ಕನ್ನಡ ಸಂಸ್ಕೃತಿ – ಕವಲು ದಾರಿಯಲ್ಲಿ

ಅದೊಂದು ಸುಂದರ ಸಂಜೆಯಾಗಿತ್ತು. ದಿನಾಂಕ ನನ್ನ ನೆನಪಿಗೆ ಬಾರದು. ಪಶ್ಚಿಮ ದಿಗಂತಕ್ಕೆ ಸಂಧ್ಯಾಸೂರ್ಯ ಧಾವಿಸುತ್ರಿದ್ದ. ಪಶ್ಚಿಮ ದಿಗಂತದಲ್ಲಿ ದೊಡ್ಡ ಬೆಟ್ಟಗುಡ್ಡಗಳು ಇರುವುದರಿಂದ ಬೆಂಗಳೂರಿನಲ್ಲಿ ಸೂರ್ಯ ಮುಂಚೆಯೇ (ಬೇರೆಡೆಗಿಂತ) ಮುಳುಗುವನೆಂದು ಹೇಳುತ್ತಾರೆ. ಆ ದಿನವಂತೂ ಅದು ನಿಜವಾಗಿಯೂ ಹಾಗೇ ಆಗಿತ್ತು.

ಆ ದಿನ ಸರ್ಕಾರಿ ಇಲಾಖೆಯು ದಕ್ಷಿಣ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಭರತನಾಟ್ಯದ ಒಂದು ಕಾರ್ಯಕ್ರಮವಿತ್ತು. ಬೆಂಗಳೂರು ದಕ್ಷಿಣದಲ್ಲಿ ಅದೊಂದು ಅಪರೂಪದ ಘಟನೆಯೇ ಆಗಿತ್ತು; ಏಕೆಂದರೆ ದಕ್ಷಿಣ ಬೆಂಗಳೂರಿನ ಜನಕ್ಕೆ ಎಟುಕದಷ್ಟು ದೂರದ ಬೆಂಗಳೂರಿನ ಉತ್ತರ ಭಾಗದಲ್ಲೇ ಸಾಮಾನ್ಯವಾಗಿ ಈ ಇಲಾಖೆಯು ಸಮಾರಂಭಗಳನ್ನು ಏರ್ಪಡಿಸುತ್ತದೆ. ಕನ್ನಡ ಗೀತೆಗಳ ಆಧಾರವಿಟ್ಟುಕೊಂಡ ಒಂದು ಒಳ್ಳೆಯ ಭರತನಾಟ್ಯ ಕಾರ್ಯಕ್ರಮವನ್ನು ನಿರೀಕ್ಷೆಯಿಟ್ಪುಕೊಂಡು ಹೋಗಿ ನೋಡಲು ನಾನು ನಿರ್ಧರಿಸಿದೆ.

