ನನ್ನ ಹಿಂದೆಯೇ ಈ ಗೋಪಿಯರು
ಸದಾ ತಿರುಗುವುದು ಯಾಕಮ್ಮಾ?
ಬೇಡ ಎಂದರೂ ಕೈಹಿಡಿಳೆದು
ಗಲ್ಲ ಸವರುವರು ಸರಿಯಾಮ್ಮಾ?

ನಾಚಿಕೆ ಇಲ್ಲದೆ ಹೆಣ್ಣುಗಳಮ್ಮಾ
ಬಾಚಿ ತಬ್ಬುವರು ಮೈಯನ್ನು,
ಕಣ್ಣಿಗೆ ಕಣ್ಣು ಸೇರಿಸಿ ನಗುವರು
ಮೆಲ್ಲಗೆ ಕೆನ್ನೆಯ ಹಿಂಡುವರು.

ಸಾಕು, ಬೇಡ ಎಂದು ತಡೆದರೂ
ಬೆಣ್ಣೆ ತುರುಕುವರು ಬಾಯಲ್ಲಿ,
ಹಣ್ಣನು ತಿನ್ನಿಸಿ ಹಾಲನು ಕುಡಿಸಿ
ನನ್ನನೆ ಬೈವರು ಕಡೆಯಲ್ಲಿ

ಹಾಲು ಬೆಣ್ಣೆ ಏನನ್ನೂ ನಾ
ಕದ್ದಿಲ್ಲಾಮ್ಮ ಕದ್ಧಿಲ್ಲ
ನನ್ನನು ದೂರುವ ಈ ಮಳ್ಳಿಯರ
ಬೈದು ಹೊರಕ್ಕೆ ತಳ್ಳಮ್ಮ.

*****