ಕಲ್ಲೆದೆಯ ಕಂಬನಿಗಳು

ಕಲ್ಲೆದೆಯ ಕಂಬನಿಗಳು

ಮೂಲ: ವಿ ಎಸ್ ಖಾಂಡೇಕರ

ಆಕಾಶವು ಸೂರ್‍ಯನು ಕೂಡ ಕಾಣದಷ್ಟು ಕಾರ್‍ಮೋಡಗಳಿಂದ ತುಂಬಿ ಹೋಯಿತು. “ಏನು ಭಯಂಕರ ಸಂಹಾರವಿದು!” ಎಂದು ಆಕಾಶವು ಕಣ್ಣು ಮುಚ್ಚಿಕೊಂಡಂತೆ ಭಾಸವಾಗುತ್ತಿತ್ತು.

ಟಪಟಪ ಮಳೆಯ ಹನಿಗಳು ಉದುರತೊಡಗಿದವು. ರಾಜ ಕವಿಗೆ ಸ್ಫೂರ್‍ತಿ ಬಂದಿತು- “ಮಹಾರಾಜ, ಆಕಾಶದ ಕಣ್ಣುಗಳೊಳಗಿಂದ ಕಂಬನಿಗಳು ಸುರಿಯಹತ್ತಿವೆ.”

ಎದುರಿನಲ್ಲಿಯ ಹೆಣಗಳ ರಾಶಿಯ ಕಡೆಗೆ ಉನ್ಮಾದದಿಂದ ನೋಡುತ್ತ ಪಾಷಾಣವರ್‍ಮರಾಜನು ಉದ್ಘಾರತೆಗೆದ “ಬೌದ್ಧ ಧರ್‍ಮದ ದೀಕ್ಷೆ ತೆಗೆದು ಕೊಂಡಂತೆ ಕಾಣುತ್ತದೆ ಆಕಾಶ!”

ದಿಗ್ವಿಜಯಿಯಾದ ಸಮ್ರಾಟನ ವಿನೋದ! ತಿಮಿಂಗಿಲುಗಳ ಬಾಲದ ಹೊಡತವಿದ್ದಂತೆ! ಸುತ್ತಲು ನೆರೆದ ಸರದಾರರ ಗುಂಪಿನಲ್ಲಿ ಹಾಸ್ಯರಸದ ಲಹರಿಯು ಹಾಯ್ದು ಹೋಯಿತು.

ಮೇಘಗಳ ಗಂಭೀರವಾದ ಗಡಗಡಾಟವು ಸಾವಕಾಶವಾಗಿ ಪ್ರರಂಭವಾಯಿತು. ರಾಜಕವಿಗಾದರೂ ಸ್ಫೂರ್‍ತಿ ಏರತೊಡಗಿತು. ಅವನಂದ “ಮೇಘಗಳೆಲ್ಲಿಯವು? ಕೃಷ್ಣ ಸಿಂಹಗಳೇ ಇರುವವು ಅಲ್ಲಿ! ಅಗೋ, ಇದು ನೋಡಿರಿ, ಹೇಗೆ ಗುರು ಗುರು ಮಾಡುತ್ತಿರುವವು!”

ರಣಾಂಗಣದ ಮೇಲೆ ಬಿದ್ದ, ಗಾಯಾಳುಗಳ ನರಳುವಿಕೆಯ ಆರ್‍ತ ಸ್ವರವು ದೂರಿನಿಂದ ಕೇಳಬರುತ್ತಿತ್ತು. ಅದನ್ನು ಆಲಿಸುತ್ತ ಅರಸನಂದ “ತಪ್ಪಿದರಿ ನೀವು, ಕವಿರಾಜ! ಎಲ್ಲಿಯ ಕೃಷ್ಣಸಿಂಹ, ಎಲ್ಲಿಯದೇನು? ಆಕಾಶವು “ನಮೋ ಬುದ್ಧಾಯ, ನಮೋ ಬುಧಾಯ” ಅನ್ನುತ್ತಿದೆ.

ರಾಜನಿಗೆ ಮೂರರ ಮೇಲೆ ಅತ್ಯಂತ ಪ್ರೇಮ- ಒಂದು ಯುದ್ಧ, ಇನ್ನೊಂದು ಬುದ್ಧನ ನಿಂದೆ, ಮತ್ತೊಂದು ನರ್‍ತಕಿ. ಕೈಯಲ್ಲಿಯ ಖಡ್ಗದ ಝಳಪಿಸುವಿಕೆಯಷ್ಟೇ, ನರ್‍ತಕಿಯ ಕಾಲೊಳಗಿನ ನೂಪುರಗಳ ಮಂಜಳ ನಿನಾದವಾದರೂ ಆತನಿಗೆ ಸೇರುತ್ತಿತ್ತು. ಶತ್ರುಗಳ ಕೂಡ ಹೋರಾಡುವ ಆತನ ಬಾಹುಗಳು, ಬುದ್ಧನ ನಿಂದೆ ಮಾಡುವ ಆತನ ನಾಲಿಗೆ, ಕಲಾವಂತಿಯರ ನರ್‍ತನವನ್ನು ನೋಡುವ ಆತನ ಕಣ್ಣುಗಳು- ಆ ಆ ಕ್ಷಣದಲ್ಲಿ ವಿಷಯಾನುಸಾರವಾಗಿ ತಲ್ಲೀನತೆಯಿಂದ ಸಮರಸವಾಗುತ್ತಿದ್ದವು.

ಮೃತ್ಯುವಿನ ಕರಾಳದವಡೆಯಂತಿರುವ ಯುದ್ಧದಲ್ಲಿಯ ಪ್ರೇಮ ಒಂದೆಡೆಗಾದರೆ, ಇನ್ನೊಂದೆಡೆಗೆ ಕಲೆಯ ಹಾಸ್ಯವದನದಂತಿರುವ ನೃತ್ಯ ಸಂಗೀತಗಳಲ್ಲಿ ಆದರ! ಆದರೆ ತನ್ನ ಸ್ವಭಾವದಲ್ಲಿಯ ಈ ವಿರೋಧವನ್ನು ಸಮ್ರಾಟ ಪಾಷಾಣವರ್‍ಮನು ಒಳ್ಳೇ ಮೋಜನಿಂದ ಸಮರ್‍ಥಿಸಿಕೊಳ್ಳುತ್ತಿದ್ದ. “ಪ್ರಲಯಕಾಲದಲ್ಲಿ ರುದ್ರನು ತಾಂಡವನೃತ್ಯವನ್ನಾಡುವದಿಲ್ಲವೆ? ಆ ನೃತ್ಯವನ್ನು ಅವನೇನೂ ಸ್ಮಶಾನದಲ್ಲಿ ಕಲಿಯಲಿಲ್ಲ! ಮತ್ತು ಇಡೀ ಭೂತಗಣವನ್ನು ತನ್ನ ಗುರುವನ್ನಾಗಿ ಮಾಡಿಕೊಳ್ಳಲಿಲ್ಲ! ಅದನ್ನೆಲ್ಲ ಆತನಿಗೆ ಕಲಿಸಿದವಳು ಪಾರ್‍ವತಿ. ಭಿಲ್ಲಿಣಿಯಾಗಿ, ತನ್ನ ಮೋಹಕವಾದ ನೃತ್ಯದಿಂದ, ಅವಳು ಅವನನ್ನು ಮೋಹಿಸಿ ಬಿಟ್ಟಿರಲಿಲ್ಲವೆ?”

