ಶವಪರೀಕ್ಷೆ

ನೀರು ಕಾಯುತ ನೋಡಲು
ಬಚ್ಚಲಿಗೆ ಹೋದೆ
ಉರಿ ಕೊನೆತನಕ ಬಂದು
ಕಟ್ಟಿಗೆ ಕೈಹಿಡಿಯಷ್ಟು ಉಳಿದು
ಒಲೆಯಿಂದ ಹೊರಗೆ ಬಿದ್ದಿದೆ;
ಥಟ್ಟನೆ ವಯಸ್ಸಾಯಿತೆನ್ನಿಸಿತು
ಸರಿದ ಬದುಕ ತಲೆಗೆ ಕರೆದು
ದುರ್ಬೀನಡಿಗೆ ದಬ್ಬಿ ಹುಡುಕಿದೆ.
ಒಂದು ಮಲ್ಲಿಗೆ
ಒಂದು ಗುಲಾಬಿ
ಇಲ್ಲದಿದ್ದರೆ ಸಾಯಲಿ
ಗಾಯ ಮಾಯಲಿ
ಎಂದು ತೇಯ್ದು ಹಚ್ಚಲು ಎಂಥದೋ ಮೂಲಿಕೆ-
ಇಪ್ಪೇ ಸಿಕ್ಕು ಉಳಿದೆಲ್ಲ ಸುಟ್ಟರೂ
ಅಷ್ಟೇ ಗಳಿಕೆ ಎಂದು
ಕಣ್ಣು ತಿಕ್ಕಿ ತಿಕ್ಕಿ
ಹೆಣದ ಮೈಯ ಪ್ರತಿಕಣ ಹೆಕ್ಕಿ ಹೆಕ್ಕಿ ಹುಡುಕಿದೆ
ಮೂವತ್ತು ಗ್ರೀಷ್ಮಗಳ ಭೀಷ್ಮ ಬಯಲಲ್ಲಿ
ಸುಟ್ಟ ಕವಿಸಮಯಗಳ ಎಷ್ಟೋ ಹಾಳೆ
ಆ ಕೂಳೆಗೇ ಬಾಯಿಟ್ಟು ತಡಕುವ
ಹಸು ಹೆಸರಿನ ಹಿಂಡುಮೂಳೆ
ಕಂಡು ರಕ್ತ ಛಿಲ್ಲೆನಿಸಿತು. ಮಿಂದೆ
ಕಾದ ನೀರ ಹನಿ ಹನಿಯೂ ಮಣ ಉಪಕಾರವೆನಿಸಿತು
ಬಾಳು ಕೊರಡಲ್ಲ ಎಂದು ನಾಚಿದೆ.
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತ್ಯಾಗ
Next post ಲಕ್ಷ್ಮೀಶ ಕವಿ

ಸಣ್ಣ ಕತೆ