ಒಂದಾನೊಂದು ಕಾಡಿನಲ್ಲಿ ಮದೋತ್ಕಟವೆಂಬ ಸಿಂಹವಿತ್ತು. ಅದಕ್ಕೆ ಹುಲಿ, ನರಿ, ಕಾಗೆಗಳು ಮಂತ್ರಿಗಳಾಗಿದ್ದುವು. ಅವು ಅಲ್ಲಲ್ಲಿ ತಿರುಗುತ್ತಿರುವಾಗ ಕ್ರಥನಕ ಎಂಬ ಒಂಟೆಯನ್ನು ಕಂಡುವು. ಸಿಂಹವು “ಇದೇನು ಈ ವಿಚಿತ್ರ ಮೃಗ! ಇದೇನು ಗ್ರಾಮದ ಮೃಗವೋ? ಅರಣ್ಯದ ಮೃಗವೋ? ತಿಳಿದು ಬನ್ನಿ? ಎಂದು ಅಪ್ಪಣೆ ಮಾಡಿತು. ಅದಕ್ಕೆ ವಾಯಸಪು “ದೇವ, ಇದು ಗ್ರಾಮದ ಮೃಗವು. ಇದನ್ನು ಒಂಟೆಯೆನ್ನುವರು. ಇದು ತಮಗೆ ಆಹಾರವು. ಕೊಲ್ಲಬಹುದು.” ಎಂದಿತ್ತು. ಸಿಂಹವು, “ಮನೆಗೆ ಬಂದವನನ್ನು ಕೊಲ್ಲಬಾರದು. ಅದರಿಂದ ಇದಕ್ಕೆ ಅಭಯಪ್ರದಾನ ಮಾಡಿ ನನ್ನ ಬಳಿಗೆ ಕರೆದು ತನ್ನಿ. ಅದು ಇಲ್ಲಿಗೇಕೆ ಬಂದಿದೆಯೆಂದು ತಿಳಿದುಕೊಳ್ಳೋಣ ಎಂದಿತು. ಅದರಂತೆ ಒಂಟೆಯನ್ನು ನಂಬಿಸಿ ಅಲ್ಲಿಗೆ ಕರೆತಂದುದೂ ಆಯಿತು.
ಸಿಂಹವು ಅದರ ವೃತ್ತಾಂತವನ್ನೆಲ್ಲಾ ಕೇಳಿ “ಕೃಥನಕ ನೀನು ಮತ್ತೆ ಗ್ರಾಮಕ್ಕೆ ಹೋಗಿ ಭಾರವನ್ನು ಹೊರುವ ಕಷ್ಟಕ್ಕೆ ಸಿಕ್ಕಬೇಡ. ಇಲ್ಲಿಯೇ. ಅರಣ್ಯದಲ್ಲಿ ನಿರ್ಭಯವಾಗಿ ನನ್ನ ಜೊತೆ ಯಲ್ಲಿಯೇ ಇದ್ದುಕೊಂಡಿರು.” ಎಂದಿತು. ಅದೂ ಆಗಲೆಂದು ಹಾಗೆಯೇ ಸುಖವಾಗಿತ್ತು.
ಹೀಗೆಯೇ ಇರುತ್ತಿರಲು, ಒಂದು ಸಲ ಮದೋತ್ಕಟನು ಕಾಡಿನಲ್ಲಿ ಒಂದು ಮದ್ದಾನೆಯ ಮೇಲೆ ಯುದ್ಧ ಮಾಡಿತು. ಅದು ಒನಕೆಯಂತಿರುವ ತನ್ನ ಕೊಂಬುಗಳಿಂದ ತಿವಿದು ಇದಕ್ಕೆ ನೋವು ಮಾಡಿತು. ಆ ನೋವಿನಿಂದ ಅದು ಎದ್ದು ಓಡಾಡುವುದೂ ಅಸಾಧ್ಯವಾಯಿತು. ಆಗ ಕಾಕಾದಿಗಳೆಲ್ಲರೂ ಬೇಟೆಯಿಲ್ಲದೆ ಹೋಗಿ ಹಸಿವಿನಿಂದ ಬಲುವಾಗಿ ಕಂಗೆಟ್ಟರು. ಆಗ ಸಿಂಹವು “ನೀವು ಹೋಗಿ ಒಂದು ಮೃಗವನ್ನು ಹುಡುಕಿಕೊಂಡು ಬನ್ನಿ. ಹೀಗಿದ್ದರೂ ಅದನ್ನು ಕೊಂದು ನಮಗೆ ಭೋಜನ ಮಾಡಿಸುವೆನು” ಎಂದಿತು. ಅವು ಎಷ್ಟು ಹುಡುಕಿದರೂ ಅರಣ್ಯದಲ್ಲಿ ಒಂದು ಮೃಗವೂ ಸಿಕ್ಕಲಿಲ್ಲ.