ಮುಗಿಲಲ್ಲಿ ಮಿಂಚು ಹೊಳೆಯಹತ್ತಿತು. ಅರಸನನ್ನು ಆನಂದದಪಡಿಸುವದಕ್ಕಾಗಿ ರಾಜಕವಿಯೆಂದ. “ಮಹಾರಾಜ, ಆಕಾಶವು ಎದೆ ಎದೆ ಬಡೆದುಕೊಳ್ಳಹತ್ತಿದೆ! ಬೌದ್ಧ ಧರ್‍ಮ! ಬೌದ್ಧ ಧರ್‍ಮ!”

ಆದರೆ ಮಿಂಚು ಕಂಡ ಕೂಡಲೆ ಅರಸನಲ್ಲಿ ನಿದ್ರಿತವಾದ ಇಚ್ಛೆಯು ಜಾಗೃತವಾಯಿತು. ಅವನಂದ, “ಭಲೆ! ಮೇಘಗಳ ತಾಳದಲ್ಲಿ ಮಿಂಚು ಕುಣಿಯಹತ್ತಿದೆ. ಆಯಿತು! ನಡೆಯಿರಿ ಶಿಬಿರಕ್ಕೆ, ಒಬ್ಬ ಸುಂದರ ನರ್‍ತಕಿಯನ್ನು ಬರಮಾಡೋಣ – ”

ಎಲ್ಲರೂ ಹತಬುದ್ಧರಾದರು. ನಗರವೆಲ್ಲವೂ ಭೀತಿಯಿಂದ ವ್ಯಾಕುಲವಾಗಿ ಹೋಗಿದೆ! ಎದುರಿನಲ್ಲಿ ಹೆಣಗಳ ರಾಶಿ! ಇಂಥ ವೇಳೆಯಲ್ಲಿ ಊರ ಹೊರಗಿನ ಶಿಬಿರಕ್ಕೆ ಸುಂದರ ನರ್‍ತಿಕೆಯನ್ನು ತರುವದಾದರೂ ಎಲ್ಲಿಂದ?

ಯಾರಿಗೋ ನೆನಪಾಯಿತು-

ಮಧ್ಯಾನದಲ್ಲಿ ಊರನ್ನು ಸುಲಿಯುವಾಗ ಸೈನಿಕರು ಎಷ್ಟೋ ಸ್ತ್ರೀಯರನ್ನು ಸೆರೆಯಾಳಾಗಿ ತಂದಿದ್ದರು. ಸಾಮ್ರಾಟನ ಇಚ್ಛೆಯನ್ನು ಪೂರೈಸುವದಕ್ಕಾಗಿ ಸರದಾರರು ಹೊರಟು ಹೋದರು.

“ಏನು ಕವಿರಾಜ, ಹೋಗುವದಲ್ಲದೆ, ಶಿಬಿರದ ಕಡೆಗೆ?” ಅರಸ ಕೇಳಿದ.

ಕವಿಯು ವ್ಯಾಕುಲ ದೃಷ್ಟಿಯಿಂದ ರಣಕ್ಷೇತ್ರದ ಕಡೆಗೆ ನೋಡುತ್ತಿದ್ದ.

“ಏನು ನೋಡುವಿರಿ, ಕವಿರಾಜ?”

“ಏನೂ ಇಲ್ಲ. ನನ್ನ ಮಿತ್ರನೊಬ್ಬನು ಯುದ್ಧದಲ್ಲಿ ಮಡಿದ. ಆತನ ಮೃತದೇಹದ ದರ್‍ಶನ ತೆಗೆದುಕೊಳ್ಳಬೇಕೆಂದು-”

“ನಿಮ್ಮಲ್ಲಿಯೂ ಬುದ್ಧನ ಅವತಾರವಾಯಿತೇನು? ಮಡಿದರೆ ಮುಗಿದು ಹೋಯಿತು ಮಾತು! ನನ್ನಂಥ ದಿಗ್ವಿಜಯಿಯಾದ ಅರಸರ ಆಸ್ಥಾನ ಕವಿಯೆಂದರೇನು, ಮತ್ತೆ ಅವನು ಇಷ್ಟು ಅಳ್ಮನದವನೇ?”

ತುಸು ಮುಂದಕ್ಕೆ ಹೋಗಿ ಅರಸನು ಪ್ರಶ್ನೆ ಮಾಡಿದ “ಕೇಳಿದಿರೇನು ಈ ಸಂಗೀತವನ್ನು?” ಕವಿಯ ಮೈಮೇಲೆ ನವಿರೆದ್ದವು. ನರಳುವದು ಗೋಳಾಡುವದು, “ನೀರು, ನೀರು” ಎಂದು ಆಕ್ರೋಶ ಮಾಡುವದು ಎಲ್ಲವೂ ಎಷ್ಟು ಭಯಂಕರ!

ಸಹಜವಾಗಿಯೇ ಆತನ ಕಣ್ಣುಗಳಲ್ಲಿ ಕಂಬನಿ ತುಂಬಿದವು.

ಅರಸನಿಗೆ ಅದು ತಿಳಿಯುತ್ತಲೇ ತೀಕ್ಷ್ಣ ಸ್ವರದಲ್ಲಿಯೇ ಪ್ರಶ್ನೆ ಮಾಡಿದ. “ಕವಿರಾಜ, ಕಂಬನಿಸುರಿಸುವಿರಲ್ಲ ನೀವು! ಕಣ್ಣೀರು, ಅಳ್ಮನವುಳ್ಳವರ ಕಣ್ಣುಗಳ ವೈಭವ!”

ಅದೇ ವೇಳೆಗೆ ಕೋಲ್ಮೀಂಚು ಮಿಂಚಿತು. ಆ ದಿಗ್ವಿಜಯಿಯಾದ ಸಮ್ರಾಟನ ಕಣ್ಣುಗಳ ಮೇಲೆ ಪ್ರಕಾಶ ಬಿದ್ದಂತೆ, ಅವನ ಹೃದಯದ ಮೇಲಾದರೂ ಬಿದ್ದಿತು. ಅವೇನು ಕಣ್ಣುಗಳೇ? ಸಂಗಮರವರಿಯಂತಿದ್ದವು!

ಅದನ್ನು ನೋಡಿ ಕವಿಗೆನಿಸಿತು “ಕಲ್ಲೆಂದಾದರೂ ಕಂಬನಿಸುರಿಸುವುದುಂಟೇ?

ಮಿತ್ರನ ಮೃತ ದೇಹವನ್ನು ಶೋಧಿಸದೆ ಕವಿಯು ಅರಸನ ಕೂಡ ಶಿಬಿರದ ಕಡೆಗೆ ತೆರಳಿದ.
* * *

ಸೆರೆಹಿಡಿದು ತಂದ ಸ್ತ್ರೀಯರಲ್ಲಿ ಓರ್‍ವ ಸುಂದರ ಮತ್ತು ನೃತ್ಯ ಕುಶಲ ವೇಶ್ಯೆ ಇದ್ದಳು.

“ನನ್ನ ನೃತ್ಯದ ಬೆಲೆಯೇ?” ಅವಳು ಸರದಾರರಿಗೆ ಪ್ರಶ್ನೆ ಮಾಡಿದಳು. ಸುವರ್‍ಣ ನಾಣ್ಯದ ಅಂಕಿಗಳು ಸರಸರನೆ ಮೇಲಕ್ಕೇರಹತ್ತಿದವು; ಆದರೆ ಪುಷ್ಪೆಯು ಮಾತ್ರ ಒಪ್ಪಲೊಲ್ಲಳು.

