ಯಾವ ನಲಿವು ನನ್ನ ಹೀಗೆ
ತಬ್ಬಿ ಹಿಡಿದಿಹುದು
ಸಹಿಸಲಾಗದಂಥ ಮಧುರ
ನೋವು ಕೆರಳಿಹುದು?

ಬೀದಿಜನರು ಕೈ ತೋರುವ
ಮನೆಯ ತನಕ ಬಂದು
ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು
ಇಷ್ಟು ದಿನದ ಧ್ಯಾನಕೆ
ಕಾಯ್ದುಕೊಂಡ ಮಾನಕೆ
ಒಲಿದ ದೈವ ಒಳಗೆ ಬಂದು ಬೆಳಕ ತುಂಬಿತು

ಹೃದಯದಿಂದ ಹನಿದು ಹರಿವ
ಒಲವಿನಾ ತೊರೆಯ
ತಾಳಬಹುದು ಹೇಗೆ ನಾನು ತುಂಬುತಿರೆ ಧರೆಯ
ಇದರ ಲಯಕೆ ಮೂಡಿ
ಇದನೆ ಕಣ್ಣು ಮಾಡಿ
ಚಲಿಸುತಿಹರು ಸೂರ್ಯ ಚಂದ್ರ ಇದರ ಮಹಿಮೆ ಹಾಡಿ
*****

ಪುಸ್ತಕ: ನಿನಗಾಗೇ ಈ ಹಾಡುಗಳು

 

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)