Home / ಕವನ / ಕವಿತೆ / ಒಂದು ಪೇಟೆಯೆಂದರೆ

ಒಂದು ಪೇಟೆಯೆಂದರೆ

ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ
ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ
ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ

ಅದರಿದರ ಮಿದುಳು ಯಾವುದೋ ನಾನು ಕಾಣೆ
ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ,
ರೈಲು ನಿಲ್ದಾಣವೆ, ಅಥವ ಕಾವಿ ಬಳಿದ ಪೋಲೀಸು ಠಾಣೆ?

ಮಿದುಳಿರುವುದಕ್ಕೆ ಇದೇನೂ ಸಾವಯವ ಜೀವಿಯಲ್ಲ ಖರೆ
ಬಹುಶಃ ಇದ್ದೀತು ಇದು ಬೆಳೆದುಬಂದ ರೀತಿ ಸರಿಯಲ್ಲದೆ, ಅಥವ
ನಾವು ಮಾಡಿದ ಹೋಲಿಕೆಯಲ್ಲಿ ಏನೊ ತೊಂದರೆ

ಇದ್ದರೂ ಇರಬಹುದು.  ಆದರೂ ಈ ಸ್ಥಾವರಕ್ಕೆಷ್ಟು ನೆನಪು
ಕದಂಬರು ನಿಲ್ಲಿಸಿದ ಶಾಸನ ಮತ್ತೆ ಯಾರೋ ಹೇರಿಸಿದ ಮದರಾಸು
ಸಂಸ್ಥಾನ, ನಿನ್ನೆ ಮೊನ್ನೆ ಈ ಕಡೆ ಬಂದವನು ಟಿಪ್ಪು

ಇದು ಚರಿತ್ರೆ.  ಚರಿತ್ರೆಯೊಂದೇ ನೆನಪಲ್ಲ.  ನೆನಪು ಉಪ್ಪಿನ ಹಾಗೆ
ಸಮುದ್ರದಿಂದ ಮೊಗೆದುದು ಅಥವ ಭೂಮಿಯೊಳಗಿಂದ ಅಗೆದುದು
ಮೈಯಲ್ಲಿ ಕರಗಿರುವುದು, ಹರಳುಗಟ್ಟುವುದಿಲ್ಲ ಒಳಗೆ

ತಲೆಹೊರೆಯಾಗಿ ಇಲ್ಲಿಗಿದು ಬಂತು ಈ ನೆನಪು ಬಳಸು ದಾರಿ
ಸಾಗಿ, ನೆಲಕ್ಕೆ ಸುರಿದ ಇಲ್ಲವೇ ಉಟ್ಟ ವಸ್ತ್ರಕ್ಕೆ ಒರಸಿದ ಬೆವರಾಗಿ
ಕಣ್ಣ ಒಸರಿನಲ್ಲಷ್ಟು ನಡೆಯೆಬ್ಬಿಸಿದ ಧೂಳಿನಲ್ಲಷ್ಟು ಸೇರಿ

ಬಂದರೆ ಆಲ ಅಶ್ವತ್ಥ ಗುಡಿಗುಡಾರಗಳು ಗದ್ದೆ ಬಯಲು
ಗಡಿ ಗಡಿಗೆ ಒಮ್ಮೆ ನಿಲ್ಲಿಸಿದ್ದ ಹೊರೆಕಂಬಗಳು
ಮತ್ತೆ ನಸುಕಿಗೇ ಕಟ್ಟಿದ ಎತ್ತಿನ ಗಾಡಿಗಳ ಸಾಲು

ಈ ನೆನಪಿನ ಸಾಕ್ಷಿ.  ಹೀಗೆ ಈ ಪೇಟೆಯ ನರಗಳಿಗೆ ಎಲ್ಲೆಲ್ಲೂ
ಸಾಗಿ ಸೆಣೆದು ಸೇರುವಾತುರ ಈ ಹೊರೆ ಹೊತ್ತು ಆ ಅಗೋಚರ ಕೇಂದ್ರ
ಯಾವ ಅರೆಗನಸಿನ ತೆಕ್ಕೆಯಲ್ಲೊ ಯಾವ ಕೊಚ್ಚೆಯ ಮಗ್ಗುಲಲ್ಲೊ

ಸೇರುವುವು ಸೇರಲೇಬೇಕಾಗಿ.  ಒಂದು ಪೇಟೆಯೆಂದರೆ ನೆಲ
ಸಾರಿಸಿ ಹಾಕಿದ ರಂಗೋಲಿಯಲ್ಲ, ಟೇಬಲಿನ ಮೇಲೆ ಹೊಳೆಯುವ
ತಾಟಿನಲ್ಲಿ ನೀಟಾಗಿ ಕತ್ತಿರಿಸಿಟ್ಟ ಕಸಿಮಾವಿನ ಹಣ್ಣಲ್ಲ

ಒಂದು ಪೇಟೆಗೆ ತನ್ನದೇ ಎದೆಬಡಿತವಿದೆ.  ಕೇಳಿಲ್ಲವೇ ನಾವದನ್ನು
ಒಂಟಿಯಾಗಿ ಎಲ್ಲಿಂದೆಲ್ಲಿಗೆ ಸಾಗುವ ರಾತ್ರಿ ಉಗಿಬಂಡಿಯ
ಭಾರವಾದ ಕಾಲಸಪ್ಪಳದಲ್ಲಿ ಮಿಳಿಯುವುದನ್ನು

ಕಂಡಿಲ್ಲವೇ ಅದು ಮುದುಕುವುದು ಘಟ್ಟದ ಕೆಳಗೆ ಮಳೆ ಬೀಳುವ ಇರುಳು
ವೃದ್ಧನಂತೆ ಅಥವ ತೆರೆಯುವುದಂಗಾತ ಹೆಣ್ಣಿನಂತೆ
ಮುಂದೊತ್ತುವಾಗ ಯಕ್ಷಿಣೀ ಲಾಂದ್ರದ ನೆರಳು

ಒಂದು ಪೇಟೆಯೆಂದರೆ ಬರೇ ಅಂಗಡಿಬೀದಿಗಳಲ್ಲ.  ಇದರ ವಸ್ತು
ಈ ಹೊಗೆಹಿಡಿದ ಹಂಚಿನ ಮತ್ತು ಮುಳಿಮನೆಗಳ ಬದಿಗೆ
ಅಡ್ಡಾದಿಡ್ಡಿ ಹೆಜ್ಜೆಗಳಲ್ಲಿ ಮೂಡಿದ ಪ್ರತ್ಯೇಕ ಗುರುತು

ಒದಗಬೇಕಷ್ಟೆ ಇಲ್ಲಿ ನಡೆವವರಿಗೆ ಮಾತ್ರ.  ಎಷ್ಟೆ
ಹೊರಟರೂ ಮತ್ತೆ ತನ್ನ ಒಳಪ್ರಾಕಾರಗಳಲ್ಲಿ ಸುತ್ತಿಸುವ ಕೋಟೆ
ನೀವೇ ಹೇಳಿದಂತೆ ನಮಗೆ ವಿಧಿಸುವುದು ನಾವು ಕಲ್ಪಿಸಿದ ಪೇಟೆ
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...