ಮಣ್ಣು ಹೊನ್ನಹುದೆಂದು ಅರಿಯರೇಕೋ ಜನರು
ಕೊಟ್ಟ ಕಾಳನು ನುಂಗಿ ಫಲವೃಂದಮೀವುದಲ
ಒಂದು ಬೀಜವ ಕೊಂಡು ಜನಜಗಕೆ ಜೀವಮಂ
ಹರ್ಷದಿಂದೀವುದೀ ಮಣ್ಣೆ ಮಗ ಕಾರ್ಯಸಿದ್ದಿ.
ಆವ ಕಾಲದೊಳಾವ ದೇಶದಲಿ ಆವ ಜನ-
ಕಾವ ಫಲ ಸವಿಯೊಗರು ಕಹಿ ಸಪ್ಪೆ ಹುಳಿಯೆನಿಸಿ
ಫಲಧಾನ್ಯಮಮೃತಮಂ ತೆಂಗು ಕೌಂಗು ರಸಾಲ
ಹಲಸುಗಳ ಕೊಳ್ಳಿರನ್ನುತ ನೀಡಿ ಸಲಹುವುದು.
ಬೆಚ್ಚನೆಯ ಮನೆಯಿರಲು ನಿಂತು ನಡೆಯಲು ಭೂಮಿ
ಮೊದಲಿಂದ ಕೊನೆತನಕ ಉಸಿರಾಡಲೀ ಗಾಳಿ
ಹಚ್ಚ ಹಸುರುಗಳಿತ್ತು ಹೊತ್ತು ಹೊಸ ಪರಿಮಳವ
ಎಮ್ಮ ಮೂಗಿಗೆ ತಂದು ಮೈತೀಡಿ ಹರುಷಿಪುದು.
ಕುಸುಮದಲಿ ತೀವಿರುವ ಸವಿಜೇನು ಪಶುಗಳಲಿ
ತುಂಬಿರುವ ಅಮೃತದಂತಹ ಹಾಲು ಶಿಶುವುಣುವ
ತಾಯಿಸ್ತನ್ಯದ ಸವಿಯು ಮಣ್ಣಿತ್ತ ರಸಮಹುದು
ಕ್ಷಣ ಕ್ಷಣಕೆ ಕಾಯುವುದು ಹೊತ್ತ ಮಕ್ಕಳನಿಂತು.
ಹಳೆ ದೇಹವನು ಕೊಂಡು ಹೊಸ ಶರೀರವ ಕೊಟ್ಟು
ಮರೆತ ಬುದ್ಧಿಯ ಮತ್ತೆ ಜ್ಞಾಪಿಸುತ ಬಳೆಸುವುದು
ಹೊಸ ತಿಳಿವ ನೀಡುತ್ತ ಅಲ್ಲಲ್ಲಿ ತಿರುಗಿಸುತ
ಕಷ್ಟ ಸುಖಗಳ ಸವಿಯ ತೋರುತ್ತ ಕಳುಹುವುದು.
*****