ಕಡೆಗೆ ಸರದಾರರು ಬೇಸತ್ತು ಅಂದರು- “ಹಾಗಾದರೆ ನೀನೇ ಹೇಳು ನಿನ್ನ ನೃತ್ಯದ ವಿಷಯವಾಗಿ ಏನು ಬೇಕಾದದ್ದನ್ನು!”

“ನನ್ನ ಸ್ವಾತಂತ್ರ್ಯ! ನೃತ್ಯ ಮುಗಿದ ಕೂಡಲೇ ನಾನು ಎಲ್ಲಿಬೇಕಾದಲ್ಲಿ ಹೋಗುವವಳು.”

ಇದನ್ನು ಕೇಳಿ ಎಲ್ಲರಿಗೂ ಆಶ್ಚರ್‍ಯವಾಯಿತು.

ದಿಗ್ವಿಜಯಿಯಾದ ಸಮ್ರಾಟನ ಕೃಪಾದೃಷ್ಟಿಯನ್ನು ಬಿಟ್ಟು, ಈ ವೇಶ್ಯೆಯು ಹೋಗುವದಾದರೂ ಎಲ್ಲಿ? ಹುಚ್ಚಿಯಾಗಿರಲಿಕ್ಕಿಲ್ಲವೇ ಇವಳು?

ಕ್ಷಣಮಾತ್ರದಲ್ಲಿ ಶಿಬಿರದಲ್ಲಿ ನೃತ್ಯಸಮಾರಂಭದ ಏರ್‍ಪಾಡಾಯಿತು. ಪುಷ್ಪೆಯ ಕಂಠದಲ್ಲಿ ಕೋಕಿಲೆಯ ಮಧುರತೆಯಿದ್ದಂತೆ, ಅವಳ ಅಭಿನಯದಲ್ಲಿ ನವಿಲಿನ ಸಡಗರವಿತ್ತು. ಪ್ರತಿ ಕ್ಷಣವೂ ಅವಳ ದೇಹಲತೆಯು ರತ್ನ ಗಂಬಳಿಯ ಮೇಲೆ ತಾರಕಾಂಕಿತ ಗಗನದಲ್ಲಿ ಒಂದು ಕ್ಷಣದಲ್ಲಿ ಇಲ್ಲಿ ಮರುಕ್ಷಣದಲ್ಲಿ ಅಲ್ಲಿ ಮಿಂಚುವ ವಿದ್ಯುಲ್ಲತೆಯಂತೆ ನಲಿಯುತ್ತಿತ್ತು! ಮಂದವಾದ ವಾಯುಲಹರಿಯಲ್ಲಿ ಅಲೆದಾಡುವ ಲತೆಯಂತೆ, ಅವಳ ಸೂಚಕವಾದ ಅಭಿನಯವು ಅರಸನಿಗೆ ಮನೋಹರವೆನಿಸಿತು. ಅವಳ ಪ್ರತಿಯೊಂದು ಹಾವಭಾವದೊಂದಿಗೆ, ಪ್ರೇಕ್ಷಕಗಣದ ಮೇಲೆ ಸುಗಂಧ ಪುಷ್ಪಗಳ ಮಳೆಗರೆದಂತೆ ಭಾಸವಾಗುತ್ತಿತ್ತು. ಸಾಮ್ರಾಟ ಪಾಷಾಣ ವರ್‍ಮನು ಮುಗ್ಧನಾಗಿಬಿಟ್ಟ.

ಪುಷ್ಪೆಯು ಆ ದಿನ ತನ್ನ ಕೌಶಲ್ಯಕ್ಕೆ ಕಳಸವನ್ನೇರಿಸಿಬಿಟ್ಟಳು. ಅವಳ ಮಧುರಾಲಾಪದಿಂದ ಬೆಳದಿಂಗಳಿನ ಮಳೆ ಸುರಿಯುತ್ತಿತ್ತೆಂದಮೇಲೆ ಅವಳ ಮೋಹಕವಾದ ನೃತ್ಯವು ಆ ಬೆಳದಿಂಗಳಿನಲ್ಲಿ ಕುಳಿತ ಸರಸ್ವತಿಯ ವಿಣಾವಾದನದಂತೆ ಭಾಸವಾಗುತ್ತಿತ್ತೆಂಬುದರಲ್ಲಿ ಆಶ್ಚರ್‍ಯವೇನು?

ಆದರೆ ಅವಳ ಗೀತದಲ್ಲಿಯ ಅರ್‍ಥದ ಕಡೆಗೆ ಯಾರ ಲಕ್ಷ್ಯವೂ ಇದ್ದಿಲ್ಲ. ಅವಳ ಒಂದು ಗೀತವು, ಮಧ್ಯರಾತ್ರಿಯಲ್ಲಿ ಹಾಸಿಗೆಯ ಮೇಲೆ ತಳಮಳಿಸುತ್ತಿರುವ ರಾಜಪುತ್ರನ ಹೃದಯದ ಕೂಗನ್ನು ವ್ಯಕ್ತಮಾಡುತ್ತಿತ್ತು. ಆ ರಾಜಪುತ್ರನು ಬಹುತರವಾಗಿ ಬುದ್ಧನೇ ಆಗಿರಬೇಕು! ಆತನ ಹೃದಯವು
ಹೇಳುತ್ತಿತ್ತು:-

“ನಾನಿಲ್ಲಿ ಮಂಚದಮೇಲೆ ಮಲಗಿಕೊಂಡಿದ್ದೇನೆ. ಆದರೆ ಹೊರಗೆ-?

ಹೊರಗೆ ಅನಾಥರು-ವಿಕೃತರು, ಬಡಬಗ್ಗರು, ತೊಯ್ದ ಭೂಮಿಯಮೇಲೆ, ಹೊಟ್ಟೆಯಲ್ಲಿ ಕಾಲಿರಿಸಿಕೊಂಡು ಮುದ್ದೆಯಾಗಿ ಬಿದ್ದಿರುವರು.

ಹಸಿವೆ ಇಲ್ಲದ ಮೂಲಕ ಬಡಿಸಿಟ್ಟ ಪಕ್ವಾನ್ನಗಳನ್ನು ಹೆಸರಿಗೆ ಮಾತ್ರ ಮುಟ್ಟಿ ನಾನು ಈಗಲೆ ಎದ್ದು ಬಂದೆ. ಆದರೆ ಹೊರಗೆ?

ಹೊರಗೆ, ನೆಲದಮೇಲೆ ಬಿದ್ದ ತಂಗಳು ಒಣ ರೊಟ್ಟಿಯ ತುಣಕುಗಳನ್ನು ತಿಂದೂ ಹಸಿವೆ ಹಿಂಗದ್ದರಿಂದ ಅತ್ತು ಬೇಸತ್ತು, ಬಡಬಗ್ಗರ ಮಕ್ಕಳುಗಳು ನಿದ್ರೆ ಹೋಗಿವೆ

ಮಂಚದ ಮೇಲೆ ಮಲಗಿಕೊಂಡಿರುವ ನನ್ನ ಹೆಂಡತಿಯ ಮೈಮೇಲಿನ ರತ್ನಗಳು ದೀಪಪ್ರಕಾಶದಲ್ಲಿ ಚಕಚಕ ಹೊಳೆಯುತ್ತಿವೆ. ಆದರೆ ಹೊರಗೆ?-

ಹೊರಗೆ ಅಸಂಖ್ಯ ತಾಯಂದಿರು, ತಂಗೆಂದಿರು, ಹೆಂಡಂದಿರು, ಹೆಣ್ಣು ಮಕ್ಕಳು, ಇದೇ ಕ್ಷಣಕ್ಕೆ ತಳಮಳಿಸುತ್ತಿರಬೇಕು. ಕಪೋಲಗಳ ಮೇಲೆ ಹರಿದು ಬಂದ ಕಂಬನಿಗಳೇ ಅವರ ಅಲಂಕಾರ.