ಆಗ ನರಿ ಕಾಗೆಗಳು ಯೋಚಸಿದುವು. ನರಿಯು ಹೇಳಿತು:- ಮಿತ್ರ, ಸುಮ್ಮನೆ ಅಲೆದು ಪ್ರಯೋಜನವಿಲ್ಲ. ನಮ್ಮ ಸ್ವಾಮಿಯ ಬಳಿ ಇರುವ ಕ್ರಥನಕನನ್ನೇ ಕೊಂದು ತಿಂದುಬಿಡೋಣ” ಕಾಗೆಯು ಹೇಳಿತು:- ಆಗಬಹುದು. ಆದರೆ ಅರಸನು ಇದನ್ನು ಕೊಲ್ಲುವುದಿಲ್ಲವೆಂದು ಅಭಯ ಪ್ರಧಾನ ಮಾಡಿದ್ದಾನಲ್ಲ?”
“ಮಿತ್ರ, ನಾನು ಅರಸನಿಗೆ ಹೇಳಿ ಇದನ್ನು ಕೊಲ್ಲುವಂತೆ ಮಾಡುವೆನು ನೀನು ಇಲ್ಲಿಯೇ ಇರು ನಾನು ಹೋಗಿ ಅಪ್ಪಣೆಯನ್ನು ತರುವೆನು” ಎಂದು ನರಿಯು ಸಿಂಹದ ಬಳಿ ಹೋಯಿತು. ಅದಕ್ಕೆ “ಸ್ವಾಮಿ, ಕಾಡೆಲ್ಲವನ್ನೂ ತಿರುಗಿ ಬಂದೆವು. ಎಲ್ಲಿಯೂ ಯಾವ ಪ್ರಾಣಿಯೂ ಸಿಕ್ಕಲಿಲ್ಲ. ಏನು ಮಾಡೋಣ, ನಾವೋ ಹಸಿವಿನಿಂದ ಒಂದು ಕಾಲು ಕೂಡ ಎತ್ತಿಡಲಾರೆವು, ತಮಗೂ ಮೈಯಲ್ಲಿ ಸ್ವಸ್ಥವಿಲ್ಲ. ಅದರಿಂದ ಅಪ್ಪಣೆಯಾದರೆ, ಈ ಒಂಟೆಯ ಮಾಂಸದಿಂದ ಸದ್ಯದಲ್ಲಿ ಕಾಲ ನೂಕೋಣ” ಎಂದು ವಿನಯವಾಗಿ ಹೇಳಿತು.
