ಕಾಲು ತಾಗಿದ ಮುಳ್ಳು ; ಮೈಯಲ್ಲ ಮುರಿಯುವದು |
ಕಾಯ ತಾಗಿದ ಮುನಿಸು; ಮನವೆಲ್ಲ ಮೆಲ್ಲುವದು ||

ಇಂದಿಲ್ಲ ನಾಳಿಲ್ಲ ಎಂಬೊಂದು ಕುಂದಿಲ್ಲ |
ಭವಹರನ ನೆನೆದೊಡೆ ಎಂದೆಂದು ಭಯವಿಲ್ಲ ||

ಹಾ ತಡೆ ತಡೆ ಓಡದಿರು; ನೋಡು ಮುಂದಿದೆ ತಗ್ಗು |
ಓ ತಡೆ ತಡೆ ದುಡುಕದಿರು; ನೋಡು ಮುಂದಿದೆ ನುಗ್ಗು||

ಎಲೆ ಸುಣ್ಣೆ ಓ ಸುಣ್ಣೆ; ಕುದಿಯುತಿಹ ನೀ ಬಿಳಿ ಬಣ್ಣೆ |
ಬಲೆ ಹೆಣ್ಣೆ ಓ ಹೆಣ್ಣೆ; ಜಗದಳಲಾದ ನೀ ಬಲು ಬೆಣ್ಣೆ ||

ನಂಬದಿರು ನೀರಿನಾಳವ, ಬೂದಿ ಮುಚ್ಚಿದ ಕೆಂಡವ ,
ಮೋಡ ಮುದ ಮುಗಿಲ, ಸುಳ್ಳನಾ ಸವಿ ನುಡಿಯ ||

ನಾ‌ಎಂದು ನುಡಿಯದಿರು ನೀ ಜಂಭದಾ ಹುಂಜದಂತೆ |
ನಾಕಾರವಳಿದು ನಿಜಾತ್ಮನಾಗು ನೀ ನೀಲಕಂಠನಂತೆ||

ಹುಲ್ಲುಂಡು ಹಾಲ್ಗರೆವ ಹಸುವಾಗು ನೀ ನಿಜದಿ |
ಹಾಲುಂಡು ವಿಷಸುರಿವ ಹಾವಾಗದಿರು ಜಗದಿ ||
*****