ನನಗೆ ನಿದ್ರೆ ಬರುವದಿಲ್ಲ. ಯಾವಾಗ್ಗೆ ಒಮ್ಮೆ ಬೆಳಗಾದೀತೆಂದು ದಾರಿನೋಡುತ್ತಿರುವೆ. ರಮ್ಯ ಉಷಃಕಾಲವು ಆಗುವದು ಯಾವಾಗ್ಗೆ ಅನ್ನುವೆ. ಆದರೆ ಹೊರಗೆ?-

ಹೊರಗಿನ ಬಡಬಗ್ಗರಿಗೆ, ದೀನ ಹೀನರಿಗೆ, ಅನಾಥ ಅಪಂಗರಿಗಾದರೂ ಹೀಗೆಯೇ ಅನಿಸುತ್ತಿರಬಹುದೇ? ಛೆಃ! ಉಷಃಕಾಲವೆಂದರೆ ಲಗ್ನದಲ್ಲಿಯ ಲಾಜಾ ಹೋಮದಂತೆ ಎಂದು ಅನಿಸುವದು ನನಗೆ ಮಾತ್ರ. ಆದರೆ ಅವರಿಗೆ? ವಧ್ಯ ಪಶುವಿಗೆ ಯಜ್ಞದಲ್ಲಿಯ ಹೋಮವೆಂದಾದರೂ ಸೇರುವದುಂಟೆ? ಉಷಃಕಾಲವೆಂದರೆ ಮತ್ತೊಂದು ಕಠಿಣತರವಾದ ಹೊಸ ದಿವಸ! ಅಂಥ ಹೊಸದಿವಸದ ಉದಯವಾಗುವದಕ್ಕಿಂತ ಆ ರಾತ್ರಿಯೇ ಕಾಲರಾತ್ರಿಯಲ್ಲಿ ರೂಪಾಂತರವಾಗಬೇಕೆಂದೆನಿಸುತ್ತಿರಬೇಕು ಅವರಿಗೆ.

ಹಿಮಾಲಯದ ವೃಕ್ಷ ಛಾಯೆಯಲ್ಲಿ ಅಲೆದಾಡುವ ಮನುಷ್ಯನಿಗೆ ಮಧ್ಯಾನ್ನದ ಸೂರ್‍ಯಕಿರಣಗಳು ಚಂದ್ರಕಿರಣಗಳಂತೆಯೇ ಭಾಸವಾಗುವವು. ಪುಷ್ಪೆಯಗಾಯನ ಮಾಧುರ್‍ಯದ ಮೂಲಕ ಗೀತದಲ್ಲಿಯ ಪ್ರಚುರ ವಿಚಾರಗಳ ಕಡೆಗೆ ಯಾರದೂ ಲಕ್ಷ್ಯ ಹೋಗಲಿಲ್ಲ.

ಗಾಯನವು ಮುಗಿಯಿತು. ನೃತ್ಯವೂ ಮುಗಿಯುತ್ತ ಬಂದಿತು. ಪುಷ್ಪೆಯ ಕಾಲೊಳಗಿನ ನೂಪುರಗಳೊಳಗಿಂದ “ನಮೋ ಬುದ್ಧಾಯ, ನಮೋ ಬುದ್ಧಾಯ” ಅನ್ನುವಂತೆ ಧ್ವನಿಯು ಸ್ಪಷ್ಟವಾಗಿ ಕೇಳಬರಹತಿತು. ‘ಶತ್ರು ಪಕ್ಷದಲ್ಲಿಯ ಈ ವೇಶ್ಯೆಯು ಸಾಮ್ರಾಟನ ಎದುರಿನಲ್ಲಿಯೇ ಅವನನ್ನು ಅಣುಕಿಸುವಳಲ್ಲ’ ಎಂದು ಸರದಾರರಿಗೆ ಅನಿಸಿತು. ಅವರೊಳಗಿನವನೊಬ್ಬನು ಖಡ್ಗಕ್ಕೆ ಕೈ ಹಾಕಿ ಎದ್ದನು ಸಹ. ಆದರೆ ನೃತ್ಯದಲ್ಲಿ ತಲ್ಲೀನನಾಗಿ ಹೋದ ಅರಸನನ್ನು ನೋಡಿದ ಕೂಡಲೆ ಪುಷ್ಪೆಯನ್ನು ಅಡ್ಡಗಟ್ಟುವ ಧೈರ್‍ಯವು ಆತನಿಗಾಗಲಿಲ್ಲ.

ನೃತ್ಯವೂ ಮುಗಿಯಿತು. ಎಲೆಯಡಿಕೆಯ ಸಮಾರಂಭದ ಕಾಲದಲ್ಲಿ ಪುಷ್ಪೆಯು ಅತ್ತರವನ್ನು ಹಚ್ಚಿಕೊಳ್ಳಲಿಕ್ಕೆ ಒಪ್ಪಲಿಲ್ಲ. ಅರಸನಿಗೆ ಆಶ್ಚರ್‍ಯವಾಯಿತು. ವೇಶ್ಯೆಗೆ ಸುಗಂಧದ ವಿಷಯದಲ್ಲಿ ಬೇಸರವೇ? ಅವನು ಕೇಳಿದ. “ನರ್‍ತಕಿ, ನಿನಗೆ ಸುಗಂಧ ಸೇರುವದಿಲ್ಲವೇ?”

“ಸೇರುವದು, ಮಹಾರಾಜರೆ! ನನಗೆ ಹೂಗಳನ್ನು ಕೊಡಿರಿ, ಒಂದು ವೇಳೆ ವಾಸನೆ ಇಲ್ಲದಿದ್ದರೂ ಅವುಗಳನ್ನು ಆನಂದದಿಂದ ಸ್ವೀಕರಿಸುವೆ.”

ರಣಾಂಗಣದಲ್ಲಿ ಹೂಗಳೆಲ್ಲಿ ದೊರೆಯಬೇಕು? ವೇಶ್ಯೆಯು ಸಾಮ್ರಾಟನ ಸತ್ವ ಪರೀಕ್ಷೆಯನ್ನೇ ಮಾಡುವಂತಾಯಿತು.

ಅರಸನು ನಗುತ್ತ ಹೇಳಿದ “ನರ್‍ತಕಿ, ಅತ್ತರವನ್ನು ಹೂವಿನಿಂದಲೇ ಮಾಡುವರು.”

“ಹೌದು ಮಹಾರಾಜರೆ, ಆದರೆ ಅತ್ತರವೆಂದರೆ ಹೂವಿನ ರಕ್ತ! ನನಗೆ ಬೇಕಾದದ್ದು ಸಜೀವ ಸುಗಂಧ! ಎರಡನೆಯವರ ಜೀವ ತೆಗೆದು ಕೊಳ್ಳುವದರಲ್ಲಿ ಸಿಗುವ ಆನಂದದ ಕಲ್ಪನೆಯು ನನ್ನಂಥ ನರ್‍ತಕಿಗೆ ಎಲ್ಲಿಂದ ಬರಬೇಕು?”

