Home / ಕವನ / ಕವಿತೆ / ದಶಾವತಾರ

ದಶಾವತಾರ

ಹೃದಯಾವಕಾಶದೊಳು ಸಚ್ಚಿದಾನಂದವನು
ತ್ರಿದಶತ್ರಿವಿಷ್ಟಪರ ರೂಪದೊಳು ಮೂಡಿಸಿದ
ಪರಮ ಋಷಿದರ್ಶನಗಳಸ್ತಮಿಸೆ ಜಡಧಿಯೊಳು
ಕರುಣಿ ನೀನಾ ಜಡಧಿಗನುವಾದ ರೂಪಾಂತು
ಮೇಲಕೆತ್ತಿದೆ ವೇದರೂಪದೆಮ್ಮಾತ್ಮವನು.

ಬಾಳೊಳಮೃತಾನಂದ ಪಡೆಯುವಾತುರದಲ್ಲಿ
ವಿಷಯಾಬ್ಧಿಮಗ್ನಮತಿ ವೈಕ್ಲಬ್ಯವಡೆದಿರಲು
ಅಸಮಧೃತಿ ಬೆನ್ನಿತ್ತೆ ಕೂರ್ಮಸಂಕೇತದೊಳು.

ತನ್ನಹಂಕಾರಕ್ಕೆ ಸೃಸ್ಟಿಯೆಲ್ಲವ ನಿಲಿಸಿ
ನಿನ್ನಹಂಕಾರವನೆ ಧಿಕ್ಕರಿಪ ದುರ್ಮದನ
ಟೊಳ್ಳುಗೈಯಲು ತಕ್ಕ ಭೂದಾರನಾದೆಯೈ.

ಎಲ್ಲೆಲ್ಲು ನೀನಿಹುದು ಸುಳ್ಳೆಂದು ನಿನ್ನಿರವಿ-
ಗೆಲ್ಲೆಯನು ನಿರ್ಮಿಸುವ ಕ್ಷುಲ್ಲಮತಿಯೆಲ್ಲೆಗೆಡೆ
ಕಲ್ಲೊಳೂ ಮೂಡಿದೆಯ ನರಸಿಂಹ ತೇಜವೇ?

ಇಳೆಮುಗಿಲಕೊಂಡರೂ ಒಳಗಕೊಳ್ಳದೆ ತಣಿಯೆ
ನೆರೆಯ ಬೇಡುವೆನಲ್ಲೆ ಎನೆ ಬಲಿಯ ತುಳಿದೆಯಾ
ಸಕಲರಂತರ್ಯಾಮಿ ನೀನೆಯೆಂದರಿವರಿಯೆ?

ಅಕಳಂಕನೇ, ಸ್ವಾಮಿ, ನರನು ಮಾನವನೆಂಬ
ಸಂಭಾವನೆಗೆ ಸಲುವ ಕಾಲದೊಳು ಏಷಣೋ-
ಜ್ಜೃಂಭಣವೆ ಪೌರುಷದ ಬೆರೆಯಾಗೆ ಕ್ಷತ್ರಿಯರ

ಕಾಮದಿಂ ಮೂಡಿಬಹ ಕೋಪಾಗ್ನಿ ಎನುವಂತೆ
ಜಾಮದಗ್ನಿಯ ನೆವದಿ ತಿರೆಯ ಪಾವಕನಾದೆ.

ಧರ್ಮಧವಳಾಚಲದಿ ಜನಿಯಾಂತು, ವಿಷ್ಣುಪದ
ಮರ್ಮರವನಿಳೆಯ ತಿಳಿವಿಗೆ ತಂದು, ಸಂಯಮದ
ಕೂಲದೊಳು ತ್ಯಾಗವೇಗದಿ ಹರಿದು ಭೋರ್ಗರೆದ
ಭಾರತದ ಬಾಳುವೆಯ ಬಿತ್ತರದ ತೀರ್ಥನೇ,
ಶ್ರೀ ರಘೋತ್ತಮ, ನಿನಗೆ ಮಂಗಳವ ವಚಿಸುತ್ತ
ಗೆಲವಾಗುವೆನು ತಂದೆ.

ದಡವ ಮೀರಿತೊ ಏನೊ
ನಲವಿನಿಂಗಡಲೆಂದು ತಿರೆಯ ಜನರುತ್ಸವಿಸೆ,
ಹೊಲ್ಲರುಲ್ಲಸಗೆಡಲು, ಬಲ್ಲ ಜನ ಬೆರಗಾಗೆ
ಎಲ್ಲ ಬಾಳಿನ ದಗೆಯ ತಣಿಸಿದಾಪದ್ಬಂಧು,
ನೀರದ ಶ್ಯಾಮನೇ, ಭವಿಗೆ ಭವದುತ್ಸಾಹ
ತೀರದಿರುವಂದದೊಳು ಕರ್ಮರತಿಯನು ಹೊಗಳಿ
ಫಲವಿರತಿಯಿಂದದರ ಕಹಿಯನೆಲ್ಲವ ಕಳೆವ
ಸುಲಭಮಾರ್ಗವನರುಹಿ ನಡೆದು ತೋರಿದ ಧೀರ,
ಎನಿತು ಶುಭಗಳ ತಂದೆ ನೀನೆಮ್ಮ ತಾಯ್ನೆಲಕೆ
ಎನಿತೆತ್ತರಕ್ಕೊಯ್ದೆ ನೀನೆಮ್ಮ ಜೀವಿತವ!

