ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ!
ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ!
ಜಗದ ಬಾಗಿಲು… ಪುರಾತನ ತೊಟ್ಟಿಲು.
ಕೈಲಾಸಕೆ ಮೆಟ್ಟಿಲು.
ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ,
ಜಾಂಬುವಂತ, ಮಾದರಚೆನ್ನಯ್ಯ, ಬಡ್ವಿಲಿಂಗಮ್ಮ, ಅರುಂಧತಿ,
ಶಬರಿ, ಬಾಲನಾಗಮ್ಮ…
ಅಂಬೇಡ್ಕರ್, ಕರಿಯನಂಥಾ ಮನುಜರು!
ಕೇರಿಗಿಂಥಾ ಜನ್ರು ದೇವರಂಥವ್ರು!
ಜಗಕೆ ಮಾನ ತಂದವ್ರು…
ಎಲ್ಲಿ ಸಿಗುವರೋ… ಕೋಟಿಗೊಬ್ರು…
ಹಲಸು, ಮಾವು, ಹುಲುಸು ಜನರು!
ಬುದ್ಧ, ಬಸವ, ಗುರುನಾನಕ, ಪೈಗಂಬರ್, ಯೇಸುಕ್ರಿಸ್ತ,
ಗಾಂಧೀ, ನೆಹರು, ರಾಮ, ಕ್ರಿಷ್ಣ ನಡೆದ ಕೇರಿಯು!
ಊರುಕೇರಿ ಎರಡು ಕಣ್ಣಕಣಗಳ ಬಟ್ಟಬಯಲೋ…
ಕಣ್ಣ ರೆಪ್ಪೆಯಂದದಿ ಪ್ರತಿಕ್ಷಣದಿ ಬಡಿವಾ ಜೋಡಿಯು!
ಹಗಲುರಾತ್ರಿ ಮಿಡಿವಾ ಹೃದಯಸ್ತಂಭ!
ಕೇರಿಯೆಂಬುದೇ ಇಂದ್ರನ ವಡ್ಡೊಲಗ!
ನಿನ್ನಂಥಾ ಕಡು ಪಾಪಿ, ನತದೃಶ್ಟ,
ಈ ಜಗದೀ, ಬೇರೆ ಇಹನೇ??
ದೇಹದಾ ತುಂಬಾ, ನವರಂಧ್ರಗಳೇ…!
ಹೊಸಲಸು ತುಂಬಿದಾ ಮಾಂಸದ ಮುದ್ದೆಯೇ?!
ನಿನಗೆ ನಿದ್ದೆ ಹೇಗೆ ಬರುವುದಯ್ಯ??
ಥೂ! ಮನುಶ್ಯನೆಂಬಾ ಕಳಂಕದಾಪಟ್ಟ ಹೊತ್ತು,
ಹೊಲಗೇರಿಯೆಂಬಾ, ಹಣೆಪಟ್ಟಿಗೇ ಹೆದರಿ,
ಕೇರಿ ಹೊರಗೆ, ನಿಂತಾಪಾಪಿ ನೀ…
ಶತ ಶತಮಾನದ ಶಾಪ! ಏನೀದರ ಆಳಾ… ಅಗಲವಯ್ಯ??
ಈ ರಾಮನ ‘ಕೊಳೆ’ ಕಳೆವ,
ಪರಿಪರಿಯನೆಂತೂ ತಿಳಿಸು ಗೆಳೆಯಾ??
ಶತಶತಮಾನಗಳೇ… ಕಳೆದವಲ್ಲ,
ಈ ಕಂದಕ ಮುಚ್ಚಲಿಲ್ಲ!!
ಇಲ್ಲಿ ಕನಸ್ಸುಗಳು, ಕನವರಿಕೆಯ ಕೊಳ್ಳಿದೆವ್ವಗಳೇ…
ಹಂದಿ, ನಾಯಿ, ಮೀನು, ಕಾಗೆ, ಗೂಬೆಗೂ ಕಡೆಯಾದನೇ ಮನುಜನೀ…
ಒಮ್ಮತ… ಒಗ್ಗಟ್ಟಿಗೆ, ದಿವ್ಯ ಔಷದಿಯಿರೆ, ತಿಳಿಸಯ್ಯ ಹೆಳೆಯನೇ…
*****
- ಹಳ್ಳಿ… - August 11, 2019
- ಡಿಪೋದೊಳಗಣ ಕಿಚ್ಚು… - May 26, 2019
- ಅಮ್ಮ - March 10, 2019