಾವುದು? ನಮ್ಮನ್ನು ಈ ಬಂಧನದಿಂದ ಬಿಡಿಸಿ ಹೊಸ ಹಾದಿಗೆ ಒಯ್ಯುವ ವಿಚಾರಗಳೇನಾದರೂ ಈಚೆಗೆ ನಿಮ್ಮಲ್ಲಿ ಉಂಟಾಗಿವೆಯೆ ? ಎಂದು ಪ್ರಶ್ನೆಗಳ ಸುರಿಮಳೆಗರೆಯುತ್ತಾ ವಿಚಾರದ ಆಳಕ್ಕೆ ಇಳಿಯ ತೊಡಗಿದಾಗ ಈ ವಿಚಾರಗಳನ್ನು ಕೇಳುತ್ತಾ, ಭಾವಮಗ್ನರಾಗಿದ್ದ ಐನ್‌ಸ್ಟೀನ್ ಕೆಲವು ನಿಮಿಷಗಳ ಮೌನದ ನಂತರ ಈ ಮನುಷ್ಯನನ್ನು ಭೇಟಿ ಮಾಡಿ ಈತನೊಂದಿಗೆ ಮಾತನಾಡುವುದು ಎಷ್ಟು ಒಳ್ಳೆಯದು; ಇಲ್ಲದಿದ್ದರೆ ನಾನು ಏಕಾಂಗಿಯಾಗಿ ಬಿಡುವೆ ಎಂದು ತಮ್ಮಲ್ಲಿಯೇ ಉದ್ಗರಿಸಿದರು!

ಮುಂದುವರೆದ ಸಂಭಾಷಣೆಯ ಮಧ್ಯೆ ಐನ್‌ಸ್ಟೀನ್ ಅವರು ಮತಗಳನ್ನು ಕುರಿತು “ಕೇವಲ ಭಯ ಭಾವನೆಯಿಂದ ನೀತಿ ಸಂರಕ್ಷಣೆಗಾಗಿ ಹುಟ್ಟಿಕೊಂಡ ಮತಗಳು ಶ್ರೇಷ್ಠವಲ್ಲ. ಸತ್ಯಾನ್ವೇಷಣೆ, ಪರಮ ಮೌಲ್ಯಗಳ ಅರಿವು, ಅವುಗಳ ಸಾಧನೆಗಾಗಿ ಬದುಕಿನಲ್ಲಿ ಅನವರತ ಪ್ರಯತ್ನ” ಎಂದು ಅವುಗಳನ್ನು ಒತ್ತಿ ಹೇಳುತ್ತಾ ರಷ್ಯಾದಲ್ಲಿ ಕಮ್ಯುನಿಸಂ ತತ್ವಗಳಿಗನುಸಾರವಾಗಿ ಸ್ಥಾಪಿತವಾದ ಸಮಾಜವಾದಿ ವ್ಯವಸ್ಥೆಯನ್ನು ಖಂಡಿಸಿ ಪ್ರಜಾಸತ್ತಾತ್ಮಕ ಸಮಾಜವಾದದಲ್ಲಿರುವ ತಮ್ಮ ಇಷ್ಟವನ್ನು ವ್ಯಕ್ತಪಡಿಸಿದರು.

ತಮ್ಮ ಬದುಕಿನಲ್ಲಿ ಕಂಡುಕೊಂಡ ಮೌಲ್ಯಗಳನ್ನು ಕುರಿತು ಲೋಹಿಯಾರವರು ಕೇಳಿದಾಗ ಐನ್‌ಸ್ಟೀನ್‌ ಅವರು ಸಮಾಧಿಸ್ಥರಂತೆ ದಯೆ, ಸೌಂದರ್ಯ ಮತ್ತು ಸತ್ಯ ಎಂದು ಭಾವತಲ್ಲೀನರಾದುದನ್ನು ಕಂಡ ಲೋಹಿಯಾ, ಗಾಂಧಿ ಮತ್ತು ಐನ್‌ಸ್ಟೀನ್‌ ಅವರಲ್ಲಿ ಮಾನವತೆಯ ಬಗ್ಗೆ ಇದ್ದ ಆಂತರ್ಯ ದೃಷ್ಟಿ ಒಂದೇ ಎಂದು ವಿಸ್ಮಯಗೊಂಡರು. ಕಡೆಯಲ್ಲಿ ಡಾ.ಲೋಹಿಯಾರವರು ನಮ್ಮ ಇನ್ನೊಂದು ಕ್ರಾಂತಿಯು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಏಕಾಂತಗಳನ್ನು ಅತಿಕ್ರಮಿಸುತ್ತಿರುವ ಸಮಷ್ಟಿಯ ಬಗ್ಗೆ ನಡೆಯಬೇಕು ಎಂದು ಬೀಳ್ಕೊಂಡರು.

