ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ|
ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ|
ಹ್ವಾರ್ಯಾನಿಲ್ಲೇನೊ ||
ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ|
ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ|
ನಾರ್ಯಾರಿಲ್ಲೇನೊ |೧|
ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|
ಬಿಚ್ಚಿ ನೋಡಿದರ| ಬಿಳೆಯೆಲಿಯೊ ಬಿಳಿಯೆಲಿಯೊ|
ಬಿಚ್ಚಿ ನೋಡಿದರ||
ಬಿಚ್ಚೀನೆ ನೋಡಿದರ ಬಿಳೆಯೆಽಲಿಯಂಥವಳು|
ಬಿಟ್ಟ ಮಲಗೂದು| ಛೆಂದೇನೊ ಛೆಂದೇನೊ|
ಬಿಟ್ಟಿ ಮಲಗೂದು |೨|
ಬಿಟ್ಟಽರ ಬಿಡಲ್ಯಾಕ ಬಿಗುವೀನ ಮಾತ್ಯಾಕೊ|
ಬಿಟ್ಟಕ್ಕಿ ಮ್ಯಾಲ| ಮನಸ್ಯಾಕೊ ಮನಸ್ಯಾಕೊ|
ಬಿಟ್ಟಕ್ಕಿ ಮ್ಯಾಲ||
ಬಿಟ್ಟಕ್ಕಿಯಽ ಮ್ಯಾಲ ಮನಸ್ಯಾಕೊ ಚಂದರಾಮಾ|
ಕಟ್ಟಿಕಲ್ಲಾಗಿ| ಇರಹೋಗೊ ಇರಹೋಗೊ
ಕಟ್ಟಿಕಲ್ಲಾಗಿ |೩|
ಬಾಳಿ ಕೊಯ್ದರ ತೋಟ ಹಾಳಾದರರಿದೇನೊ|
ಆಳಲ್ದ ರಾಯಾ| ಮಡೆದೀಗೊ ಮಡದೀಗೊ|
ಆಳಲ್ದ ರಾಯಾ||
ಆಳಲ್ದನಽ ರಾಯಾ ಮಡದೀಗಿ ಬಿಟ್ಟರ|
ಬಾಳೆಹಣ್ಣೇನೊ| ಕೆಡಲಾಕೊ ಕೆಡೆಲಾಕೊ|
ಬಾಳಿಹೆಣ್ಣೇನೊ |೪|
ಮಲ್ಲಿಗ್ಹೂವಿನ ದಂಡಿ ಅಲ್ಲಿಟ್ಟ ಇಲ್ಲಿಟ್ಟಿ|
ಕಲ್ಲ ಮ್ಯಾಲಿಟ್ಟ| ಕೈಯಾಗಿಟ್ಟ ಕೈಯಾಗಿಟ್ಟ|
ಕಲ್ಲ ಮ್ಯಾಲಿಟ್ಟ||
ಕಲ್ಲ ಮ್ಯಾಲಽ ಇಟ್ಟ ಕೈಯಾಗಿಟ್ಟ ಚೆಂದರಾಮಾ|
ಪಾದ ಮ್ಯಾಲಿಟ್ಟ| ಶರಣೆಂದ ಶರಣೆಂದ|
ಪಾದ ಮ್ಯಾಲಿಟ್ಟ |೫|
*****