ಆ ಸಭಾಂಗಣವು ಮುಖ್ಯವಾಗಿ ಸಾಮೂಹಿಕ ಭಜನೆಗಳಿಗೆ ಅನುಕೂಲವಾಗಿದ್ದ ಅಂಗಣದಂತಿತ್ತು. ಅಲ್ಲಿನ ಕಬ್ಬಿಣದ ಕುರ್ಚಿಗಳ ಚಾಲನೆಯ ಕರ್ಕಶ ಶಬ್ಧ ಮತ್ತು ಅದರ ಪ್ರತಿಧ್ವನಿಯಿಂದ ಮುಖ್ಯ ಸಂಗೀತ ಕೇಳಲು ತೊಂದರೆಯಾಗಿತ್ತು. ಸಂಸ್ಕೃತಿ ಇಲಾಖೆಯು ಆ ಸಭಾಂಗಣವನ್ನು ಅಂತಹ ಮುಖ್ಯಕಾರ್ಯಕ್ರಮಕ್ಕೆ ಏಕೆ ಆಯ್ಕೆ ಮಾಡಿಕೊಂಡಿತೋ ನನಗೆ ತಿಳಿಯದು. ಅಲ್ಪ ವ್ಯಯದ ಅಗತ್ಯದ ಆರ್ಥಿಕ ನೀತಿಯ ಕಾರಣದಿಂದಿದ್ದಿರಬಹುದು ಅಥವಾ ದಕ್ಷಿಣ ಬೆಂಗಳೂರಿನ ನಾಗರಿಕರು ಕರ್ಕಶ ಶಬ್ದಕ್ಕೆ ಮಾತ್ರ ಅರ್ಹರು ಆದರೆ ಭರತನಾಟ್ಯದ ಗೆಜ್ಜೆಗಳ ಮಧುರನಾದಕ್ಕಲ್ಲ ಎಂಬ ಭಾವನೆಯಿದ್ದಿರಬಹುದು. ದುರದೃಷ್ಟವಶಾತ್ ದಕ್ಷಿಣ ಬೆಂಗಳೂರಿನ ಎಲ್ಲ ಸಾಂಸ್ಕೃತಿಕ ಸಭಾಂಗಣಗಳ ಕಥೆಯೂ ಇದೇ. ಅತ್ಯಂತ ವಿಷಾದದ ಸಂಗತಿಯೆಂದರೆ, ಉತ್ತರ ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರ, ಚೌಡಯ್ಯ ಸ್ಮಾರಕ ಸಭಾಂಗಣ, ಅಂಬೇಡ್ಕರ್ ಭವನಗಳನ್ನು ಸರಿಗಟ್ಟುವಂತ ಸಾಮಾನ್ಯೋದ್ದೇಶ ಸಭಾಭವನ ದಕ್ಷಿಣ ಬೆಂಗಳೂರಿನಲ್ಲಿ (ಅಂದರೆ ನ್ಯಾಷನಲ್ ಕಾಲೇಜ್ ಫ್ಲೈ ಓವರ್, ವಾಣೀವಿಲಾಸ ರಸ್ತೆಯ ದಕ್ಷಿಣದಲ್ಲಿ) ಇಲ್ಲ.

ಅಂಬೇಡ್ಕರ್ ಭವನವು ದಕ್ಷಿಣ ಬೆಂಗಳೂರಿನಲ್ಲೇ ನಿರ್ಮಾಣವಾಗಬೇಕಿತ್ತು. ದಕ್ಷಿಣ ಬೆಂಗಳೂರಿನಲ್ಲಿ ಬತ್ತಿಹೋದ ಕೆರೆಯಂಗಳವಿಲ್ಲದಿದ್ದ ಕಾರಣ ಉತ್ತರ ಭಾಗದಲ್ಲಿ ನಿರ್ಮಾಣವಾಗಿರಬೇಕು. ನಾವು ನಿಜವಾಗಿಯ್ಯೂ ದಕ್ಷಿಣದಲ್ಲಿ ಯಾವುದಾದರೊಂದು ಕೆರೆಯನ್ನು ಬತ್ತಿಸಿ ಭವಿಷ್ಯದಲ್ಲಿ ಒಂದು ದೊಡ್ಡದಾದ ಅಂದರೆ ೨೦೦೦ ಕ್ಕಿಂತ ಹೆಚ್ಚು ಜನರಿಗೆ ಅವಕಾಶವುಳ್ಳ ಭವನವನ್ನು ಕಟ್ಟಿಸಲು ಸಿದ್ಧವಾಗಿರಿಸಬೇಕು.

ಬೆಂಗಳೂರು ಉತ್ತರ ಈಗಾಗಲೇ ೨೦ಕ್ಕಿಂತ ಹೆಚ್ಚು ಒಳ್ಳೆಯ ಸಭಾಭವನ ಗಳಿಂದ ತುಂಬಿ ತುಳುಕುತ್ತಿದೆ. ದಕ್ಷಿಣ ಬೆಂಗಳೂರಿನ ಜನರಿಗೆ ಸಖೇದ ಆಶ್ಚರ್ಯ, ವಿಷಾದ ಮತ್ತು ನಿರಾಶೆಯನ್ನುಂಟುಮಾಡುವಂತೆ ಮತ್ತೊಂದು ವಾಯುನಿಯಂತ್ರಿತ, ಅತ್ಯಾಧುನಿಕ ಬೃಹತ್ ಸಭಾಂಗಣವನ್ನು ರಾಜ್ಯಸರ್ಕಾರ ಉತ್ತರ ಬೆಂಗಳೂರಿನಲ್ಲಿ ನಿರ್ಮಿಸುತ್ತಿದೆ.

