ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ
ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ
ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ
ಮಂದಿರಗಳಲ್ಲಿ ಮಾರಣಹೋಮ ನಡೆದಿದೆ
ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ
ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು
ಬೇರೆ ಸಂದಿನವರನೆಲ್ಲ ಕೊಲ್ಲಲು ಧರ್ಮಾದೇಶ ನೀಡುತ್ತಾನೆ
ತಿಳಿ ಸರೋವರದಂಥ ಕೂಸು ಕಂದಮ್ಮಗಳ ಕಣ್ಣುಗಳಲ್ಲಿ
ಕೆಂಪು ನದಿಗಳ ಭಯಾನಕ ಕನಸುಗಳು
ಮನಮನಗಳು ಸಿಡಿಮದ್ದುಗಳ ಗೂಡುಗಳಾಗಿವೆ
ಮಾತು ಮಾತುಗಳು ವಿಷ ಒಳಗಿಟ್ಟುಕೊಂಡ ಹೂಗಳು
ಮಚ್ಚು ಚಾಕು ಚೈನುಗಳದೇ ಕಾರುಬಾರು
ಓಣಿ ಓಣಿಗಳಲ್ಲಿ ದೇಶದ ಸಂದುಗೊಂದುಗಳಲ್ಲಿ

ಆದರೆ ಮೇಲೆ ಮೇಲೆ ಹಾಡುತ್ತಿದ್ದಾರೆ
‘ಸಾರೆ ಜಹಾನ್‌ಸೆ ಅಚ್ಚಾ ಹಿಂದೋಸ್ತಾನ್ ಹಮಾರಾ’
‘ಈಶ್ವರ ಅಲ್ಲಾ ತೇರೇ ನಾಮ್ ಸಬಕೋ ಸನ್ಮತಿ ದೇ ಭಗವಾನ್’
ದಮ್ಮೇ ಇಲ್ಲದೆ ಹಾಡು ಗಾಳಿಯಲ್ಲಿ ತೇಲಿ ಕರಗಿ ಹೋಗುತ್ತವೆ

ದೇಶ ಸಮಸ್ಯೆಗಳ ಹಾವುಗಳ ಹುತ್ತ
ಒಳಗೊಳಗೇ ಭುಸುಗುಡುತ್ತಿವೆ
ಉಗುಳುತ್ತಿವೆ ವಿಷವ-ಕೊಲ್ಲುತ್ತಿವೆ ಭವಿಷ್ಯವ
ಮೇಲೆ ಕಟ್ಟಿದ ವಲ್ಮೀಕವ ಗುಡಿಯೆಂದು ಭಾವಿಸಿದ್ದಾರೆ
ರಾಮ ರಹೀಮರ ನಡುವೆ ಮುಗಿಲೆತ್ತರ ಗೋಡೆ
ಒಂದನ್ನೊಂದು ನಿರ್ನಾಮ ಮಾಡುವ ದ್ವೇಷ
ತ್ವೇಷದ ಭ್ರಮೆಯ ಪರಿಕಲ್ಪನೆ

ಜಗವೇ ಮನೆಯಾದವಗೆ ಮಂದಿರ ಮಸೀದಿಗಳಲಿ
ಕಟ್ಟಿ ಹಾಕಿದ್ದಾರೆ, ನಿರಾಕಾರ ನಿರ್ಗುಣನ ಮೈಮೇಲೆ
ನಾಮ ಜನಿವಾರ, ಟೋಪಿ ಗಡ್ಡಗಳ ಅಂಟಿಸಿ
ದಾರಿ ಮಾಡಿಕೊಂಡಿದ್ದಾರೆ ಕೆಂಪು ಕಾಲುವೆಗಳಿಗೆ
ಸಜ್ಜಾಗಿವೆ ಕೆಂಗಣ್ಣುಗಳು ಭಾವುಕತೆಯಿಂದ

ಬಾತುಕೂಂಡಿವೆ ತೋಳುಗಳು ಬಡಿದಾಡುವ ಹಟದಿಂದ
ವಿಜ್ಞಾನ ಸೂರ್ಯ ಒಂದೇ ತೆಕ್ಕೆಯಲ್ಲಿ
ಭೂಮಂಡಲವ ಅಪ್ಪಿಕೊಂಡಿರುವ ಈ ಹಗಲಲ್ಲೇ
ಆವರಿಸಿದೆ ಮತಾಂಧ ಕೆಂಪುಕತ್ತಲು ಸುತ್ತಲು
ತಾಲಿಬಾನೋ ಅಯೋಧ್ಯಯ ನೆಲಬಾನೊ
ಕಾಶ್ಮೀರವೋ ಮಾಯಲಾರದ ಹುಣ್ಣು ಹುಣ್ಣು
ಗಾಂಧೀಜಿಯ ಗುಜರಾತು ನರಮೇಧಗಳ ಸುಡುಗಾಡು
ಅಹಿಂಸಾತತ್ವದ ತೆಳು ಮೋಡ ಮೇಲೆ ಮೇಲೆ
ಹಿಂಸಾ ತಾಂಡವ ನರ್ತಿಸಿದೆ ಕರುಳುಗಳ ಮಾಲೆ ಮಾಲೆ
ರಾಜಕೀಯ ಚೌಕಾಸಿ ನಡೆದಿದೆ ಕುರ್ಚಿಗಳ ಮೇಲೆ
ಅಕರಾಳ ವಿಕರಾಳ ರಕ್ತಮಾಂಸಗಳ ಪಿಪಾಸೆ
ಹಲ್ಲುಕಿಸಿದು ದೇಶದ ಮೂಲೆ ಮೂಲೆಗಳಲ್ಲಿ ತಿನ್ನುತ್ತಿದ್ದರೂ
ದಿಲ್ಲಿ ಸಾರುತ್ತಿದೆ ಮೇರಾ ಭಾರತ್‌ ಮಹಾನ್
ಇಲ್ಲಿ ಅಂತರಾತ್ಮ ಮುನುಗುತಿದೆ ದೇಶದ ಅವಸಾನ್
ಸಬಕೋ ಸನ್ಮತಿ ದೇ ಭಗವಾನ್
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)