ಇಲ್ಲೇ ಇರಬೇಕನಸತೈತೆ, ಇಲ್ಲೇ ಬಾಳಬೇಕನಸತೈತೆ
ಎಳೇ ಬಿಸಿಲು ಕಾಸಿಗೊಂತ, ಬೆಳೆಯೋ ಪೈರು ನೋಡಿಕೊಂತ

ಹೂವು ಹೂವು ಮೂಸಿಗೊಂತ, ಹಣ್ಣ ರಸವನಿಂಟಿಗೊಂತ
ಮ್ಯಾಲಿನ ಸಿಪ್ಪೆ ಸುಲಕೋಂತ, ಬಾಳೇ ಹಣ್ಣ ನುಂಗಿಕೊಂತ

ಮಲೇ ಮಲೇನೇರಿಕೊಂತ ಹಳ್ಳಕೊಳ್ಳದಾಗ ಹಾವಾಡಿಕೊಂತ
ಹಸರ ಹಾಸಿಗೀ ಒರಗಿಕೊಂತ ಹಳದೀ ಕೆಂಪು ಹೊದ್ದುಕೊಂತ

ಪಕಳೆ ಪಕಳೆ ಬಿಚ್ಚಿಗೊಂತ ಹೂವಿನ ಹುಡಿ ಹಚ್ಚಿಗೊಂತ
ಮೈಯಲಿ ಮನಸು ಹೊಸೆದುಕೊಂತ ಕನಸು ನನಸು ಬೆಸೆದುಕೊಂತ

ಗಾಯ ಮುಟ್ಟಿ ಹಾಯೆನುಕೊಂತ ಕಾಯ ತಟ್ಟಿ ಜುಮ್ಮೆನುಕೊಂತ
ವಾಸನೆಗಳಿಗೆ ಮೊಗೇರಿಸಿಗೊಂತ ವ್ಯಸನಗಳಿಗೆ ತೋಳೇರಿಸಿಗೊಂತ

ಮಾತು ಮಾತಿನ್ಯಾಗ ಕೊಚ್ಚಿಗೊಂತ ಹೆಜ್ಜೆ ಹೆಜ್ಜೆ ಎಡವಿಕೊಂತ
ಕೊಟ್ರೆ ದೇವರನ ಹೊಗಳಿಕೊಂತ ಬಿಟ್ರೆ ಅವನ್ನ ಉಗುಳಿಕೊಂತ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)