ಇಂಥ ಮಿಂಚನು ಹಿಂದೆ ಕಾಣಲಿಲ್ಲ
ಇಂಥ ಮಧುಮಯ ಕಂಠ ಕೇಳಲಿಲ್ಲ
ಈ ರೂಪಸಿಯ ಹೆಸರು ರಾಧೆಯಂತೆ
ಹೊಳೆಯುವಳು ನಟ್ಟಿರುಳ ತಾರೆಯಂತೆ
ಗೋಪಿಯರ ನಡುವೆ ಬರಲು ಇವಳು
ಮಣಿಮಾಲೆಯಲ್ಲಿ ಕೆಂಪು ಹರಳು!
ನನ್ನ ಆಡಿಸಲಿಲ್ಲ ಹೀಗೆ ಯಾರೂ
ಸುಖಕೆ ಜೋಡಿಸಲಿಲ್ಲ ಹೀಗೆ ಯಾರೂ
ನಾ ನನ್ನ ಕೊಳಲಲ್ಲಿ ಅರಳುವಂತೆ
ಒಳಗೆ ಸುಳಿದಳು ಸ್ವರ್ಗ ತೆರೆಯುವಂತೆ
ನನ್ನೊಂದು ಅಂಶವನೆ ಕಂಡೆನೇನೋ
ಒಳಗಿನಾನಂದವನೆ ಉಂಡೆನೇನೋ
ನನ್ನ ಮಾಯೆಯೆ ನನ್ನ ವರಿಸಿ ಬಂತೋ
ಸೃಷ್ಟಿಯ ಸೊಬಗನ್ನ ತಣಿಸಬಂತೋ!
*****