ಅರಸನ ಕಣ್ಣುಗಳು ಮಂಗಳನಂತೆ ಹೊಳೆದವು. ಇನ್ನು ಮೇಲೆ ಅವಳ ತಲೆ ಹೊಡೆಯುವ ಆಜ್ಞೆಯೂ ಹೊರಬೀಳುವದೆಂದು ಎಲ್ಲರಿಗೂ ಅನಿಸಿತು. ಪಾಷಾಣವರ್‍ಮನು ಅವಳನ್ನು ದಿಟ್ಟಿಸಿ ನೋಡುತ್ತಿದ್ದ. ಕ್ಷಣಾರ್‍ಧದಲ್ಲಿಯೇ ಆತನ ಕಣ್ಣುಗಳಲ್ಲಿಯ ಮಂಗಳನ ತೇಜಸ್ಸು ಶುಕ್ರನದಾಗಿ ರೂಪಾಂತರ ಹೊಂದಿತು.

ನರ್ತಕಿಯು ಹೊರಟು ಹೋದಳು. ಅರಸನು ಮಂಚಕದ ಮೇಲೆ ಮಲಗಿಕೊಂಡ. ಮರುದಿವಸದ ಯುದ್ಧದ ವಿಷಯದಲ್ಲಿ ವಿಚಾರ ಮಾಡುತ್ತಿರುವಾಗ ಕ್ಷಣಕ್ಷಣಕ್ಕೂ ಆತನ ವಿಚಾರಮಾಲಿಕೆಯು ಹರಿದು ಬೀಳುತಿತ್ತು. ಹೀಗೆ ಯಾಕಾಗಬೇಕು? ಅವನು ಎದ್ದು ಹೊರಗೆ ಬಾಗಿಲ ಕಡೆಗೆ ಬಂದ. ದೂರಿನ ದಿನ್ನೆಯ ಹಿಂದಿನಿಂದ ಅದೇ ಚಂದ್ರನು ಮೇಲಕ್ಕೆರುತ್ತಿದ್ದ. ಹೊರಗಿನ ಕತ್ತಲೆಯಲ್ಲಿ ಬೆಳಕಿಗೆ ಎಡೆ ಮಾಡಿಕೊಡುವಂತಿತ್ತು. ಆದರೆ ಅರಸನ ಮನದಲ್ಲಿ?- ಮರುದಿವಸದ ಯುದ್ಧಕಿಂತಲೂ, ಆಗಳಿನ ನರ್‍ತಕಿಯೇ ಆತನ ಮನೋಮಂದಿರದಲ್ಲಿ ಹೆಚ್ಚಾಗಿ ಕುಣಿಯುತ್ತಿದ್ದಳು.

ಪಾಷಾಣವರ್‍ಮನು ನರ್ತಕಿಗೆ ಮತ್ತೆ ಬರಹೇಳಿದ. ಆದರೆ ಅವಳು ಶಿಬಿರದ ಹೊರಗೆ ಬಂದೊಡನೆಯೆ, ಯಾರ ಕೂಡ ಒಂದು ಶಬ್ದವನ್ನಾಡದೆ, ಹೋಗಿ ಬಿಟ್ಟಿದ್ದಳು.

ಪಾಷಾಣವರ್‍ಮನು ತನ್ನ ಹಾಸಿಗೆಯಲ್ಲಿ ಒಂದೇ ಸವನೆ ತಳಮಳಿಸಹತಿದ್ದ. ಪ್ರತಿನಿತ್ಯವೂ ವಿಜಯ ಲಕ್ಷ್ಮಿಯ ಮಧುರ ಗೀತೆಗಳನ್ನು ಕೇಳುತಲೇ ನಿದ್ರೆಹೋಗುವವ. ಆದರೆ ಇಂದು ಮಾತ್ರ ವಿಜಯಲಕ್ಷ್ಮಿಯು ವಾಚಾಹೀನಳಾಗಿದ್ದಳು. ವಾಚಾಹೀನಳಾಗದೆ, ಆ ನರ್‍ತಕಿಯ ದಾಸಿಯಾಗಿ ಹೋಗಿದ್ದರೂ ಹೋಗಿರಬಹುದೆಂದು ಆತನಿಗೆ ಅನಿಸಿತು! ಒಂದು ಮಗ್ಗಲಿನಿಂದ ಮತ್ತೊಂದು ಮಗ್ಗುಲಿಗೆ ಹೊರಳುವಾಗ, ದಿಂಬಿನಹತ್ತರವೇ ಇದ್ದ ಖಡ್ಗಕ್ಕೆ ಆತನ ಕೈ ತಾಕಿ ಆದ ‘ಖಣ್’ ಎಂಬ ಸಪ್ಪಳವು ಆತನಿಗೆ ಕರ್‍ಕಶತರವಾಗಿ ಕೇಳಬಂದಿತು; ಮತ್ತು ಅದೇ ಕ್ಷಣಕ್ಕೆ ನೃತ್ಯವನ್ನು ಮುಗಿಸುವಾಗ ನರ್‍ತಕಿಯು ನೂಪುರದಿಂದ ಹೊರಗೆಡವಿದ “ನಮೋ ಬುದ್ಧಾಯ, ನಮೋ ಬುದ್ಧಾಯ’ ಎಂಬ ಶಬ್ದಗಳು ಆತನ ಕಿವಿ ಗಳಲ್ಲಿ ದುಮುಕತೊಡಗಿದವು.

ಹೆಚ್ಚಾಗಿ ಸೆಕೆಯಾಗಹತ್ತಿತೆಂದರೆ, ಅದರ ಹಿಂದಿನಿಂದ ಮಳೆಯೂ ಬರುವದುಂಟು. ಇನ್ನು ಮುಂದೆ ತನ್ನ ಕಣ್ಣುಗಳಲ್ಲಿ ಕಂಬನಿಗಳೆಲ್ಲಿ ನಿಲ್ಲುವವೋ ಏನೋ ಎಂಬ ಭಯವು ಅರಸನ ಮನವನ್ನು ಆವರಿಸಿಬಿಟ್ಟಿತು. ಕೂಡಲೆ ಆತನಿಗೆ ಸಂಜೆಯ ಮುಂದಿನ ತನ್ನ ಶಬ್ಬಗಳೇ ನೆನಪಿಗೆ ಬಂದವು “ಕಣ್ಣೀರು ಅಳ್ಮನವುಳ್ಳವರ ಕಣ್ಣುಗಳ ವೈಭವ!” ನೃತ್ಯದಿಂದ ಭಾವನಾಮಯವಾದ ಮನಸ್ಸನ್ನು ಕಠೋರವಾಗಿ ಮಾಡಲೇಬೇಕು. ಆಯಿತು! ಇನ್ನು ಮುಂದೆ ಒಂದೇ ಮಾರ್‍ಗ! ಈಗಿಂದೀಗಲೇ ಮಧ್ಯ ರಾತ್ರಿಯಲ್ಲಿ ರಣಾಂಗಣಕ್ಕೆ ಹೋಗಿ, ಆ ಹೆಣಗಳ ಆ ರಾಶಿಯಲ್ಲಿ ನರ್‍ತಕಿಯ ಸುಂದರ ಮೂರ್ತಿಯನ್ನು ಹುಗಿದು ಬಿಡುವದು! ನಾಯಿ ನರಿಗಳು ಹೆಣಗಳನ್ನು ಹರಿಯುವಾಗ ಬರುವ ಭಯಂಕರ ಸಪ್ಪಳವು ಒಮ್ಮೆ ಕಿವಿಯಲ್ಲಿ ಸೇರಿತೆಂದರೆ ನೂಪುರಗಳ ಮಂಜುಳಧ್ವನಿಯು ತಾನಾಗಿಯೇ ನನ್ನ ಮನ ದೊಳಗಿಂದ ಕಾಲ್ದೆಗೆಯುವದು.

