ನಿನ್ನ ಗಾನದ ಸವಿಗೆ
ನನ್ನೆದೆಯ ಬಾನಿನಲಿ
ಆಡುವುವು ಮುಸ್ಸಂಜೆ ಮುಗಿಲು;
ಹೊಂಬಿಸಿಲ ಕಾಂತಿಯಲಿ
ಹಾಯುವುವು ಹಕ್ಕಿಗಳು
ಬೆರೆಸುತ್ತ ಮುಗಿಲಲ್ಲಿ ನೆರಳು
ಎದೆಯ ಗಾಯಗಳೆಲ್ಲ
ಉರಿಯಾರಿ ಮಾಯುವುವು,
ಹಾಯೆನಿಸಿ ತಂಪಾಗಿ ಜೀವ;
ಕನಸುಗಳ ಆಕಾಶ-
ಗಂಗೆಯಲಿ ಮೀಯುವುದು
ಮರೆತು ಈ ಲೋಕದಾ ನೋವ
ಭೋರೆಂದು ಸುರಿಯುವುವು
ಭಾವನೆಯ ಧಾರೆಗಳು
ತುಳುಕುವುದು ತಿಂಗಳಿನ ಕಾಂತಿ;
ತಾಯಿ ಮರಿಯನು ತಬ್ಬಿ
ಪ್ರೇಮ ಎಲ್ಲೆಡೆ ಹಬ್ಬಿ
ಹರಿವುದು ಅಲೌಕಿಕದ ಶಾಂತಿ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.