ನೆಲ: ನಿನ್ ಬೇರನ್ನ ಹೊಟೇಲಿಟ್ಟು
ಕಾಪಾಡ್ತೀನಿ ನಾನು,
ಆದ್ರೂ ನನ್ಮೇಲ್ ಒಣಗಿದ ಹೂವು
ಎಲೆ ಚೆಲ್ತೀ ನೀನು!

ಮರ: ಬಿಸಿಲಲ್ಲಿ ನೀ ಕಾಯದ ಹಾಗೆ
ಬೇಯದ ಹಾಗೆ ದಿನವೂ
ತಂಪಾಗಿರೋ ನೆರಳನ್ನೂ ಸಹ
ಚೆಲ್ತೀನಲ್ಲ ನಾನು?

ಮೋಡ: ಮಳೆಗಾಲ್ದಲ್ಲಿ ನೀರನ್ ಸುರಿಸಿ
ಒಣಗಿದ ಬೇರನ್ ತೊಯ್ಸಿ
ಕಾಪಾಡ್ತೀನಿ
ಜನಗಳು ತಿನ್ನಲಿ ಎಂದು.

ಬಿಸಿಲು: ಶಾಖ ಬೆಳಕು ಕೊಟ್ಟು ನಿನ್ನನ್
ಬೆಳೆಸ್ತೀನಲ್ಲ ಮರವೆ,
ಬದಲಿಗೆ ಯಾರ್‍ಗೂ ಏನನ್ನೂ ನೀನ್
ಕೊಡದೇ ಇರೋದು ಸರಿಯೇ?

ಮರ: ಸುತ್ತಾ ಹತ್ತೂ ಕಡೇಗೆ ನನ್ನ
ರೆಂಬೆ ಕೊಂಬೆ ಅಟ್ಟಿ
ಹಕ್ಕೀಗೂಡಿಗೆ ಸೈಟುಗಳನ್ನು
ಒದಗಿಸ್ತೀನಿ ಬಿಟ್ಟಿ!

ಮನುಷ್ಯ: ಹೂವು ಹಣ್ಣು ನೆರಳು ಕೊಟ್ಟು
ಖುಷಿ ಕೊಡ್ತೀಯಲ್ಲ,
ಅದಕ್ಕೆ ನಿನಗೆ ಏನಾದ್ರೊಂದು
ಉಪಕಾರ ನಾ ಮಾಡ್ಲ?

ಮರ: ನನ್ನನ್ ಕಡಿದು ಸೌದೆ ಮಾಡಿ
ಒಲೇಲಿ ಸುಡ್ತೀಯಲ್ಲ
ಅದನ್ನ ನಿಲ್ಸು ಸಾಕು, ಹೆಚ್ಚಿನ
ಉಪಕಾರಾನೇ ಇಲ್ಲ.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)