ಪಾಷಾಣವರ್‍ಮನು ಏಕಾಕಿಯಾಗಿಯೇ ಶಿಬಿರದ ಹೊರಗೆ ಬಂದನು! ಬೆಳದಿಂಗಳಿನಬದಲಾಗಿ ಗಿಡಗಳ ಬುಡದಲ್ಲಿಯ ನೆರಳುಗಳ ಕಡೆಗೆಯೇ ನೋಡುತ್ತ ರಣಾಂಗಣಕ್ಕೆ ಸಮೀಪಿಸಿದ. ಆತನ ಹೆಜ್ಜೆಯ ಸಪ್ಪಳ ಕೇಳಿ ದೊಡನೆಯೆ, ನರಿಯೊಂದು ಸರನೆ ಓಡಿ ಮಾಯವಾಯಿತು. ತನ್ನ ಮನಸ್ಸಿನಲ್ಲಿಯ ನಿರ್‍ಬಲವಿಚಾರಗಳಾದರೂ ಅದರಂತೆಯೇ ಓಡುವವೆಂದು ಆತನಿಗೆ ಭಾಸವಾಯಿತು.

ಆಳವಾದ ಬಾವಿಯೊಳಗಿಂದ ಕೇಳಬರುವಂತೆ “ನೀರು, ನೀರು” ಎಂಬ ಶಬ್ದಗಳು ಕೇಳಬಂದವು.

ಕಠೋರವಾಗಹತ್ತಿದ್ದ ಅರಸನ ಮನವೆಂದಿತು. “ದಿಗ್ವಿಜಯಿಯಾದ ಸಮ್ರಾಟನ ಹತ್ತರ ಸಿಗುವದು ಕೇವಲ ಖಡ್ಗ ಧಾರೆಯ ಕೆನ್ನಿರೇ!”

ಶಬ್ದವು ಕೇಳಬಂದ ಕಡೆಗೆ ಅರಸನು ತನ್ನ ದೃಷ್ಟಿ ತಿರುವಿದ.

ಒಂದು ಮನುಷ್ಯಾಕೃತಿಯು ಲಗುಬಗೆಯಿಂದ ಅತ್ತ ಕಡೆಗೆ ಹೋಗುತಿತ್ತು. ಭೂತ-ಪಿಶಾಚಿಯಾದರೂ ಇರಲಿಕ್ಕಿಲ್ಲವೇ? ಎಂದು ಅರಸನ ಮನಸ್ಸಿನಲ್ಲಿ ಸಂಶಯ ಉಂಟಾಯಿತು. ಅವನು ತುಸು ಮುಂದಕ್ಕೆ ಹೋದ. ಯಾವಳೋ ಒಬ್ಬಳು ಸ್ತ್ರೀಯಂತಿದ್ದಳು! ಅವಳ ಲಗುಬಗೆಯ ನಡಿಗೆಯಲ್ಲಿಯೂ ತಾಲಬದ್ಧತೆಯಿತ್ತು! ಯುದ್ಧದಲ್ಲಿ ಮಡಿದ ತನ್ನ ವಲ್ಲಭನನ್ನು ಹುಡುಕುವದಕ್ಕಾಗಿ ಬಹುತರವಾಗಿ ನಗರದೊಳಗಿಂದ ಬಂದಿರಬಹುದು!

ಅರಸನ ಕುತೂಹಲವು ಹೆಚ್ಚಾಗಿ ಬೆಳೆಯಹತ್ತಿತು. ಸದ್ದು ಮಾಡದೇ ಆ ಸ್ತ್ರೀಯ ಬೆನ್ನು ಹತ್ತಿದ. ಸ್ವಲ್ಪ ದಿಟ್ಟಿಸಿ ನೋಡಿದಾಗ ಅವಳ ಕೈಯ್ಯಲ್ಲಿ ಏನೋ ಕಾಣುತ್ತಿತ್ತು. ತನ್ನ ವಲ್ಲಭನು ಕೊಟ್ಟ ಪ್ರೀತಿಯ ಕಾಣಿಕೆಯಾಗಿರಬಹುದೇ ಅದು?

‘ನೀರು, ನೀರು’ ಎಂದು ಶಬ್ದ ಹೊರಡುವ ಸ್ಥಳದ ಹತ್ತಿರ ಸ್ತ್ರೀಯು ನಿಂತಳು. ಅವಳು ಕೆಳಗೆ ಬಗ್ಗಿ ಕ್ಷಣಹೊತ್ತು ದಿಟ್ಟಿಸಿ ನೋಡಿ, ಸೆರಗಿನಿಂದ ಕಣ್ಣೊರಿಸಿಕೊಂಡಳು. ಅಲ್ಲಿಯೇ ಕೆಳಗೆ ಕುಳಿತು, ಕೈಯೊಳಗಿನ ಪಾತ್ರೆಯಿಂದ ನೀರನ್ನು, ನೀರಡಿಕೆಯಿಂದ ವ್ಯಾಕುಲನಾದ ಆ ಮನುಷ್ಯನಿಗೆ ಅವಳು ಗುಟುಕುಗುಟುಕಾಗಿ ಕುಡಿಸಿದಳು. ಆ ಸ್ತ್ರೀಯ ಮುಖವನ್ನಾದರೂ ನೋಡಬೇಕೆಂಬ ಇಚ್ಛೆಯು ಅರಸನಲ್ಲಿ ತೀವ್ರವಾಗಿ, ಅವನು ಮುಂದಕ್ಕೆ ಬಂದ. ಕೂಡಲೆ ಆ ಸ್ತ್ರೀಯು ಬೆದರಿ ಮೇಲಕ್ಕೆ ನೋಡಿದಳು. ನರ್‍ತಕಿಯಾದ ಪುಷ್ಪೆಯೇ ಅವಳು! ಬಂದವನು ಪಾಷಾಣವರ್‍ಮನೆಂದು ತಿಳಿದ ಕೂಡಲೆ ಅವಳು ಒಮ್ಮೆಲೆ ಮೋರೆ ತಿರುವಿ ಉದ್ಗಾರತೆಗೆದಳು “ಛೀಃ! ನಾಯಿ ನರಿ!”

ಅವಳ ಉದ್ಗಾರದಿಂದ ಅರಸನಿಗೆ ಕೋಪಬಂದಿತು. ಆದರೆ ಗಾಯ ಹೊಂದಿದ ಆ ಮನುಷ್ಯನನ್ನು ತೋರಿಸುತ್ತ ಅವನು ಕೇಳಿದ.

“ಇವನು ಯಾರು?”” ನಿನಗೇನಾಗಬೇಕು.?

“ನನಗೆ? ಅಣ್ಣನಾಗಬೇಕು”

“ಅಣ್ಣನೇ?”

