ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,
ಕೈಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು
ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ .
ಮುನ್ನೆ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈಹಿಡಿದು ನಡಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು;- ಇನ್ನು,
ಕೈಹಿಡಿದು ನಡಸು ನೀನು.
ಮಿರುಗುಬಣ್ಣಕೆ ಬೆರೆತು, ಭಯಮರೆತು, ಕೊಬ್ಬಿದೆನು;
ಮೆರದಾಯ್ತು; ನೆನೆಯದಿರು ಹಿಂದಿನದನೆಲ್ಲ.
ಇಷ್ಟು ದಿನ ಸಲಹಿರುವ ಮೂರ್ಖನನು; ಮುಂದೆಯೂ
ಕೈಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳೆಕೊಂಡ ದಿವ್ಯಮುಖ ನಗುತ?
*****
NEWMAN (1801 – 1890) Lead, Kindly Light






