ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ
ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ
ಯಾವುದು ಪ್ರಬಲ ಯಾವುದು ನಿತ್ಯಸತ್ಯ
ಎಂಬುದು ನನಗಿನ್ನೂ ಅನುಮಾನ
ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ
ನಿಂತ ಕೆಲವು ಕಡೆ ಹಳಸಿ ನಾತವಾಗಿ ಯಾರಿಗೂ ಬೇಡವಾಗುತ್ತವೆ
ಅಲ್ಲಿ ಕಟಗುಟ್ಟುವ ಕಪ್ಪೆಸದ್ದೊಂದೆ ಕಿವಿಕೊರೆಯುತ್ತದೆ

ರೋಗಿಯ ವಾಸಿ ಮಾಡಿ ಬಂದವನೇ
ರೋಗಿಗಿಂತ ಮುಂಚೆ ತಾನೇ ಗೊಟಕ್ಕೆಂದನೇನೋ
ತೊಳೆಯ ಬಂದ ತೋಟಿಗ ಬಗ್ಗಡವಾದ ಕೆಸರ ಹಳ್ಳದಲ್ಲಿ
ತಾನೇ ಕೊಳೆ ಹಚ್ಚಿಕೊಂಡು ಕೊಚ್ಚಿ ಹೋದನೇನೋ
ತೊಳೆಸಿಕೊಳ್ಳುವವರೆ ಕಿಸಕ್ಕನೆ ನಕ್ಕು
ಎಮ್ಮೆ ಹಂದಿಗಳಂತೆ ಹಾಗೆಯೇ ಬಿದ್ದುಕೊಂಡರೇನೋ

ಕತ್ತಲಲ್ಲಿ ನಡೆಸಲೆಂದು ದೀಪ ತಂದವನ
ಹಿಂದೆ ಹಿಂದೆ ಹಿಂಬಾಲಿಸಿ ಉಫ್ಫೆಂದೂದಿ ದೀಪವನಾರಿಸಿ
ಬೆಳಕಿನವನನ್ನೇ ಕತ್ತಲ ಕಂದಕದಲ್ಲಿ ನೂಕಿದರೇನೋ

ಪರ್ಣಶಾಲೆಗಳ ಮರಗಳ ಕೆಳಗೆ ಕುಳಿತು ಎಲೆ ಸಂದುಗಳಲ್ಲಿ
ಕಾಣುವ ಕಿರಣ ಕನಸೇ ಬೆಳಕೆಂಬ ಭ್ರಮೆಯಾಯಿತೇನೋ ಅಥವಾ
ಇವೆರಡರ ಕಣ್ಣು ಮುಚ್ಚುಲೆಯಾಟವನಾಡಿಸುವ
ಬೆಳಕಿನ ಬೆಳಕೋ ಕತ್ತಲೆಯ ಕತ್ತಲೋ
ಏನೂ ಬೇರೆಯೇ ಇದೆಯೇನೋ
ನನಗಿನ್ನೂ ಅನುಮಾನ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)