ಅದನ್ನು ಕೇಳಿ ಸಿಂಹವು ಕೋಪಮಾಡಿಕೊಂಡಿತು: “ಪಾಪಿಷ್ಟ ಮತ್ತೆ ಇಂತಹ ಮಾತು ಆಡಿದರೆ ನಿನ್ನನ್ನು ಕೊಂದುಬಿಡುವೆನು. ನಾನು ಅವನಿಗೆ ಅಭಯವನ್ನು ಕೊಟ್ಟಿರುವುದು ಮರೆತೆಯಾ? ಎಲ್ಲಾ ದಾನಗಳಿಗಿಂತಲೂ ಅಭಯ ದಾನವೇ ಉತ್ತಮವು. ಅದನ್ನೂ ಮರೆತು ಒಂಟೆಯನ್ನು ಕೊಲ್ಲುವುದೇ?” ಎಂದಿತು. ಅದಕ್ಕೆ ಉತ್ತರವಾಗಿ ನರಿಯು “ಸ್ವಾಮಿ, ತಾವು ವಧಿಸಿದರೆ ತಮಗೆ ಪಾಪ, ಅದೇ ತಾನಾಗಿ ಬಂದು ತನ್ನನ್ನು ತಮ್ಮ ಆಹಾರಕ್ಕೆಂದು ಒಪ್ಪಿಕೊಂಡರೆ ಊಟ ಮಾಡುವುದಕ್ಕೆ ತಮಗೇನು?” ಎಂದು ಕೇಳಿತು. ಹಾಗಾದರೆ ನೋಡೋಣ” ಎಂದು ಸಿಂಹವು ಹೇಳಿತು.
ಅದು ಅಷ್ಟು ಒಪ್ಪುತ್ತಲೂ ನರಿಯು ಓಡಿ ಹೋಗಿ ಎಲ್ಲರನ್ನೂ ಕರೆದು ಹೇಳಿತು: “ಮಿತ್ರರೆ ಅರಸನಿಗೆ ಮೈಗೆ ಚೆನ್ನಾಗಿಲ್ಲ. ತಿರುಗುವುದರಿಂದ ಪ್ರಯೋಜನವಿಲ್ಲ. ಅರಸನಿಲ್ಲದಿದ್ದರೆ, ನಮನ್ನು ಕಾಪಾಡುವವರಿಲ್ಲ. ಅದರಿಂದ ಹಸಿವಿನಿಂದ ಮಲಗಿರುವ ಅರಸನಿಗೆ ನಮ್ಮ ದೇಹವನ್ನು ಸಮರ್ಪಿಸೋಣ. ಆತನಿಗೆ ಏನಾದರೂ ಕೆಟ್ಟುದಾದರೆ ಆಮೇಲೆ ನಾವು ಅಗ್ನಿಪ್ರವೇಶ ಮಾಡುವಂತಹ ಸಂದರ್ಭವು ಒದಗುವುದು. ಈಗಲೇ ಆತನಿಗೆ ತಮ್ಮ ದೇಹವನ್ನು ಒಪ್ಪಿಸಿ ಆತನ ಸಾಲವನ್ನಾದರೂ ತೀರಿಸೋಣ. ಆತನು ನಮ್ಮ ಕಣ್ಣೆದುರು ತೀರಿ ಹೋದರೆ ನಮಗೆ ನರಕವು ನಿಜವಾಗಿಯೂ ತಪ್ಪುವುದಿಲ್ಲ.”
ಎಲ್ಲರೂ ಸರಿಸರಿಯೆಂದು ಒಟ್ಟಿಗೆ ಸಿಂಹದ ಗುಹೆಗೆ ಹೋದರು. ಸಿಂಹವು ನರಳುತ್ತಾ ಮಲಗಿತ್ತು. “ಯಾವುದಾದರೂ ಮೃಗವು ಸಿಕ್ಕಿತೇ?” ಎಂದು ಕೇಳಿತು. ಮಂತ್ರಿಗಳ ಪರವಾಗಿ ಕಾಗೆಯು ಹೇಳಿತು: “ಸ್ವಾಮಿ, ಎಷ್ಟೋ ಹುಡುಕಿದೆವು. ಒಂದೂ ಸಿಕ್ಕಲಿಲ್ಲ. ಅದಿರಲಿ, ಈಗ ತಾವು ನನ್ನನ್ನು ತಿಂದು ಪ್ರಾಣಧಾರಣ ಮಾಡಿಕೊಳ್ಳಿರಿ ಸ್ವಾಮಿಗೆ ತೃಪ್ತಿ ಯಾದರೆ ನನಗೆ ಸ್ವರ್ಗವು ಲಭಿಸುವುದು.