ದಕ್ಷಿಣ ಬೆಂಗಳೂರಿನಲ್ಲಿ ಒಂದು ದೊಡ್ಡ ಸಾಂಸ್ಕೃತಿಕ ಸಭಾಂಗಣದ ನಿರ್ಮಾಣಕ್ಕಾಗಿ ದಕ್ಷಿಣ ಬೆಂಗಳೂರಿನ ಚುನಾಯಿತ ಜನನಾಯಕರ ಮೇಲೆ ದಕ್ಷಿಣ ಬೆಂಗಳೂರಿನ ಜನರ ಒತ್ತಡವಿಲ್ಲ. ರಾಜಕಾರಣಿಗಳು ದ್ವೇಷಿಸುವ ಒಂದು ವಿಷಯ ವೆಂದರೆ ಸಂಸ್ಕೃತಿ. ಅವರ ಇಷ್ಟಗಳ ಪಟ್ಟಿಯಲ್ಲಿ ಸಾಂಸ್ಕೃತಿಕ ಸಭಾಂಗಣ ಒಂದು ವಿಷಯವಲ್ಲ. ಮೇಲುಸೇತುವೆಗಳು, ಕೆಳದಾರಿಗಳು ಇವುಗಳ ಮುಂದೆ ಕನ್ನಡ ಸಂಸ್ಕೃತಿ ಎಂಬುದು ಏನು? ದಕ್ಷಿಣಭಾಗದ ಚುನಾವಣೆಯಲ್ಲಿ ತೊಡಗಿದ ಜನರು ರಾತ್ರಿಯಲ್ಲಿ ಮದ್ಯಪಾನದ ವೇಳಾಮಿತಿಯನ್ನು ಮುಂದೂಡಲು ಪಬ್ ತುಂಬಿ ಕೊಳ್ಳುವುದನ್ನು ಒತ್ತಾಯಿಸುತ್ತಿದ್ದರು. ವಿಷಯ ಹೀಗಿರುವಾಗ ನಾಯಕರನ್ನು ಆರನೇ ಸಾರಿ ಆಗಲಿ ಅಥವ ಎಂಟನೇ ಸಲ ಆಗಲಿ ಆಯ್ಕೆ ಮಾಡಿದರೂ ದೊಡ್ಡದೊಂದು ಸಾಂಸ್ಕೃತಿಕ ಕಲಾಭವನವನ್ನು ನಾವು ದಕ್ಷಿಣ ಬೆಂಗಳೂರಿನವರು ಪಡೆಯುವುದೇ ಇಲ್ಲ.

ಇದು ದಕ್ಷಿಣಭಾಗದ ಬೆಂಗಳೂರು ಜನರ ಸಾಂಸ್ಕೃತಿಕ ಸೋಲು. ಈಗ ಆ ಸಂಜೆಯ ನಾಟ್ಯ ಕಾರ್ಯಕ್ರಮಕ್ಕೆ ಹಿಂತಿರುಗೋಣ. ಕಲಾವಿದೆಯ ನಾಟ್ಯ ಕಾರ್ಯಕ್ರಮವು ನಿಜವಾಗಿಯೂ ಚೆನ್ನಾಗಿತ್ತು. ಆದರೆ ಅದು ತಮಿಳು ಭರತನಾಟ್ಯವಾಗಿತ್ತು. ಕನ್ನಡ ಭರತನಾಟ್ಯದ ಪ್ರಾರಂಭಕ್ಕೆ ಏನೂ ಸೂಚನೆ ಕಂಡುಬರಲಿಲ್ಲ. ಬಹುಶಃ ಸಂಸ್ಕೃತಿ ಇಲಾಖೆಯಿಂದ ಕಲಾವಿದೆಗೆ ಕನ್ನಡ ಭರತನಾಟ್ಯದ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಕನ್ನಡ ಜನರ ಪದ್ಧತಿಯೇನೆಂದರೆ ಭರತನಾಟ್ಯ ಕಾರ್ಯಕ್ರಮವೇರ್ಪಟ್ಟಾಗ ತಮಿಳು ಭರತನಾಟ್ಯಕ್ಕೆ ಆದ್ಯತೆ ಕೊಡುವುದು. ಆದ್ದರಿಂದ ನಾನು ಕಾದು ಕೂತಿದ್ದೆ. ಕನ್ನಡ ಭರತನಾಟ್ಯಕ್ಕಾಗಿ ವ್ಯರ್ಥವಾಗಿ ಕಾದಿದ್ದು ಕನ್ನಡ ಭಾಗಗಳು ಬರುವ ಸೂಚನೆಯೇ ಇಲ್ಲದ್ದರಿಂದ ಸ್ವಲ್ಪ ಸಮಯದ ನಂತರ ಸಭಾ ಭವನವನ್ನು ಬಿಟ್ಟೆನು.

