ಯಾರು ಸೃಷ್ಟಿಯ ಹೀಗೆ ಹೂಡಿದವನು
ಅದರ ನಡಿಗೆಗೆ ತಾಳ ನೀಡಿದವನು?

ಯಾರು ದೇಹದಿ ಜೀವ ಇರಿಸಿದವನು
ಜೀವದಲಿ ಭಾವವ ಮೊಳೆಸಿದವನು
ನೊಂದರೂ ಮಾಯುವ
ಕನಸನ್ನು ನೇಯುವ
ಸತ್ವವನು ಮನಸಿನಲಿ ಬೆಳೆಸಿದವನು?

ನಿದ್ದೆಯಲು ನಮ್ಮನ್ನು ಕಾಯುವವನು
ಎದ್ದ ಮೇಲೂ ಸ್ಮರಣೆ ಉಳಿಸುವವನು
ನಾನು ನಾನೆನ್ನುವ
ಹಮ್ಮಿನಾ ಗೂಡಿನೊಳು
ತನ್ನ ನೆನೆವ ವಿವೇಕ ಮೊಳೆಸಿದವನು?

ಗಗನದಲಿ ಚಿಕ್ಕೆಗಳ ತೂರಿದವನು
ಬಗೆಯಲ್ಲಿ ಸೊಕ್ಕುಗಳ ಊರಿದವನು
ಎಲ್ಲಿ ಹೋದರೂ ನಮ್ಮ
ಬೆನ್ನಲ್ಲೆ ತಾನಿರುತ
ವಿಶ್ವಕೂ ಹತ್ತಿಂಚು ಮೀರಿದವನು?
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)