ಮುಗಿಲ ಯೋಗದ ಗಾನ ಹೂಗಳು
ಜ್ಯೋತಿ ಚಿಮ್ಮುತ ಸುರಿಯಲಿ
ಆತ್ಮ ಪರ್ವತ ಶಾಂತಿ ಹೊಳೆಗಳು
ಕಲ್ಲು ನೆಲದಲಿ ಹರಿಯಲಿ

ಮಣ್ಣು ನೆನೆಯಲಿ ಬೆಣ್ಣೆಯಾಗಲಿ
ಕಲ್ಲು ಮಲ್ಲಿಗೆಯಾಗಲಿ
ಮುಳ್ಳು ಬೇಲಿಗೆ ತಾಯಿ ಚುಂಬಿಸಿ
ಭುವನ ಲಿಂಗವ ಮಾಡಲಿ

ಮುಗಿಲು ಮುಗಿಲಿಗೆ ಶೂನ್ಯ ಶೂನ್ಯಕೆ
ಆತ್ಮ ಮಂಚವು ಜೀಕಲಿ
ತೊಗಲ ಹಲಿಗೆಯು ಮಂತ್ರವಾಗಲಿ
ಶಿವನ ಡಂಗುರ ಡಮಿಸಲಿ

ತಾಯಿ ಬಂದಳು ತುಂಬಿ ನಿಂದಳು
ಪೂರ್ಣ ಕುಂಕುಮ ದೇವತೆ
ಭುವನ ದೇವತೆ ಶಿವನೆ ಮಾತೆಯು
ವಿಶ್ವಶಂಕರ ಪೂರ್ಣತೆ

ನೋಡು ಕಳವಳ ಕಾಣು ಉಪಟಳ
ಭುವನ ಹಸಿದಿದೆ ಉತ್ಕಟಾ
ದೇಹ ಕೆಟ್ಟಿದೆ ಆತ್ಮ ಸುಟ್ಟಿದೆ
ಕಟ್ಟು ಆತ್ಮದ ಓಂ ಮಠಾ
*****