ಈ ಸಂಗತಿಯಿಂದ ನನಗೆ ದೃಢನಂಬಿಕೆಯೊಂದುಂಟಾಯಿತು. ಕನ್ನಡ ಭರತನಾಟ್ಯ, ಕನ್ನಡ ಶಾಸ್ತ್ರೀಯ ಸಂಗೀತ, ಕನ್ನಡ ಜಾನಪದ ಗೀತೆಗಳು, ಕನ್ನಡ ಸುಗಮ ಸಂಗೀತ ಇವುಗಳನ್ನು ವಿಶಾಲವಾಗಿ ಒಳಗೊಳ್ಳುವ ಕನ್ನಡ ಸಂಸ್ಕೃತಿಯನ್ನು ಮಾತ್ರ ಪ್ರವರ್ತಿಸುವ ಕನ್ನಡ ಸಂಸ್ಕೃತಿ ಇಲಾಖೆಯೆಂದು ಕರೆಸಿಕೊಳ್ಳುವ ಪ್ರತ್ಯೇಕವಾದ ಹೆಚ್ಚುವರಿ ಇಲಾಖೆಯನ್ನು ತೆರೆಯುವ ತುರ್ತು ಅವಶ್ಯಕತೆ ಇದೆ. ಆಗ ಮಾತ್ರ ಕನ್ನಡ ಸಂಸ್ಕೃತಿಯ ಎಲ್ಲ ಭಾಗಗಳಲ್ಲಿ ಮಹತ್ತರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹಾಲಿ ಇರುವ ಇಲಾಖೆಯು ಎಲ್ಲ ಸಂಸ್ಕೃತಿಗಳನ್ನೂ ನೋಡಿಕೊಳ್ಳುತ್ತದೆ. ಏಕೆಂದರೆ ಭಾರತದ ಭವ್ಯವಾದ ಎಲ್ಲ ರಾಜ್ಯಗಳನ್ನೂ ಪ್ರತಿನಿಧಿಸುವ ಪ್ರಾದೇಶಿಕ ಸಂಸ್ಕೃತಿಗಳಿಗೆ ಬೆಂಗಳೂರು ದಕ್ಷಿಣದ ಕೇಂದ್ರ ನಗರವಾಗಬೇಕೆಂದು ನನ್ನ ಅಪೇಕ್ಷೆ.

ನಮ್ಮ ಅಜ್ಜನವರು ತಮ್ಮ ದೊಡ್ಡಕುಟುಂಬದ ಸಮೇತ ೧೯೦೦ರಲ್ಲಿ ಬಸವನಗುಡಿಗೆ ಬಂದು ಹೆಚ್ಚು ಸಂಖ್ಯೆಯ ನಿವೇಶನಗಳನ್ನು ಕೊಂಡು ಅಲ್ಲಿ ನೆಲೆಸಿದರು. ಆಗ ಬಸವನಗುಡಿಯಲ್ಲಿ ಕನ್ನಡ ಸಂಸ್ಕೃತಿಗೆ ಬಲಿಷ್ಠ ಅಸ್ತಿಭಾರವನ್ನು ಹಾಕಿದರು. ಹಾಗೆ ಕನ್ನಡ ಸಂಸ್ಕೃತಿಯೆಂದರೆ ಬಸವನಗುಡಿ ಸಂಸ್ಕೃತಿಯೆಂದೇ ಆಯಿತು. ಬಸವನಗುಡಿಯು ಕನ್ನಡ ಸಂಸ್ಕೃತಿಯ ತೊಟ್ಟಿಲೆಂದು ಖ್ಯಾತವಾಯಿತು. ಒಂದು ಶತಮಾನಕ್ಕಿಂತಲೂ ಹೆಚ್ಚಾಗಿ ಅದು ವೈಭವದಿಂದ ಮೆರೆಯಿತು.

