ಒಂಟಿಕಾಲಿನ ಬಕದಂತೆ
ನೀರಿನಲ್ಲಿ ನಿನ್ನ ನೆರಳನೋಡುತ್ತ
ಧ್ಯಾನದ ಮೌನದಲಿ ಬಿಂಬ ಬಯಲಲಿ ಮೂಡಲೆಂದು.

ಕನಸು ಕಾಣುವುದಕ್ಕೆ ಮನಸ್ಸು
ಅರಳಿ ಹೂವಾಗಿ ನೀರ ಮೇಲೆಗಾಳಿ
ತೇಲಿ ಮೈದಡವಿ ಹಾಯ್ದು
ಹಾಯಿಗಳು ತೆರೆದುಕೊಂಡವು
ಬರುವ ಸಪ್ಪಳ ನಿನ್ನಯ ಹೆಜ್ಜೆಗಳೆಂದು.

ದೂರದಲಿ ಹಕ್ಕಿ ಹಾಡು ಕೇಳಿ
ಅರಳಿ ಘಮ್ಮೆಂದು ಸೌರಭಸೂಸಿ
ಪಾರಿಜಾತ ಗಂಧ ತೀಡಿ ಎದೆಯ
ನದಿಯ ತುಂಬ ಅಲೆಗಳು ಅರಳಿದವು
ನಿನ್ನ ಧ್ವನಿ ತೇಲಿತೇಲಿ ಮೋಡಗಳಾದವು ಎಂದು.

ಬಿಸಿಲ ಕುದುರೆ ಏರಿ ಹೊರಟ
ಕನಸುಗಳ ರಾಜ ಅರಮನೆಯ
ಅಂಗಳದಿ ಹಸಿ ಚಿಗುರು ಹಾಡಿ
ಹಾಡಿ ತೇಲಿದ ಹಕ್ಕಿಗಳ ರಾಗದಲಿ
ಮೂಡಿ ಮೊಳಕೆ ಒಡೆಯಿತು ನಿನ್ನ ಇರುವು.

ಮೋಡದ ಆದ್ರತೆ ಮಳೆಯ ತಂಪು
ಹಕ್ಕಿಗಳ ಧ್ವನಿ ಇಂಪು ಹರಿದ ಹೊಳೆಯ
ಕಂಪು ಎಲ್ಲವೂ ತೀಡಿದ ಬಿಂಬದ
ಪ್ರತಿಬಿಂಬ ಅಂಗೈಯಲಿ ಲಿಂಗ
ನಿನ್ನ ನೆರಳು ನನ್ನೆದುರು ಕಂತದೇ ನಿಂತಿದೆ.
*****