ಹಬ್ಬ ಬಂತು, ಓ ಹಬ್ಬ! ಕೆಳೆಯರೇ,
ತೋರಣ ಕಟ್ಟೋಣ!
ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ
ತೋರಣ ಕಟ್ಟೋಣ!

ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ,
ತೋರಣ ಕಟ್ಟೋಣ;
ಬೆಳಗಿನ ಜಾವ ಮುಗಿಯುವ ಮುನ್ನ
ತೋರಣ ಕಟ್ಟೋಣ!

ಚುಕ್ಕಿಯಾಗಸದೆ ಮಾಸುವ ಮುನ್ನ
ತೋರಣ ಕಟ್ಟೋಣ;
ಹಕ್ಕಿ ಗೂಡಿನಲಿ ಎಚ್ಚರುವ ವೇಳೆ
ತೋರಣ ಕಟ್ಟೋಣ!

ಕೆಂಪು ಮೂಡಲಲಿ ಹುಟ್ಟುವ ಹೊತ್ತಿಗೆ
ತೋರಣ ಕಟ್ಟೋಣ;
ತಂಪು ಹೊತ್ತಿನಲೆ ಸೊಂಪು ತಳಿರಿನ
ತೋರಣ ಕಟ್ಟೋಣ!

ಎಲ್ಲರೊಂದಾಗಿ ಉಲ್ಲಸದಿಂದ
ತೋರಣ ಕಟ್ಟೋಣ;
ನಲ್ಲ ನಲ್ಲೆಯರು ಏಳುವ ಮೊದಲೆ
ತೋರಣ ಕಟ್ಟೋಣ!

ಅಕ್ಕ ರಂಗೋಲಿಯಿಕ್ಕುವ ಮೊದಲೆ
ತೋರಣ ಕಟ್ಟೋಣ;
ಚಿಕ್ಕ ಮಕ್ಕಳೇಳುವ ಹೊತ್ತಿಗೆ ಹೊಸ
ತೋರಣ ಕಟ್ಟೋಣ!

ಸುಂದರಾಂಗಿಯರ ಚೆಂದದ ಹಬ್ಬಕೆ
ತೋರಣ ಕಟ್ಟೋಣ;
ನಂದಗೋಕುಲವ ಹೋಲುವ ಮನೆಗೆ
ತೋರಣ ಕಟ್ಟೋಣ!

ದೇವ ದೇವನಾನಂದದ ಹಬ್ಬಕೆ
ತೋರಣ ಕಟ್ಟೋಣ;
ಪಾವನಮೂರ್ತಿ ಮನೆಗೆ ಬರುವನು
ತೋರಣ ಕಟ್ಟೋಣ!

ಹೊಸತು ಹಬ್ಬವಿದೊ ಕನ್ನಡ ಹಬ್ಬಕೆ
ತೋರಣ ಕಟ್ಟೋಣ!
ಒಸಗೆಯಾಗಲಿದೆ ನಾಡು ನಾಡಿಗೇ
ತೋರಣ ಕಟ್ಟೋಣ!

ಸಾಲು ಹಬ್ಬದಲಿ ಸಾಲು ಸಾಲಾಗಿ
ತೋರಣ ಕಟ್ಟೋಣ;
ಸಾಲ ಸೋಲಗಳು ಇದ್ದರೆ ಇರಲಿ
ತೋರಣ ಕಟ್ಟೋಣ!

ಪಂಚ ಭಕ್ಷ್ಯ ಇಲ್ಲಾ ಎನಲೇತಕೆ?
ತೋರಣ ಕಟ್ಟೋಣ!
ವಂಚನೆಯಿಲ್ಲದ ಬದುಕಿನ ಹಬ್ಬಕೆ
ತೋರಣ ಕಟ್ಟೋಣ!

ಮನೋಮಂದಿರಕೆ ನಿಚ್ಚ ಹಸುರಿನಾ
ತೋರಣ ಕಟ್ಟೋಣ!
ಹೃದಯ ಕಲಶದಾ ಮುಂಗಡೆ ಹರುಷದ
ತೋರಣ ಕಟ್ಟೋಣ!

ಬಂದಿತು ಬಿಡುಗಡೆ! ಬಿಡುಗಡೆ ಹಬ್ಬಕೆ
ತೋರಣ ಕಟ್ಟೋಣ!
ನಾಡು ನಗುತಿರಲಿ! ಅಶೋಕನ ತಳಿರಿನ
ತೋರಣ ಕಟ್ಟೋಣ!
*****