“ಹೌದು! ನೀವಾದರೂ ನನಗೆ ಅಣ್ಣಂದಿರೇ, ಒಬ್ಬನೇ ಈಶ್ವರನು ನಮ್ಮೆಲ್ಲರನ್ನು – ಅಣ್ಣ-ತಮ್ಮಂದಿರೆಲ್ಲರೂ ಒಬ್ಬರಂತೆ ಇನ್ನೊಬ್ಬರು ಇರುವರೆಲ್ಲಿ”-

ಸಮ್ರಾಟನು ಸ್ತಂಭಿತನಾದ. ಆದರೆ ಆಗಳಿನ ‘ನಾಯಿ ನರಿ’ ಶಬ್ದವು ಅವನ ಹೃದಯದಲ್ಲಿ ಶಲ್ಯದಂತೆ ಚುಚ್ಚುತ್ತಿತ್ತು. ಅವನಂದ “ನಿನ್ನಂಥ ವೇಶ್ಯೆಯು ಇಂಥ ವೇಳೆಯಲ್ಲಿ ರಂಗಮಹಾಲಿನಲ್ಲಿರಬೇಕು. ಇಂಥ ಈ ನರಕದಲ್ಲಿ-”

ಪುಷ್ಪೆಯು ನಗುನಗುತ್ತಲೇ ಹೇಳಿದಳು “ಇದು ನರಕವೇ? ಯಾರು ನಿರ್‍ಮಾಣ ಮಾಡಿದರು ಈ ನರಕವನ್ನು?”

ಅವಳ ಪ್ರಶ್ನೆ ಯು ಅರಸನಿಗೆ ಖಡದ ಏಟಿನಂತೆ ಭಾಸವಾಯಿತು. ಆದರೆ ಈ ವಾಗ್ಯುದ್ಧದಲ್ಲಿ ಶತ್ರುವನ್ನು ಸೋಲಿಸುವದು ಸಾಮಾನ್ಯ ಕೆಲಸವಲ್ಲವೆಂಬುದನ್ನು ಅವನು ತಿಳಿದುಕೊಂಡ.

ಅವನು ಮೃದುವಾದ ಸ್ವರದಲ್ಲಿ ಹೇಳಿದ. “ರಮಣನಿಗೆ ಮದಿರೆಯ ಪಾತ್ರೆಯನ್ನು ತುಂಬಿಕೊಡುವ ಈ ಸಮಯದಲ್ಲಿ-”

ವ್ಯಾಕುಲವಾದ ಜೀವವು ಶಾಂತವಾದ ಮೂಲಕ ಕೃತಜ್ಞ ದೃಷ್ಟಿಯಿಂದ ನೋಡುತ್ತಿದ್ದ ಗಾಯಾಳುವಿನ ಕಡೆಗೆ ಬೆರಳು ಮಾಡಿ ಪುಷ್ಟೆಯು ಉತ್ತರಕೊಟ್ಟಳು. “ಈ ಕ್ಷಣದಲ್ಲಿ ಇವನೇ ನನ್ನ ರಮಣನಾಗಿದ್ದಾನೆ” ಕೈಯಲ್ಲಿಯ ನೀರಿನ ಪಾತ್ರೆಯನ್ನು ಮುಂದಕ್ಕೆ ಮಾಡಿ “ಮತ್ತು ಇಲ್ಲಿ ನೋಡಿದಿರಾ, ಈ ಮದಿರೆಯನ್ನು?”

ಕಾಲಿನ ಒಂದೇ ಒದಿಕೆಯಿಂದ ಅವಳ ಕೈಯಲ್ಲಿಯ ನೀರಿನ ಪಾತ್ರೆಯನ್ನು ಹಾರಿಸಿಬಿಡಬೇಕೆಂಬ ವಿಚಾರವೂ ಅರಸನ ಮನಸ್ಸಿನಲ್ಲಿ ಇಣಿಕಿ ಹೋಯಿತು. ಆದರೆ ಅದು ಕ್ಷಣ ಮಾತ್ರವೇ. ಪುಷ್ಪೆಯನ್ನು ಅಣಕಿಸಬೇಕೆಂದೇ ಅವನಂದ. “ರಂಗ ಮಹಾಲಿನಲ್ಲಿಯ ಪುಷ್ಪಮಾಲೆಗಳ ಸುಗಂಧವೆತ್ತ, ಮತ್ತು ಈ ಹೆಣಗಳ ದುರ್‍ಗಂಧವೆತ್ತ”

ರಣಾಂಗಣದ ಮೇಲೆ ರಾಸಿರಾಸಿಯಾಗಿ ಬಿದ್ದ ಹೆಣಗಳ ಕಡೆಗೆ ನೋಡುತ್ತ ಪುಷ್ಪೆಯು ಕೇಳಿದಳು “ಮಹಾರಾಜರೇ, ಈ ಹೆಣಗಳಾದರೂ ಹೂವುಗಳೇ-ಧರಣೀಮಾತೆಯ ಈ ಸುಕುಮಾರ ಹೂಗಳ ಹರಿದು ಚಿಂದಿ ಚಿಂದಿಯಾಗಿ ಮಾಡಿ ಕೊಂದು ಒಗೆದ ರಾಕ್ಷಸನಿಗೆ ನೀವು ಶಿಕ್ಷೆಮಾಡುವಿರಾ?

ಚಂದ್ರನ ಮೇಲೆ ಮೋಡಗಳು ಬಂದವು. ಅರಸನ ಮುಖದಮೇಲೆ ವಿಲಕ್ಷಣ ವಿಚಾರಗಳ ಛಾಯೆಯು ಕಂಡುಬರುತ್ತಿತ್ತು. ಕ್ಷಣಾರ್‍ಧದಲ್ಲಿ ಮತ್ತೆ ಚಂದ್ರನ ನಗುಮೊಗವು ಮೇಘಗಳಾಚೆಯಿಂದ ಕಂಡುಬಂದಿತು. ಅರಸನು ಪುಷ್ಪೆಯ ಹತ್ತಿರದಲ್ಲಿ ಬಂದು ಪ್ರಶ್ನೆ ಮಾಡಿದ “ನರ್‍ತಕಿ, ನೀನು ನನ್ನ ಪಟ್ಟರಾಣಿಯಾಗುವಿಯಾ?”

ಪುಷ್ಪೆಯು ನಿರುತ್ತರಳಾದಳೆಂದು ಅರಸನಿಗೆನಿಸಿತು. ರಮಣಿಯರ ಮನಸ್ಸಿನ ಮೇಲೆ ವಿಜಯ ಸಂಪಾದಿಸುವದೆಂದರೆ ದಿಗ್ವಿಜಯಕ್ಕಿಂತಲೂ ಕಠಿಣತರ! ಸಮ್ರಾಟನು ಮತ್ತೆ ಅಭಿಮಾನದಿಂದ ಕೇಳಿದ.

“ಯಾಕೆ, ಏನು ವಿಚಾರ ಮಾಡುವಿ?”

