ನಿನ್ನದೀ ಲೋಕದಲಿ ನಿನ್ನಣತಿಯಂತೆ
ಎನ್ನ ಬದುಕಿರುತಿರಲು ನನಗಿಲ್ಲ ಚಿಂತೆ ||ಪ||
ನಿನ್ನ ಕರುಣ ಬೆಳಕಿನ ಲೀಲೆ,
ಮನದಿ ತಾ ತುಂಬಿರಲು
ಎನ್ನ ಕಾಡುವುದೆಂತು ತಮಸ ತಾಪದಾಽಚಿತೆ, ||ಅ.ಪ.||

ಕರಿ ಕಾರಿರುಳುಗಳು ಬಣ್ಣದೊಳಥಳಕುಗಳು
ಇಡಿಕಿರಿದರೇನಂತೆ ನನ್ನ ಮುಂದೆ,
ಮಾತು ಮೀರಿದ ಮೌನ, ಧ್ಯಾನದೊಳಗಿನ ತನನ
ಲಯದ ಚೆಲ್ವಿರುತಿರಲು ತಾನೆ ಹಿಂದೆ,

ನಾನಿರದ ನನ್ನಲ್ಲಿ ಸಂಕರಗಳೇತರವು,
ನಿನ್ನಳವ ಮೀರಿದಾಽಮೋದ ಯಾನ,
ಹಸಿವು ತೃಷೆ ಬಳಲಿಕೆಯ ಮಾಲಿಕೆಯು ಎನದಲ್ಲ,
ಎಲ್ಲವೂ ನಿನ್ನಯಽ ಮಾನದಭಿಮಾನ,

ನಿನ್ನ ಸಂಸರಣ ಸಂನ್ಯಾಸ ಯಾವ ಕೂಟದ ನೋಟ
ನನ್ನ-ನಿನ್ನಯ ಬಾಳ ಭಾಗ್ಯದಲ್ಲಿ,
ನೋಟದಾಟದ ಮಾಟ ಚಿತ್ತ ಚಿತ್ತಾರದಲಿ
ನೀನೇ ನನ್ನಂದಣದ ನಾಕವಿಲ್ಲಿ |
*****

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)