ಬಾ ಬಾ ಹೊಸಗಾಳಿಯೆ, ಹಳೆ ಬಾಳಿಗೆ ಬಾ
ಒಣಗಿದೆಲೆಯ ಕಳಚಿ ನಿಂತ ಮೈಯ ತೂರಿ ಬಾ
ಮಳೆಗಾಲದ ನವನೀರದ ಹರಸುವ೦ತೆ ಬಾ
ಬತ್ತಿ ಹೊಲದ ಚಿತ್ತದಲ್ಲಿ ಜಲ ಚಿಮ್ಮಿಸು ಬಾ

ಉದಾಸೀನ ಜೀವಹೀನವಾದುದೆಲ್ಲವೂ
ಕೊನೆಯಿರುಳಿನ ಕಣ್ಣೀರಲಿ ಕೊಚ್ಚಿ ಹೋಗಲಿ;
ಸೃಷ್ಟಿಶಕ್ತಿ ತೀರಿಹೋದ ವಸ್ತುವೆಲ್ಲವೂ
ತನ್ನೊಡಲನು ಹೊಸಸೃಷ್ಟಿಗೆ ತೆರವು ಮಾಡಲಿ

ಬಾ ಬಾ ಹೊಸಗಾಳಿಯೆ ಈ
ಹಳೆ ಬಾಳಿಗೆ ಬಾ,
ಸರಿದುಹೋದ ಹರೆಯವನ್ನು
ಮರಳಿ ತಿರೆಗೆ ತಾ;
ಪ್ರಾಣವೀಣೆಯನ್ನು ದನಿಸಿ
ಕರಣಗಣಕೆ ಕೆಚ್ಚನುಣಿಸಿ
ಕಾಯದ ಕಣಕಣವ ಕುಣಿಸಿ
ಸಾವನೊದ್ದು ಬಾ,

ಚೈತ್ರದ ಹೊಸ ಮೈತ್ರಿಯಲ್ಲಿ
ಜಗವ ಹೂಡು ಬಾ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)