ಇಷ್ಟು ಕಾಲದ ನಂತರ, ನನ್ನಲ್ಲಿ ಉಳಿದು ಹೋಗಿರುವ ತೀವ್ರ ವಿಷಾದವೆಂದರೆ, ನಾನು ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಇಡ ಬಯಸುವ ಐನ್‌ಸ್ಟೀನ್‌ರನ್ನು ಮತ್ತೊಮ್ಮೆ ಭೇಟಿಮಾಡಿ ನಮ್ಮ ಮಾತುಕತೆಯನ್ನು ಮುಂದುವರಿಸಲಾಗಲಿಲ್ಲವಲ್ಲಾ ಎಂಬುದು. ಹಾಗೂ ಇನ್ನೊಂದು ವಿಷಾದವೆಂದರೆ ಪ್ರಪಂಚದ ಆ ಮಹಾನ್‌ನಗರ ನ್ಯೂಯಾರ್ಕ್‌ನ ಮುಖವನ್ನು, ನನಗೆ ಅವಕಾಶವಿದ್ದಾಗಲೂ ಇನ್ನಷ್ಟು ಹತ್ತಿರದಿಂದ ನೋಡಲಾಗಲಿಲ್ಲವಲ್ಲ ಎಂಬುದು. ನಾನು ಅಮೆರಿಕವನ್ನು ನೆನಸಿಕೊಂಡಾಗ – ನನ್ನ ಬದುಕಿನಲ್ಲಿ, ಅವಕಾಶವಿದ್ದಾಗ ಮಾಡಲಾಗದೇ ಹೋದ ಅನೇಕ ಆನಂದಮಯ ಹಿತಕರ ವಿಷಯಗಳ ಬಗ್ಗೆ ನೆನಸಿಕೊಂಡಾಗ ಆದಂತೆಯೇ – ಇಂತಹ ಇನ್ನೂ ಅನೇಕ ವಿಷಾದಗಳು ನನ್ನನ್ನು ಮುತ್ತುತ್ತವೆ. ಆದರೆ ಈ ಎಲ್ಲ ವಿಷಾದಗಳೇನೇ ಇರಲಿ, ಬೇಡವೆಂದರು ಐನ್‌ಸ್ಟೀನ್‌ ನನ್ನನ್ನು ಬೀಳ್ಕೊಡಲು ಆಟೋ ಕಾದು ನಿಂತಿದ್ದ ರಸ್ತೆಯ ಬದಿಯವರೆಗೂ ಬಂದು, “ನೀವು ಬಂದು ನನ್ನನ್ನು ಭೇಟಿ ಮಾಡಿ ಸಂತೋಷ ಉಂಟುಮಾಡಿದ್ದೀರಿ; ಯಾಕೆಂದರೆ ನನ್ನನ್ನು ಭೇಟಿ ಮಾಡಲು ಬರುವವರಲ್ಲಿ ಮನುಷ್ಯರೆ ಅಪರೂಪ” ಎಂದು ವಿದಾಯ ಹೇಳಿದಾಗ ನಾನು ಅಪೂರ್ವ ರೀತಿಯ ಹಿತವನ್ನು ಅನುಭವಿಸಿದೆ. ಅಲ್ಲಾ, ನಾವೇಕೆ ಇಷ್ಟೊಂದು ಒಂಟಿಯಾಗಿದ್ದೇವೆ ? ಈ ಮಾತುಗಳಿಂದ ಲೋಹಿಯಾರವರ ಹೃದಯದಾಳದ ಮಾನವ ಅಂತಃಕರಣವನ್ನು ನಾವು ಕಂಡುಕೊಳ್ಳಬೇಕು.

ಬದುಕಿಗೆ ಗಾಂಧಿ ಮತ್ತು ಐನ್‌ಸ್ಟೀನ್‌ ಅರ್ಥವಾಗಬೇಕಾದರೆ ಲೋಹಿಯಾ ಅರ್ಥವಾಗಬೇಕು. ಲೋಹಿಯಾ ಅರ್ಥವಾದರೆ ನಮಗೆ ನಾವು ಅರ್ಥವಾದಂತೆ. ಆದ್ದರಿಂದಲೇ ಇಂದಿನ ಅಗತ್ಯ ಲೋಹಿಯಾ : ನಮಗೆ, ನಿಮಗೆ, ಎಲ್ಲರಿಗೆ.
ಜನವರಿ ೧೯೮೦
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿರುಹಣತೆ
Next post ಹಗರಣ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…