ಕೋಳಿ ಕೂಗುವ ಮುನ್ನ
ಯಾರು ಕರೆದರು ನನ್ನ
ಹೇಳು ಮನಸೇ ಹೇಳು
ಕತೆಯ ನಿನ್ನ
ಗುರುತು ಪರಿಚಯವಿರದ
ದೇಶದಲಿ ನಾನಿರಲು
ಯಾರು ಬಯಸಿದರಿಂದು
ನನ್ನ ಕಾಣಲೆಂದು
ಯಾರೆಂದು ನೋಡಿದರೆ
ಬಾಗಿಲಲಿ ಯಾರಿಲ್ಲ
ಎಲ್ಲಿ ಹೋದರು ಅವರು
ನನ್ನ ಕರೆದವರು
ಬೆಳಕಿನ್ನು ಹರಿದಿಲ್ಲ
ಬೆಳ್ಳಿಯೂ ಮೂಡಿಲ್ಲ
ಚಳಿಗಾಳಿ ಸುಳಿಯುವುದು
ಇನ್ನೆಲ್ಲ ಬರಿದು
ಯಾವುದೋ ನೆನಪೊಂದು
ಬಂದಿತ್ತೆ ನನ್ನ ಬಳಿ
ಕಲ್ಪನೆಯ ಶರಧಿಯಲಿ
ತೇಲಿ ತೇಲಿ
ಏನು ಏತಕೆ ಎಂದು
ತಿಳಿಯದೊಂದೂ ನನಗೆ
ಬಯಸಿ ಕಾಣದ ರೂಪ
ಯಾವ ಮುನಿಯ ಶಾಪ
*****



