ಪುಷ್ಪೆಯ ಕಣ್ಣುಗಳ ಮುಂದೆ ಈ ಮಧ್ಯರಾತ್ರಿಯ ಬದಲಾಗಿ ಇನ್ನೊಂದು ಮಧ್ಯರಾತ್ರಿಯ ಸಮಯವು ಕುಣಿಯುತ್ತಿತ್ತು, ರಣಾಂಗಣವು ರಂಗಮಹಾಲಾಯಿತು, ತಾರೆಗಳು ಅತ್ತರಿನ ದೀಪಗಳಾಗಿ ಉರಿಯಹತ್ತಿದವು ಮತ್ತು ಎದುರಿನಲ್ಲಿಯ ಸಮ್ರಾಟ ಪಾಷಾಣವರ್‍ಮನ ಬದಲಾಗಿ, ಅವಳಿಗೆ ಕಾವಿಯ ವಸ್ತ್ರಗಳನ್ನು ಧರಿಸಿದ ಸುಂದರ ತರುಣ ಬುದ್ಧಭಿಕ್ಷುವು ಕಾಣಿಸತೊಡಗಿದ. ಮಧ್ಯರಾತ್ರಿಯ ಸಮಯದಲ್ಲಿ ಕಪಟದಿಂದ ಮರಣೋನ್ಮುಖ ಮನುಷ್ಯನಿಗೆ ಧೈರ್‍ಯ ಹೇಳಲಿಕ್ಕೆ ತಾನು ಅವನನ್ನು ತನ್ನ ಮಹಲಿನಲ್ಲಿ ಬರಮಾಡಿಕೊಂಡಿದ್ದಳು. ವಿಶ್ರಾಂತಿಯ ಸಲುವಾಗಿಯೆಂದು ಮಂಚಕದ ಮೇಲೆ ಕುಳಿತು ಉಪದೇಶ ತೆಗೆದುಕೊಳ್ಳುವ ನೆವದಿಂದ, ತಾನು ಆತನ ಪಾದಗಳನ್ನು ಸ್ಪರ್‍ಶಿಸಿದಳು. ಆಗಿನ ತನ್ನ ಲಾವಣ್ಯ-ಆ ವೇಷ-ಭೂಷಣ-ಬಿಸಿಲುಗಾಲದಲ್ಲಿ ಹಿಮಾಲಯದಿಂದ ಪೂರ ಬರದೆ ನಿಲ್ಲುವದೇ? ಭಿಕ್ಷುಕನು ತನ್ನ ಕಡೆಗೆ ದಿಟ್ಟಿಸಿ ನೋಡತೊಡಗಿದ. ಅವನು ತುಸು ಮುಂದಕ್ಕೆ ಸರಿದು ಶಿರಬಾಗಿಸಿದ ಕೂಡ ಆದರೆ ಅಷ್ಟರಲ್ಲಿ-

ಆಚೆಯ ಕೋಣೆಯೊಳಗಿಂದ ಬೇನೆಯಿಂದ ಬಳಲುತ್ತಿದ್ದ ತನ್ನ ತಾಯಿಯ ನರಳುವಿಕೆಯು ಕೇಳಬಂದಿತು. “ನನ್ನ ಮಿತ್ರ ಅಲ್ಲಿರುವನೆಂದು ಕಾಣುತ್ತದೆ” ಅನ್ನುತ್ತ ಅವನು ಅತ್ತ ಕಡೆಗೆ ಹೊರಟುಹೋದ. ಅವಳಿಗೆ ಸಮಾಧಾನವೆನಿಸುವಂತೆ, ಅವಳಿಗೆ ತನ್ನ ಶರೀರದ ಆಧಾರ ಕೊಟ್ಟು, ಅವಳ ಹತ್ತಿರವೇ ಇಡೀ ರಾತ್ರಿಯನ್ನು ಕಳೆದ.
ಅವನು ಅಲ್ಲಿಂದ ಮರುದಿವಸ ಮುಂಜಾನೆ ಹೋಗಿ ಬಿಟ್ಟ, ಆದರೆ ತನ್ನ ಮನೋಮಂದಿರದೊಳಗಿಂದ? ಛೇ! ಇಂದಿಗೆ ಮೂರುವರುಷಗಳಾದವು. ಪುಷ್ಪೆಯ ಮೌನವು ಅರಸನಿಗೆ ಸಮ್ಮತಿ ದರ್‍ಶಕವಾಗಿರಬಹುದೆಂದೆನಿಸಿತು. ಅವನು ಗೆಲುವಿನ ದನಿಯಲ್ಲಿ ಕೇಳಿದ “ಆಗುವಿಯಲ್ಲವೇ, ಅಲ್ಲಿಂದ ನೀನು ನನ್ನ ಪಟ್ಟದರಾಣಿ?”

ಪುಷ್ಪೆಯು ನಸುನಗುತ್ತ ಉತ್ತರ ಹೇಳಿದಳು “ಆಗುವೆ. ಆದರೆ ಒಂದು ಕಟ್ಟಿಗೆ ನೀವು ಒಪ್ಪಬೇಕು….”

“ದಿಗ್ವಿಜಯಿಯಾದ ಸಮ್ರಾಟನಿಗೆ ಕಟ್ಟುಗಳದೇನು ಪರಿವೆ?”

“ಅಂಥಾದ್ದೇನೂ ಕಠಿಣವಾಗಿಲ್ಲ ನನ್ನ ಕಟ್ಟು-”

ಕಠಿಣವಾಗಿರಲೀ ಎಂತಹದೇ ಇರಲಿ; ಇಷ್ಟು ಸೈನ್ಯವಿದೆಯಲ್ಲ ನನ್ನ ಬೆನ್ನ ಹಿಂದೆ!”

“ಆದರೆ ಹೃದಯದಲ್ಲೇನಿದೆ?”

ಅರಸನು ಮನದಲ್ಲಿಯೇ ಬೆಚ್ಚಿದ. ಅವನು ವ್ಯಾಕುಲಸ್ವರದಲ್ಲಿ ಕೇಳಿದ, “ಏನಿದೆ, ನಿನ್ನ ಆ ಕಟ್ಟು?”

“ಸಂನ್ಯಾಸ ತೆಗೆದುಕೊಳ್ಳಬೇಕು ನೀವು. ಆ ಮೇಲೆ-”

ಎರಡನೆ ಕಡೆಯಿಂದ ‘ನೀರು ನೀರು’ ಎಂದು ಮತ್ತೆ ಧ್ವನಿ ಕೇಳ ಬಂದಿತು. ‘ನಮೋ ಬುದ್ಧಾಯ, ನಮೋ ಬುದ್ಧಾಯ’ ಅನ್ನುತ್ತ ಪುಷ್ಪೆಯು ಆ ಕಡೆಗೆ ಹೋಗಿಬಿಟ್ಟಳು.
* * *

ಕವಿಯು ಮೃತ ಮಿತ್ರನ ಶೋಧಕ್ಕಾಗಿ ಮುಂಜಾವಿನ ನಸುಕಿನಲ್ಲಿ ರಣಾಂಗಣಕ್ಕೆ ಬಂದ. ಒಮ್ಮೆಲೆ ಒಂದು ಕಾರುಣ್ಯಮಯವಾದ ಸ್ಪಂದನವು ಅವನಿಗೆ ಕೇಳಬಂದಿತು. ಗಾಯಹೊಂದಿದವರಲ್ಲಿ ಯಾರಾದರೂ ನರಳುತ್ತಿರಬಹುದೇ? ಛೇ! ಯಾರೋ ಬಿಕ್ಕಿ ಬಿಕ್ಕಿ ಅಳುವಂತಿತ್ತು. ಕವಿಯು ಕಳವಳದಿಂದ ಅತ್ತ ಕಡೆಗೆ ಹೋಗಿ ದಯಾಮಯ ಧ್ವನಿಯಲ್ಲಿ ಕೇಳಿದ “ಯಾರಪ್ಪಾ ನೀನು? ಏನಾಗಿದೆ ನಿನಗೆ?”

ಕಂಬನಿ ಸುರಿಸುತ್ತಿರುವ ವ್ಯಕ್ತಿಯು ಮುಖವನ್ನು ಮೇಲಕ್ಕೆ ಮಾಡುತಲೇ ಪ್ರಭಾತದ ಕಾಂತಿಹೀನವಾದ ಚಂದ್ರಪ್ರಕಾಶದಲ್ಲಿ ಕವಿಯು ನೋಡಿದ ಸಮ್ರಾಟ ಪಾಷಾಣವರ್‍ಮ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೮
Next post ಸಾಕು ತಾಯಿ, ಹಾಲು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…