ಸ್ವರವಿಲ್ಲದೆಯೆ ಗಾನ, ಮಲರಿಲ್ಲದೆಯೆ ಕಂಪು
ಕರಣ ವಿಷಯಗಳೊಂದುಗೂಡದೆಯೆ ಸೊಗದುಣ್ಮು
ದಾಹವಿಲ್ಲದೆ ತಣಿವು, ದೇಹವಿಲ್ಲದೆಯಿರವು-
ಸ್ನೇಹಮಯ, ನೀನಿಂತು ಯಾವ ನಿಲುವೊಳು ನಿಂದು
ಯಾವ ದರ್ಶನ ಬಲದೊಳಾವ ಭ್ರಮೆಯನು ಗೆದ್ದು
ಯಾವ ನಲ್ಮೆಯ ನೆಲೆಗೆ ತಿರೆಬಾಳನೊಯ್ಯಲೆಂ-
ದೆಂಥ ಪಂಥಕೆ ಸಂದೆ? “ಎಲ್ಲ ನಶ್ವರವಿದರ
ಅಂತ್ಯವೆಂಥದೊ ಕಾಣೆ; ಜೀವ ಜೀವವ ಕಾಡಿ
ಜೀವಿಸುವುದೇತಕ್ಕೆ; ದುಃಖಮಯದೀ ಭವದಿ
ಬೇವ ಗಾವಿಲ ನಿನ್ನ ನಿರ್ವಿಣ್ಣತೆಗೆ ಮುಕ್ತಿ
ನಿರ್ವಾಣವೆಂದೆ ತಿಳಿ; ಸರ್ವಕಾಮವ ಕಳೆ;
ದುರ್ವಾರವೆನಿಸುವೀ ಹುಟ್ಟುಸಾವನು ಶಮಿಸಿ
ಸುಜ್ಜಾನಿಯಾಗುವೊಡೆ ಭವದಾಸೆ ಹಿಂಗಿಸು;
ಅಜ್ಞರಾಚರಿಸುತಿಹ ಯಜ್ಞಮಾರ್ಗವ ಬಿಡು.”
ಪಾರ್ವರನು ದಮಿಸಿದನೆ, ಅತಿಲೋಲುಪತೆಗಿಂಥ
ಸರ್ವಾಪಹರತತ್ವದೆಳತವೇ ಬೇಕಾಯ್ತೆ
ಜೀವನವನುದ್ಧರಿಸೆ ಮೋಹಾಂಧಕೂಪದಿಂ
ನೋವು ನಲವೊಳಗದುವು ಸಮತೂಕದೊಳು ತೂಗೆ?

ಇಂದುವರೆಗಿಂತಾಯ್ತು ನರನಾತ್ಮದುದ್ಧಾರ
ನಂದುವಂತಿರೆ ಧರ್ಮ ತಿರೆಗೆ ಶಿವದವತಾರ.
ಮುಂದೆ ದಣಿಯೆಂತೊಲಿವನೀ ಧರೆಯ ಜೀವಕ್ಕೆ?
ಕುಂದ ಕಳೆದೆಮಗೀವನಾವ ಹದುಳದ ಬಿಕ್ಕೆ?
ಮುಟ್ಟಿದುದ ಸುಡುವಂಥ ವರವ ಪಡೆದವನಂತೆ
ಸೃಷ್ಟಿಯನು ಕೆಡಿಸುತಿರೆ ಈಹೆ ಅಸುರನಹಂತೆ
ದುರ್ಮದಾವೇಗಗಳ ಯಂತ್ರದೈತ್ಯನು ಗಳಿಸೆ
ಧರ್ಮಗಳು ಧೂಳೇಳೆ ಕಾಮಪಥದೊಳು ಚರಿಸೆ
ಕುದುರೆ ಆಳಿಬ್ಬರೂ ಉನ್ಮತ್ತರಾದವೊಲು
ಹದುಳ ಕೆಟ್ಟಿರೆ ಲೋಕ ಇಂದ್ರಿಯೋನ್ಮಾದದೊಳು
ದುರ್ಜ್ಞೇಯನೇತೆರದಿ ತಿರೆಯ ತಿಳಿವಿಗೆ ಬರುವ?
ವಿಜ್ಞಾನ ಬಲಿಯಿದಿರು ಯಾವ ಬಿಕ್ಕೆಯನೆರೆವ?

ಜಡಕೆ ಕಿಂಕರನಾಗಿ ಬಳಲಿ ದೆಸೆಗೆಟ್ಟಿರುವ
ಬಡ ಚೇತನನಿಗಾವ ಬಗೆಯ ಬೆಂಬಲವೀವ?
ಚಪಲಜಂಗಮಜಗಕೆ ಚಪಲಾಶ್ವವನೆ ಏರಿ
ಉಪಶಮಿಸೆ ಬರುವನೋ ಪರಮರೌದ್ರವ ಬೀರಿ
ಜಗದವಲಯದ ಮೇಲೆ ಕರವಾಲವನು ಬೀಸಿ
ಯುಗದ ಪಾಪವ ಕೆಡಿಸೆ ಕ್ಷೀರಜಲಧಿನಿವಾಸಿ?
ನಡುಗುತೆನ್ನೆದೆ ನೆನೆವುದಾ ಭೀಮಭಯಕರನ
ನುಡಿಯರಿಯದಳಲುತಿದೆ ಅವನ ನುತಿಸುವ ಹದನ.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...