ಹಿಂದೊಮ್ಮೆ ಬುದ್ಧ ತನ್ನೊಲವ ಶಿಷ್ಯನ ಕೂಡ
ಮಾತನಾಡುತಲಿರಲು ಸೃಷ್ಟಿಸ್ಥಿತಿಲಯ ವಿಷಯ,
ಆನಂದ ಪ್ರಶ್ನಿಸಿದ “ಗುರುದೇವ, ಹೃದಯದಲಿ
ತೊಡಕುತಿದೆ-ಸಂದೇಹ-ಕೇಳುವೊಡೆ-ಹೇಳುವೆನು!”
ಬುದ್ಧದೇವನು ಆಗ ಚಂದ್ರಮನ ಎಳೆನಗುವ   ೫
ನಕ್ಕು ಪೇಳಿದನಿಂತು – “ಆನಂದ, ಅಂತಹುದು
ಸಂದೇಹವೇನಿಹುದು? – ಮನವ ಮುರಿವಂತಹುದು!
ಅರಿತಿದ್ದರದಕಾನು ಉತ್ತರವ ಹೇಳುವೆನು”
“ಗುರುದೇವ! ಜೀವನದಿ ಎಲ್ಲರೊಡನಾಡುತಲಿ
ಕಾಮಕ್ರೋಧದ ಕ್ರೂರ ಅಲೆಗಳಪ್ಪಳಿಸಿದರು   ೧೦
ಕಲ್ಬಂಡೆಯಂತಿರುವ ಯೋಗವೇ ಮೇಲಹುದೊ?
ಮೇಣ್, ಜಗಕೆ ದೂರಾಗಿ ಜ್ಞಾನಪಡೆವುದು ಮೇಲೊ?”
“ಆನಂದ, ಸಂದೇಹ ತಿಳುಹಿದುದೆ ಮೇಲಾಯ್ತು!
ನಾನು ಜಗವನೆ ತೊರೆದು ದೂರ ಕಾಡನು ಸೇರಿ
ಬುದ್ಧನಾದುದು ನಿನಗೆ ಅರಿತಿಹುದು …..ಎನಗಲ್ಲಿ,   ೧೫
ಕಾನನದಿ ಮಾಯೆಗಳು ಬಂಧನಗಳಿರಲಿಲ್ಲ!
ರಾಹುಲ ಯಶೋಧರರ ಮಾಯೆಯನು ಒಡೆಯಲಿಕೆ
ಕಾಡಿಗೋಡಿದೆ ನಾನು! – ಅದು ಹಿರಿಮೆಯೇನಲ್ಲ!
ಪತ್ನಿ ಪುತ್ರರ ಕೂಡ ನಿಂತು ತನ್ನನು ಗೆಲುವ
ಯೋಗವೇ ಮೇಲಹುದು! ಬುದ್ಧನಾದರು ಮತ್ತೆ   ೨೦
ಅರಿತುದನು ಬಿತ್ತಲಿಕೆ ಜನತೆಯೇನೆಲನೆಮಗೆ!
ಜನತೆಯೊಡಲಲಿ ಹುಟ್ಟಿ, ಜನತೆ ಮಡಿಲಲಿ ಬೆಳೆದು,
ಜನತೆಯೆಡೆಯೇ ಉಳಿದು, ಜನತೆಯಡಿ ಮುಂದೊಯ್ವ
ಜ್ಞಾನ ಕರ್ಮಿಯು ಬುದ್ಧ! – ಮುಂದೆ ಬರುವವನವನು!
ಹಗಲು ಹುಟ್ಟುವ ಮುನ್ನ ಅರುಣನಿಣುಕುವ ಹಾಗೆ   ೨೫
ಮುಂದೆ ಜನಿಸುವ ಅವನ ಆಗಮನ ಸೂಚಿಸಲು
ನಾಬಂದೆ! ಆನಂದ- ಈಗ ನಿನಗರಿವಾಯ್ತೆ?
ಜಗದ ನಿಜವನು ಅರಿತ ನಿಜಬುದ್ಧ ಬರುತಿಹನು!
ಜಗವ ನಿಜದಲಿ ನಡೆಪ ಆನಂದ ನನಗಿಲ್ಲ-
ಆತನಿಗೆ ಮೀಸಲದು!”  ಆನಂದ ನಡುವಿನಲಿ   ೩೦
ಬಾಯಿಟ್ಟು ಪ್ರಶ್ನಿಸಿದ, “ಗುರುದೇವ, ಆತನನು
ವರ್ಣಿಪಿರ? – ಎಂತಿರುವ ಆ ಬುದ್ಧ-ನಿಜಬುದ್ಧ?
