ನಿನ್ನದು ಆ ತೀರ-ನನ್ನದು ಈ ತೀರ
ನಟ್ಟನಡುವಿನಂತರ, ತೆರೆಯ ಅಭ್ಯಂತರ
ಕಿರಿದಹುದು ಕಿರಿದಲ್ಲ-ಹಿರಿದಲ್ಲ ಹಿರಿದಹುದು
ಕಿರುತೊರೆಯ ಅಂತರ-ಕಡಲಿನಂತರ!

ಹರಿಯುವಲೆಗಳಂತೆನ್ನ ಮನಸಿನಾತುರ
ಹರಿಯುತಿದೆ, ಕೊರೆಯುತಿದೆ ಒಲವ ಕಾತರ
ಮೌನದಲ್ಲೆ ಮರುಗಿಸಿದೆ ಹೃದಯದ ಭಾರ
ಕಿರುತೊರೆಯ ಅಂತರ-ಕಡಲಿನಂತರ!

ಮುಗಿಲಿನ ಮಡಿಲಿನಲ್ಲಿ ಮೋಡದ ಮರೆಗೆ
ಮಿಣುಕುತಿರುವ ತಾರೆಗಿಂತ ದೂರ ಆಚೆಗೆ
ಸಾಗುವಾಸೆ ಆಗಿಹೋಯ್ತು-ಎದೆಯ ಸುಡುಹೊಗೆ!
ಕಿರುತೊರೆಯ ಅಂತರ-ಕಡಲಿನಂತರ!

ಈ ತೀರ-ಆತೀರ-ಎಂದೆಂದು ಬಲುದೂರ
ಸಂಧಿಸಲು ಹವಣುಂಟು-ನಟ್ಟನಡುವಿನಂತರ
ಬಲು ಕಿರಿದು ನಾಲ್ಕುಗೇಣು, ಹವಣೆಲ್ಲ ಹುಡಿದಾರ
ಕಿರುತೊರೆಯ ಅಂತರ-ಕಡಲಿನಂತರ!
*****