ವರ್ಷಗಳು ಕಳೆಯುತ್ತ ಈ ಬಲಿಷ್ಠ ಸಂಸ್ಕೃತಿಯೂ ಕುಸಿಯಿತು. ಆರ್ಥಿಕವಾಗಿ ದರ್ಬಲವಾದ ಕನ್ನಡ ಸಮಾಜವು ಬಲಿಷ್ಮವಾಗಿ ಮೆರೆದ ಈ ಸಂಸ್ಕೃತಿಯನ್ನು ಬೆಂಬಲಿಸಿ, ಪೋಷಿಸಿ, ಮುಂದುವರಿಸಿಕೊಂಡು ಹೋಗಲು ಅಸಮರ್ಥವಾಯಿತು. ನಿರೀಕ್ಷಿಸಿದ್ದಕ್ಕಿಂತಲೂ ಮೊದಲೇ ಅದು ಕುಸಿಯಿತು.

ಇಂದು ಬಸವನಗುಡಿ ಉತ್ತರ ಭಾರತದ ಸಂಸ್ಕೃತಿಯ ತೊಟ್ಟಿಲಾಗಿದೆ.

ಇತರ ಪ್ರಬಲ ಸಂಸ್ಕೃತಿಗಳ ಬಿರುಗಾಳಿಗೆ ಹಾರಿಹೋಗುವಷ್ಟು ದುರ್ಬಲವಾಗಿದೆಯೇ ಕನ್ನಡ ಸಂಸ್ಕೃತಿ? ಪ್ರತಿಯೊಬ್ಬ ಕನ್ನಡಿಗನೂ ಆತ್ಮಚಿಂತನೆ ಮಾಡಬೇಕಾಗಿದೆ. ಈ ವಿಷಮ ಪರಿಸ್ಥಿತಿಯು ಬೌದ್ದಿಕ ಒತ್ತಾಸೆಯಿಲ್ಲದೆ ಕನ್ನಡ ಸಂಸ್ಕೃತಿಯನ್ನು ಸಂಪದ್ಭರಿತವಾಗಿಸದಿರುವುದರಿಂದಾಗಿದೆ.

೨೫ ವರ್ಷಗಳ ಹಿಂದೆ ಅನಾವೃಷ್ಟಿಯ ಕಷ್ಟದ ಕಾಲದಲ್ಲಿ ಪ್ರಥಮ ವಿಶ್ವಕನ್ನಡ ಮೇಳವನ್ನು ನಡೆಸುವ ಬಗ್ಗೆ ವಿವಾದವಾಯಿತು. ಮಾಮೂಲಿನಂತೆ ರಾಜಕಾರಣಿಗಳು ಕನ್ನಡ ಮೇಳವನ್ನು ರದ್ದು ಮಾಡಲು ಒತ್ತಾಯಿಸಿದರು. ಡಾ|| ಶಿವರಾಮ ಕಾರಂತರು ಮಧ್ಯೆ ಪ್ರವೇಶಿಸಿ ಹೇಳಿದರು. ಕನ್ನಡಿಗರಿಗೆ ಮಸಾಲೆ ದೋಸೆ ಬಗ್ಗೆ ಇರುವ ದೃಢವಾದ ಪ್ರೀತಿ ಮತ್ತು ಬೇರೆ ಎಲ್ಲವನ್ನೂ ಬದಿಗೊತ್ತುವ ಆದ್ಯತೆಯು ಲೇಶ ಮಾತ್ರವೂ ಕಡಿಮೆಯಾಗಿಲ್ಲ. ಅತ್ಯಂತ ತೀಕ್ಷ್ಣವಾದ ಅನಾವೃಷ್ಟಿಯ ಕಾಲದ ಪರಿಸ್ಥಿತಿಯಲ್ಲೂ ದೋಸೆಕ್ಯಾಂಪ್ನಲ್ಲಿ ಅವರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಹಲವಾರು ಅಡ್ಡಿಗಳನ್ನು ದಾಟಿದ ಮೇಲೆ ಮಂಜೂರಾತಿಯನ್ನು ಪಡೆದ ವಿಶ್ವ ಕನ್ನಡ ಮೇಳದ ರದ್ಧತಿಯನ್ನೂ ಒತ್ತಾಯಿಸುತ್ತಾರೆ. ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯದ ಬಗೆಗಿನ ಪ್ರೀತಿ ಒಂದು ಕ್ಷಣದಲ್ಲೇ ಮಾಯವಾಗುತ್ತದೆ.

