ರಾಜಮಾರ್ಗಗಳಿರುವುದು ವೇಗವಾದ ವಾಹನಗಳಿಗೆ
ಒಳಮಾರ್ಗಗಳಿರುವುದು ಎತ್ತಿನ ಗಾಡಿಗಳಿಗೆ ನಗ್ನಪಾದಗಳಿಗೆ
ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ
ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ
ಬಹು ಉದ್ದೇಶಪೂರ್ಣವಾದುವು ರಾಜಮಾರ್ಗಗಳು
ಉದ್ದೇಶರಹಿತವಾಗಿ ಬಿದ್ದಿರುವುವು ಒಳಮಾರ್ಗಗಳು
ರಾಜಧಾನಿಗೆ ಹೋಗುವುವು ರಾಜಮಾರ್ಗಗಳು
ಹೊರಟಲ್ಲಿಗೇ ಹೊರಡುವುವು ಒಳಮಾರ್ಗಗಳು
ರಾಜಮಾರ್ಗಗಳು ಬಹಳ ಶುಚಿಯಾಗಿರುತ್ತವೆ
ಒಳಮಾರ್ಗಗಳು ಧೂಳಿನಿಂದ ತುಂಬಿರುತ್ತವೆ
ಅವು ಪೊದೆಗಿಡಗಳ ನಡುವೆ ಮರೆಯಾಗುತ್ತವೆ

ಇಂಥ ಒಳಮಾರ್ಗದಲ್ಲಿ ನಾನು ಕೆರೆಗಳನ್ನು ಕಂಡೆ
ಕೆರೆಯೇರಿಯಲ್ಲಿ ಕುಳಿತ ಕಪ್ಪೆಗಳನ್ನು ಕಂಡೆ
ಅವು ಮೋಡಗಳನ್ನು ಕರೆಯುವುದನ್ನು ಕಂಡೆ
ಮೋಡಗಳ ನೆರಳು ಸರಿಯುವುದನ್ನು ಕಂಡೆ
ಸೂರ್ಯಕಾಂತಿ ಹೂ ತಿರುಗುವುದನ್ನು ಕಂಡೆ
ಹೊನ್ನೆಮರಗಳ ತುಂಬ ಮಿಂಚುಗಳನ್ನು ಕಂಡೆ
ಗೋರಿಗಳ ಮೇಲೆ ಹುಲ್ಲು ಬೆಳೆಯುವುದನ್ನು ಕಂಡೆ
ಆದ್ದರಿಂದ ಇನ್ನೆಂದಿಗೂ ರಾಜಮಾರ್ಗವನ್ನು
ಸೇರದವನಾಗಿದ್ದೇನೆ. ಆದರೂ ಚಳಿಗಾಲದ
ಮುಂಜಾವಗಳಲ್ಲಿ ಕೇಳಿಸುತ್ತದೆ ಕೆಲವೊಮ್ಮೆ
ರಾಜಧಾನಿಗೆ ಹಾಯುವ ವಾಹನಗಳ ಸದ್ದು-ನನಗೂ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)