ಹೃದ್ವೀಣೆ ಮುರಿದಿರಲು ಶಾರದೆಯನರಸಿದೆನು
ಮುರಿದೆನ್ನ ವೀಣೆಯನು ಸರಿಪಡಿಸು ಎಂದು
ಕೈಲಿ ವೀಣೆಯ ಹಿಡಿದು ಚೆಲ್ವೆಣ್ಣ ಬೇಡಿದೆನು
ಅವರೆಲ್ಲ ಸರಸತಿಯ ಅವತಾರವೆಂದು
ದೂಡಿದರು ಕೆಲರವರು ಧೂ ಎಂದರುಳಿದವರು
ಆರಲ್ಲಿ ಒಂದಿನಿತು ಮಾರ್ದವತೆ ಇಲ್ಲ
ಬಾರೆನ್ನ ಕವಿಯೆಂದು ಎದೆಗಪ್ಪಿಕೊಂಡಿಹರು
ಪ್ರಣಯದಾ ಆವೇಶ ಹಾಯ್ ಎನಗೆ ಹೊಲ್ಲ
ಮಂದಿರದ ಬಾಗಿಲಲಿ ಕೈಮುಗಿದು ಬೇಡಿದೆನೆು
ಎನ್ನಬ್ಬೆ ಹಬ್ಬವನು ನೀಡೆನಗೆ ಎನುತೆ
ಮಂದಿರದ ಆ ಅಯ್ಯ ಪೂಜಾರಿ ದೂಡಿದನು
ತನುನೊಂದು ಮನನೊಂದು ಹುಚ್ಚಾಗಿ ಹೊರಟೆ
ವೀಣೆಯಾ ಸುಸ್ವರವು ಬನದಿಂದ ತೇಲಿಬರೆ
ಓಡಿದೆನು ಸರವರಸಿ ತಿಳಿಸರಸಿನೆಡೆಗೆ
ಬನವೆಲ್ಲ ಗಾನದಲಿ ತನುಮನವ ಮರೆಯುತಿರೆ
ತಂಗಾಳಿಯನ್ನೀಜಿ ಹಾರುತ್ತ ಹೋಗೆ
ಅರೆಬಿರಿದ ಮೊಗ್ಗೆಯಲಿ, ಹೊಂಗೆಯಾ ಟೊಂಗೆಯಲಿ
ಎಳೆದಳಿರ ಸಂಚಿನಿಂ ಚಿಮ್ಮುತಿರೆ ಗಾನ
ಎಲ್ಲೆಲು ಶಾರದೆಯೆ ತುಂಬಿರಲು ಬನದಲ್ಲಿ
ಬಳಲುತ್ತ ಅರಿಯದೆಯೆ ಗೈದಿರ್ದೆ ಧ್ಯಾನ
ಓ ಮುದ್ದೆನೋವಾಯ್ತೆ ಎಂದಿನ್ನೆ ತಾಯ್ಗರಳು
ಸಂತಸವು ಚಿಮ್ಮಿತ್ತು ಎದೆಯಾಳದಿಂದ
ಆ ಕರುಣೆ ತೊರೆಯಲ್ಲಿ ಕೊಚ್ಚಿರಲು ಕಾರಿರುಳು
ತೋರಿದಳು ಎನ್ನಬ್ಬೆ ತಾನಿರುವ ಅಂದ
ಜೋ ಎಂದು ನೀರಂಬು ಚಿಮ್ಮಿರಲು, ರಾಗರಸ,
ಮಳೆ ಬಿಲ್ಲ ಕಳೆಗೊಂಡು ನಸುನಗುತಲಿತ್ತು
ಜೋಗುಳವ ಹಾಡುತ್ತ, ಕುಣಿಯುತ್ತ ಆ ಸರಸ
ಜಲಪಾತ ಎನ್ನೆದೆಯ ತಟ್ಟುತ್ತಲಿತ್ತು
ಮಳೆಬಿಲ್ಲ ತಾನುಟ್ಟು ಸಂತಸದಿ ಮುತ್ತಿಡಲು
ಓ ಅಮ್ಮ ಎಂದೆನುತೆ ಅಪ್ಪಿದೆನು ಭರದಿ
ಮುರಿದಿರ್ದ ವೀಣೆಯನು ಸರಿಪಡಿಸಿ ನಡಿಸಿರಲು
ಶುಕ ಪಿಕಗಳೊಡನಾಡಿ ಹಾಡಿದೆನು ಮುದದಿ
*****