ಡಾ|| ಕಾರಂತರ ಮಾತು ಕನ್ನಡಿಗರನ್ನು ನಾಚಿಕೊಳ್ಳುವಂತೆ ಮಾಡಿತು. ಮೇಳದ ರದ್ಧತಿಯ ಮಾತು ನಿಂತಿತು. ಮೇಳ ನಡೆದು ವೈಭವ ಮತ್ತು ಯಶಸ್ಸನ್ನು ಕಂಡಿತು.

ಮಸಾಲೆದೋಸೆ (MS-DOS) ಮೇಲಿನ ಹುಚ್ಚು ಪ್ರೀತಿ ೨೧ನೇ ಶತಮಾನದ ಕನ್ನಡಿಗರಿಗೆ ಇರುವುದು ನಿಜವೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ೨೦ನೇ ಶತಮಾನದ ಕನ್ನಡಿಗರಿಗೆ ಅದು ತುಂಬ ನಿಜವಾಗಿತ್ತು.

ಕನ್ನಡ ಸಂಸ್ಕೃತಿ ಕವಲುದಾರಿಯಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಆದರೆ ಎತ್ತ ಸಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ.

ರಾಷ್ಟೀಯ ನಾಟಕ ಶಾಲೆ ದಕ್ಷಿಣ ಬೆಂಗಳೂರಿನಲ್ಲಿ ಸ್ಥಾಪಿತವಾಗಬಹುದೆಂದು ತಿಳಿದಿದ್ದೆ. ದಕ್ಷಿಣ ಬೆಂಗಳೂರಿನ ರಾಜಕಾರಣಿಗಳ ಅನಾಸಕ್ತಿಯಿಂದ ಉತ್ತರ ಬೆಂಗಳೂರಿಗೆ ಅದು ಹೋಯಿತು. ೧೯೫೦ರ ವರ್ಷಗಳಲ್ಲಿ ನಾಟಕದ ಕಾರ್ಯದರ್ಶಿಯಾಗಿ ನಾನಿದ್ದಾಗ ನ್ಯಾಷನಲ್ ಹೈಸ್ಕೂಲ್ ಒಳಾಂಗಣದಲ್ಲಿ ಕನ್ನಡ ನಾಟಕಗಳ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೆವು. ಜನರ ಪ್ರತಿಕ್ರಿಯೆ ತುಂಬ ಚೆನ್ನಾಗಿತ್ತು. ಜನರು ಮೆಚ್ಚಿ ಸಂತೋಷಪಡುತ್ತಿದ್ದರು. ಅಂಗಳವು ಭರ್ತಿಯಾಗು ತ್ತಿದ್ದವು. ಕನ್ನಡ ನಾಟಕಗಳು NSD (ರಾಷ್ಟೀಯ ನಾಟಕ ಶಾಲೆ)ಯಲ್ಲಿ ಏರ್ಪಟ್ಟರೆ, ಟಾಸ್ಕರ್ ಟೌನ್, ಪ್ರೇಸರ್ ಟೌನ್ ಮತ್ತು ಬೆನ್ಸನ್ ಟೌನ್ಗಳ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಮೆಚ್ಚಿದರೆ ಕನ್ನಡ ನಾಟಕಕ್ಕೆ ಮನ್ನಣೆ ಮೆಚ್ಪಿಗೆಗಳಿಂದ ಮೆರೆಯುವುದೆಂದು ನನ್ನ ಆಶೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸಗಾದೆಗಳು
Next post ಜಾತಕ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…