ಬಟ್ಟೆ ಬದಲಾಯಿಸುತ್ತಾ ಪ್ರಾಚೀನ ವೃಕ್ಷಗಳು
ಎತ್ತಿಹಿಡಿದ ಉಡುಪನ್ನು ನಿಧಾನವಾಗಿ ಧರಿಸುವುದು ಸಂಜೆ.
ನೋಡು: ನೀನು ನಿಂತಲ್ಲಿಂದ ಬಯಲು ಇಬ್ಬಾಗವಾಗಿದೆ,
ಕಣ್ಮರೆಯಾಗುವವರೆಗೂ ಒಂದು ಕೆಳಗೆ ಸಾಗಿದೆ, ಇನ್ನೊಂದು ಮುಗಿಲಿಗೇರಿದೆ.
ನೀನು ಎಲ್ಲಿಗೂ ಪೂರ್ತಿ ಸೇರಿದವನಲ್ಲ,
ನಿಶ್ಯಬ್ದವಾಗಿ ಕತ್ತಲಲ್ಲಿ ನಿಂತ ಮರೆಯವನಲ್ಲ, ರಾತ್ರಿ ಆಕಾಶದಲ್ಲಿ ಮೇಲೇರುತ್ತ
ಅನಂತತೆಯ ವರಿಸಿದ ನಕ್ಷತ್ರವಾಗುವ ಬೆಳಕೂ ನಿನ್ನ ನೆಲೆಯಿಲ್ಲ.
ಮಾತಿಗೂ ಮೀರಿ ಗೊಂದಲಗೊಂಡ ನಿನಗೆ ಉಳಿದಿರುವುದು
ನಿನ್ನ ಬದುಕು, ಮಾಗುತ್ತಿರುವ, ಕಂಬನಿ ತುಂಬಿದ ದೊಡ್ಡ ಬದುಕು,
ಒಮ್ಮೆ ಎಲ್ಲದರ ಒಳಗಾಗುತ್ತ, ಇನ್ನೊಮ್ಮೆ ಎಲ್ಲವನ್ನೂ ತುಂಬಿಕೊಳ್ಳುತ್ತ,
ಈಗ ಕಲ್ಲಾಗಿ ಮತ್ತೊಮ್ಮೆ ತಾರೆಯಾಗಿ ಬದಲಾಗುತ್ತಿರುವ ಬದುಕು.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke