ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ
ಎಂಥೆಂತಾ ಚಿತ್ರಗಳು, ವಿಚಿತ್ರಗಳು!
ತಾಜಮಹಲು, ಕುತುಬ್‌ಮಿನಾರು
ದೊಡ್ಡಾನುದೊಡ್ಡ ಬಾಹುಬಲಿ
ಮತ್ತಿನ್ನಿನೇನೇನೋ…
ಗರದಿಯವ ಚಕ್ರ ತಿರುಗಿಸಿದಂತೆಲ್ಲಾ
ಬದಲಾಗುವ ಬಣ್ಣದೊಂದಿಗೆ
ಚಿತ್ರವೂ ಬದಲಾಗುತ್ತದೆ ಒಂದಿಗೇ
ನೇಸರ ಬದಲಾದಂತೆಲ್ಲಾ
ಬಣ್ಣ ಬದಲಿಸುವ ಮೇಘದಂತೆ

ಒಂದೊಂದು ಚಿತ್ರದ ನಂತರವೂ
ಹೆಪ್ಪಾದ ಮೌನದ ಜೊತೆಗೆ
ಕಣ್ಣು ಕುಕ್ಕುವ ಕತ್ತಲೆ

ಕಿರುಕಿಂಡಿಗೆ ಹೊಂದಿಕೊಳ್ಳಲಾಗದ
ಕಣ್ಮಿಣುಕಾಟದ ನಡುವೆ
ಅವಸರಿಸುವ ಗರದಿಯವ
ನೋಡುವ ಮೊದಲೇ
ಓಡುವ ಚಿತ್ರಗಳು!

ಗಡಬಡ ಸದ್ದಿನೊಂದಿಗೆ
ಚಿತ್ರ ಥಟ್ಟನೆ ಮುಗಿದು
ಬೆಳ್ಳಾನೆ ಬೆಳ್ಳ ಪರದೆ
ಅನುಭವಿಸುವ ಮೊದಲೇ
ಮುಗಿದು ಹೋಗುವ ಕ್ಷಣಗಳು!

ಕಣ್ಗಳಿಗೆ ಮುಗಿಯದಚ್ಚರಿ
ಪ್ರಶ್ನೆಗಳ ಸಾಲು ಸಾಲು
ನಮ್ಮವಾಗದೇ ಮುಗಿದೇ
ಹೋಗುವ ಕನಸುಗಳು!

ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ
ಎಂಥೆಂತಾ ಚಿತ್ರಗಳು, ವಿಚಿತ್ರಗಳು!
*****