ಭೃತ್ಯನು ಭಕ್ತಿಯೊಳ್ಳೊಪ್ಪಿಸೆ ಸ್ವಾಮಿಗೆ ಪ್ರಾಣವನು ॥
ಅಜರಾಮರ ಪರಮ ಪದವ ತಪ್ಪದೆ ಪಡೆಯುವನು ॥ ೪೫ ॥
ಅದನ್ನು ಕೇಳಿ ನರಿಯು ಹೇಳಿತು:- “ಎಲೈ ನಿನ್ನ ದೇಹವು ಚಿಕ್ಕುದು. ನಿನ್ನನ್ನು ತಿಂದುದರಿಂದ ನಮ್ಮೊಡೆಯನ ಹೊಟ್ಟೆಯ ತುಂಬುವುದಿಲ್ಲ. ಅಲ್ಲದೆ ಕಾಗೆಯ ಮಾಂಸವೂ ನಾಯೆಂಜಲೂ ಎಷ್ಟಿದ್ದೀತು? ಅದನ್ನು ತಿಂದರೆ ತಾನೇ ಏನು ತೃಪ್ತಿಯಾದೀತು? ನೀನು ನಿನ್ನ ಸ್ವಾಮಿ ಭಕ್ತಿಯನ್ನು ತೋರಿಸಿದ್ದಾಯಿತು. ನೀನು ಅರಸನ ಉಪ್ಪಿನ ರುಣವನ್ನು ತೀರಿಸಿಕೊಂಡೆ, ಎರಡು ಲೋಕದಲ್ಲಿಯೂ ಭಲೆ ಎನ್ನಿಸಿಕೊಂಡೆ, ಇನ್ನು ನೀನು ಹಾದಿ ಬಿಡು. ನಾನು ಪ್ರಭುವಿನಲ್ಲಿ ವಿಜ್ಞಾಪನೆ ಮಾಡುವೆನು. ನನ್ನನ್ನು ತಿಂದು ತಾವು ಪ್ರಾಣಯಾತ್ರೆಯನ್ನು ನಡೆಸಿ ನನಗೆ ಎರಡು ಲೋಕದಲ್ಲೂ ಸದ್ಗೆತಿಯಾಗುವಂತೆ ಅನುಗ್ರಹಿಸಬೇಕು.”
ಅದನ್ನು ಕೇಳಿ ಹುಲಿಯು ಹೇಳಿತು:- ನೀನು ಹೇಳಿದ್ದೆನೋ ಸರಿ. ಆದರೆ ನೀನೇನು ದೊಡ್ಡ ದೇಹದವನೇನು? ಜೊತೆಗೆ ನೀನೂ ಸ್ವಾಮಿಯಂತೆ ನಖಾಯುಧನು. ಅದರಿಂದ ಅಭಕ್ಷ್ಯನು. ಕೇಳಿಲ್ಲವೆ ಪ್ರಾಣವು ಕತ್ತಿನವರೆಗೂ ಬಂದಿದ್ದರೂ ಅಭಕ್ಷ್ಯವನ್ನು ತಿನ್ನಬಾರದು. ಹಾಗೆ ತಿಂದುದೇ ಆದರೆ ಎರಡು ಲೋಕಗಳಲ್ಲೂ ದುರ್ಗತಿಯಾಗುವುದು. ನೀನೇನೋ ನಿನ್ನ ಸ್ವಾಮಿ ಭಕ್ತಿಯಿಂದ ಹಾಗೆ ಹೇಳಿದೆ. ಅಯಿತು. ದಾರಿ ಬಿಡು. ನಾನೂ ಪ್ರಭುವಿನಲ್ಲಿ ಅರಿಕೆ ಮಾಡುವೆನು. ಪ್ರಭುವೆ, ನನ್ನನ್ನು ತಂದು ದೇಹ ಧಾರಣ ಮಾಡಿರಿ. ನನಗೆ ಅಕ್ಷಯವಾದ ಸ್ವರ್ಗವಾಸವನ್ನು ಪಾಲಿಸಿರಿ. ನನ್ನ ಕೀರ್ತಿಯು ಭೂಲೋಕದಲ್ಲಿ ಅಪಾರವಾಗಿ ಹರಡಲಿ. ಬೇರೆ ಯೋಚನೆ ಮಾಡಬೇಡಿರಿ.
