ಹಿಂಬಾಲಿಸಿಕೊಂಡು
ಓಡುತ್ತಲೇ ಬಂದೆ
ಗುಡ್ಡಗಳನೇರಿ ಕಣಿವೆಗಳನಿಳಿದು
ಮುಳ್ಳುಕಲ್ಲುಗಳ
ದಾರಿಯಲ್ಲದ ದಾರಿಯಲ್ಲಿ
ಅವಳ ನೆರಳು ಹಿಡಿದು
ಅವಳ ಅಲೌಕಿಕ ವಾಸನೆಯ ಬೆಂಬತ್ತಿ
ಅವಳ ಸೆರಗು ಚುಂಗು
ಸಿಕ್ಕಿತೆಂದು ತಿಳಿದು ಸಿಗಲಾರದ
ಸೀರೆ ದಾರಿಯ ಹಿಡಿದು
ಓಡೋಡುತ್ತಲೇ ಬಂದೆ
ಹೊತ್ತೇರಿ ಇಳಿಮುಖವಾಗುತ್ತ ಬಂತು
ನೂಪುರ ಗೆಜ್ಜೆ ಸಪ್ಪಳ
ಕೇಳುತಿದೆ ಅಸ್ಪಷ್ಟ
ಅವಳ ಹೆಜ್ಜೆಯ ನಡಿಗೆ ಎದೆಬಡಿತ
ಕೇಳಿಯೂ ಕೇಳಿಸದಂತೆ
ಸರ್‌ಭರ್ರೆಂದು ವಾಹನಗಳು ಹಾಯುತಿವೆ
ಕೂಗು ಚೀರಾಟ ಭೋರಾಟ
ಸಂತೆ ಗದ್ದಲಗಳ ನಡುವೆ
ಅಡಗಿ ಹೋಗುತಿದೆ
ಮತ್ತೆಲ್ಲೋ ಕ್ಷೀಣದನಿ
ಆಲಿಸಿ ಕಿವಿಯಗಲಿಸಿ ಓಡುತ್ತೇನೆ
ಕಣ್ಣು ಮುಚ್ಚುವುದರೊಳಗೆ
ಕಾಲು ಕುಸಿಯುವುದರೊಳಗೆ
ಅವಳು ಸಿಗುವಳೇನೋ
ಎಂಬ ಅಶೆಯಿಂದ
*****