ಜಗದ ನಡೆನುಡಿಬೆರೆತ, ಜಗದ ಸತ್ಯವನರಿತ
ಜಗದ ಕೂಸಾಬುದ್ಧ ಎಲ್ಲಿ ಜನಿಸಿಹನವನು?”
ಬುದ್ಧ ನಸುನಕ್ಕಿಂತು ಪೇಳಿದನು ಉತ್ತರವ-   ೩೫
“ನಡುವಿಂದ ಮೊಳಕಾಲವರೆಗಿಳಿವ ಬಿಳಿವಸ್ತ್ರ
ತನ್ನ ಕೈಯಿಂ ತಾನೆ ನೂತುನೇದುದು ಖಾದಿ!
ಮೇಲ್ಹೊದಿಕೆ-ಮತ್ತೊಂದು-ಬಿಳಿಯ ಖಾದಿಯ ಚೌಕ
ವಿಶ್ವದಿಗ್ವಜಯಕ್ಕೆ ಹೊರಟ ಸನ್ಯಾಸಿಯವ,
ಕೈಯಲ್ಲಿ ದಂಡವಿದೆ-ಮುಖಬತ್ತಿ ಬಾಡಿಹುದು   ೪೦
ಯೌವನದ ತೇಜವಿದೆ-ಬ್ರಹ್ಮಚರ್‍ಯದ ತೇಜ!
ಮಡದಿಯನು ಮಾತೆಯೊಲು ಕಾಣವವನಾ ತೇಜ!
ಹೃಯದಲಿ ಹಿರಿಕೆಚ್ಚು-ಸ್ವಾತಂತ್ರ್‍ಯದಾ ಕಿಚ್ಚು
ಅದೊ ಆತ ಬರುತಲಿಹ ಈ ಎಡೆಗೆ ನೋಡಲ್ಲಿ
ಭಾರತಿಯ ಹಿರಿಯಮಗ-ಕಿರಿಯಮಕ್ಕಳು ನೋಡು   ೪೫
ಎನಿತು ಜನ ದಂಡಾಗಿ ಹಿಂದೆ ಸಾಗುತಲಿಹರು-
ಬುದ್ಧನವ! – ನಿಜಬುದ್ಧ! ನಾನವನ ಜನ್ಮವನು
ಸೂಚಿಸಲು ಬಂದಿದ್ದ ಮುಂಜಾನೆ! – ಆನಂದ!”
-ಅಷ್ಟರಲೆ ಕನಸೊಡೆದು ಎಚ್ಚೆತ್ತು ನೋಡಿದೆನು
ಸೆರೆಮನೆಯ ಹೊರಬದಿಗೆ ಕಾವಲಿನ ಪೋಲೀಸ   ೫೦
ನಡೆದ ಬೂಟ್ಸಿನ ಸದ್ದು ರಾತ್ರಿಯಾ ಕಡುಮೌನ
ಭೇದಿಸುತ ಬರುತಿತ್ತು- ಸುಂದರ ದಿಗಂತದಲಿ
ನಕ್ಷತ್ರನೂರ್ಲಕ್ಷ ಸ್ವಾತಂತ್ರ್‍ಯಸಿರಿಯಲ್ಲಿ
ನಕ್ಕುನಲಿಯುತಲಿರಲು, ಸೆರೆಮನೆಯ ಒಳಬದಿಯ
ಗಾಳಿ ಸುಂಯ್ಗುಡುತಿತ್ತು! ಕಂಗಳಲಿ ನೀರೂರಿ   ೫೫
ಗೋಡೆಯಲಿ ಮಸಿಯಿಂದ ನಾಬರೆದ ಚಿತ್ರದೆಡೆ
ಕಣ್ತಿರುವಿ ಕೈಮುಗಿದೆ ಗಾಂಧಿಗೆ ಮಹಾತ್ಮನಿಗೆ!
– “ನಿಜಬುದ್ಧ! ಭಾರತಿಯ ಹಿರಿಮಗ-ನಮಗೆಲ್ಲ
ಆತ್ಮ ಸ್ವಾತಂತ್ರ್‍ಯವನು ಸಾಧಿಸುವ ಮಂತ್ರವನು
ಬೋಧಿಸಿದ ನಿಜಗುರುವೆ! – ನಿನಗೆ ಚಿರಜಯಮಕ್ಕೆ!”   ೬೦
*****