ಇದೆಲ್ಲವನ್ನೂ ಕೇಳಿ ಒಂಟೆಯೂ ಯೋಚಿಸಿತು:- “ಇವರೆಲ್ಲರೂ ಒಳ್ಳೆ ಒಳ್ಳೆಯ ಮಾತುಗಳನ್ನು ಆಡಿದರು. ಸ್ವಾಮಿಯು ಇವರೂಬ್ಬರನ್ನೂ ಕೊಲ್ಲಲಿಲ್ಲ. ಇವರಂತೆಯೇ ನಾನು ಮಾಡಬೇಕು” ಎಂದು ನಿಶ್ಚಯಿಸಿಕೊಂಡು “ನೀನು ಹೇಳಿದ್ದು ಸತ್ಯವಾದರೂ ನೀನು ನಖಾಯುಧನು. ಅದರಿಂದ ನಿನ್ನನ್ನು ಸ್ವಾಮಿಯು ಭಕ್ಷಿಸುವುದೆಂತು? ಅದರಿಂದ ದಾರಿಬಿಡು. ಸ್ವಾಮಿ, ಇವರೆಲ್ಲರೂ ಅಭಕ್ಷ್ಯರು. ಅದರಿಂದ ಸ್ವಾಮಿಯು ನನ್ನನ್ನು ತಿನ್ನೋಣವಾಗಲಿ, ಅದರಿಂದ ನನಗೆ ಇಹಪರಗಳೆರಡೂ ಸಿದ್ಧಿಸಲಿ.”
ಒಂಟೆಯು ಹೀಗೆ ಹೇಳುತ್ತಿದ್ದಂತೆಯೇ ನರಿಯೂ ಹುಲಿಯೂ ಮೇಲೆಬಿದ್ದು ಅತ್ತಕಡೆ ಇತ್ತಕಡೆ ಹೊಟ್ಟೆಯನ್ನು ಬಗೆದುವು. ಅದನ್ನು ಹಂಚಿಕೊಂಡು ಎಲ್ಲವೂ ತಿಂದುವು. ಅದರಿಂದ ನಾನು ಹಾಗೆ ಹೇಳಿದೆನು. ನಿಮ್ಮ ಅರಸನು ಕ್ಷುದ್ರಪರಿವಾರವುಳ್ಳವನು ಎಂಬುದನ್ನು ನಾನು ಬಲ್ಲೆನು. ಸಜ್ಜನರು ಅಲ್ಲಿಗೆ ಹೋಗಬಾರದು. ಅಲ್ಲದೆ, ಚಾಡಿಯ ಮಾತನ್ನು ಕೇಳಿದವರು ಏನು ಬೇಕಾದರೂ ಮಾಡುವರು. ಕೇಳಿಲ್ಲವೆ?
ಕಚ್ಚಿ ಕೊಂದರೆ ಹಾವು ಕಿವಿ ಕಚ್ಚಿ ಕೊಲ್ಲುವನು ಚಾಡಿಕಾರ ॥
ಹಾವು ತಾ ಕಚ್ಚಿದನ ಕೊಲ್ಲುವುದು ಮನುಜ ಧರ್ಮನು ಪಿಸುಣ ॥೪೬॥
ಹೀಗಿದ್ದರೂ ಸ್ನೇಹಿತನೆಂದು ನಿನ್ನನ್ನು “ಈಗ ನಾನೇನು ಮಾಡಲಿ?” ಎಂದು ಕೇಳುವೆನು. ಹೇಳು.
“ಹಾಗಾದರೆ ದೇಶಾಂತರ ಹೋಗುವುದು ಒಳ್ಳೆಯದು.”
“ಅರಸನು ಕೋಪಗೊಂಡಿರುವಾಗ ದೇಶಾಂತರ ಹೋಗುವುದು ಹಿತವಲ್ಲ. ಸಾಧ್ಯವೂ ಅಲ್ಲ. ಅದರಿಂದ ಯುದ್ಧವನ್ನು ಬಿಟ್ಟು ಬೇರೆ ದಾರಿಯಿಲ್ಲ, ಅದೇ ಶ್ರೇಯಸ್ಕರವು.
