ಪೋಸ್ಟಾಪೀಸಿಗೆ ದಿನಾ ಮಧ್ಯಹ್ನ ಬಸ್ಸಿನಲ್ಲಿ
ಟಪ್ಪಾಲಿನ ಗೋಣಿಚೀಲ ಬರುತ್ತದೆ.  ಪೇದೆ
ಅದನ್ನು ಒಡೆದು ಕೊಡವಿ ಹಾಕುತ್ತಾನೆ.  ಕಾಗದಗಳ
ಕಟ್ಟು ಕೆಳಕ್ಕೆ ಬೀಳುತ್ತದೆ.  ಪೋಸ್ಟ್
ಮಾಸ್ತರರು ಒಂದೊಂದಕ್ಕೇ ಸೀಲು ಹಾಕುತ್ತಾರೆ.
ನಂತರ ಒಂದೊಂದನ್ನೇ ವಿಂಗಡಿಸುತ್ತಾರೆ.
ಕಾರ್ಡುಗಳಿವೆ, ಇನ್ಲೇಂಡುಗಳಿವೆ, ಕವರುಗಳಿವೆ.
ಕೆಲವು ಹೊಸ ರೀತಿಯ ಸ್ಟಾಂಪುಗಳು.  ನಾವು
ಕುತೂಹಲದಿಂದ ಕಾಯುತ್ತೇವೆ:
ನಮಗೆ ಕಾಗದವಿದೆಯೇ, ಏನಾದರೂ
ಇದೆಯೇ ಎಂದು.  ಕಾರಣ ನಮ್ಮ ಪೋಸ್ಟಾಪೀಸಿಗೆ
ಕೆಲವೊಮ್ಮೆ ಡೆಲ್ಲಿ ಮೊದಲಾದ
ದೂರದ ಊರುಗಳಿಂದ ಕಾಗದಗಳು
ಬರುತ್ತವೆ, ಪಾರ್ಸೆಲುಗಳು ಬರುತ್ತವೆ.
ನಮಗೆ ಮಾತ್ರ ಡೆಲ್ಲಿ ಎಷ್ಟು ದೂರ ಎಂದು
ಗೊತ್ತಿಲ್ಲ.  ಪೋಸ್ಟಾಪೀಸಿನೊಳಗಿರುವ
ಆ ದೊಡ್ಡ ದೇವದಾರು ಪೆಟ್ಟಿಗೆಯೊಳಗೆ
ಏನಿದೆ ಎಂದು ಗೊತ್ತಿಲ್ಲ.
*****