ಒಳ್ಳೆಯ ನಡತೆಯ ಸಜ್ಜನರು ಧೀರರಾಗಿ ಯುದ್ಧದಲ್ಲಿ ಪ್ರಾಣ ಬಿಟ್ಟು ಒಂದೇ ಕ್ಷಣದಲ್ಲಿ ಯಾವ ಪುಣ್ಯಲೋಕಗಳನ್ನು ಪಡೆಯುವರೋ ಆ ಲೋಕಗಳನ್ನು ತಪಸ್ಸಿನಿಂದಾಗಲಿ ನೂರಾರು ದಾನಗಳಿಂದಾಗಲೀ ಪಡೆಯುವುದಕ್ಕೆ ಆಗುವುದಿಲ್ಲ. ಯುದ್ಧಕ್ಕೆ ಹೋದವರು ಸತ್ತರೆ ಸ್ವರ್ಗವು ಸಿಕ್ಕುವುದು ಬದುಕಿದರೆ ಕೀರ್ತಿಯು ಲಭಿಸುವುದು. ಈ ಎರಡೂ ಶೂರರಿಗಲ್ಲದೆ ಇತರರಿಗೆ ದುರ್ಲಭವು. ಯುದ್ಧದಲ್ಲಿ ಶೂರನ ಹಣೆಯೊಡೆದು ಸುರಿಯುವ ರಕ್ತವು ಬಾಯಿಗಿಳಿದರೆ, ಅದು ಸೋಮಪಾನಕ್ಕೆ ಸಮವು ಅಂತಹ ಸೋಮಪಾನವು ಸಂಗ್ರಾಮ ಯಜ್ಞದಲ್ಲಿ ಮಾತ್ರ ಲಭಿಸುವುದು. ಹೀಗೆ ಶ್ರೇಯಸ್ಸನ್ನು ಉಂಟು ಮಾಡುವ ಯುದ್ಧವೊಂದೇ ನನಗೆ ಆಶ್ರಯವು”
ಅದನ್ನು ಕೇಳಿ ದಮನಕನಿಗೆ ದಿಗಿಲಾಯಿತು. “ಈ ದುರಾತ್ಮನು ಯುದ್ಧಕ್ಕೆ ಸಿದ್ಧನಾಗಿರುವಂತಿದೆ. ಇವನ ದೊಡ್ಡಕೊಂಬುಗಳಿಂದ ಒಂದು ವೇಳೆ ನನ್ನೊಡೆಯನಿಗೆ ಏಟುಬಿದ್ದರೆ ಬಹಳ ಅನರ್ಥವಾಗುವುದು. ಆದರಿಂದ ಇವನನ್ನು ದೇಶಾಂತರ ಕಳುಹಿಸುವ ಯೋಚನೆ ಮಾಡಬೇಕು, ಎಂದು ಕೊಂಡು ಹೇಳಿತು:- “ಮಿತ್ರ, ನೀನು ಹೇಳಿದುದೇನೋ ಸರಿ. ಆದರೂ ಸ್ವಾಮಿ ಭೃತ್ಯರಿಗೆ ಸಂಗ್ರಾಮವೆನ್ನುವುದೆಲ್ಲಿಯದು? ಶತ್ರುವಿನ ಬಲಾ ಬಲಗಳನ್ನು ತಿಳಿಯದೆ ವೈರವನ್ನು ಆರಂಭಿಸುವುದು” ಎಲ್ಲಿಯ ನ್ಯಾಯ? ಸಮುದ್ರ ಟಿಟ್ಟಿಭಗಳ ಕಥೆಯ ಹಾಗಾಗಬಾರದು”
ಸಂಜೀವಕನು “ಅದು ಹೇಗೆ? ಎನ್ನಲು ದಮನಕನು ಹೇಳಿತು:-
*****
ಸಮುದ್ರನನ್ನು ಗೆದ್ದ ಟಿಟ್ಟಿಭದ ಕಥೆ ಓದಿ









