ಬಾಳ ದೇಗುಲದಲ್ಲಿ
ಜೀತದಾಳೆಂದು
ಬಂದು ನಿಂತಿಹೆವಿಂದು
ನೀನೆ ಆಳ್ ಎಂದು.
ಓ ದೇವಿ! ಮಾದೇವಿ!
ಕಂಣು ತೆರೆಯೆಂದು;
ನಮ್ಮ ಪಾಪಗಳನ್ನು
ತೊಡೆದು ಪೊರೆಯೆಂದು.
ಉಳಿದ ದೇವರುಗಳೆ-
ಲ್ಲರು ದಿಂಡವೆಂದು
ಕಾಣುವದಿದೆಲ್ಲ ನಿನ್-
ನದೆ ಪಿಂಡವೆಂದು.
ನಿಂದ ಭಕ್ತರನ್ನು ಕಣ್ದೆರೆದು ನೋಡು.
ಬಂದ ಯಾತ್ರಿಕರನ್ನು ಹರಸು, ಕಾಪಾಡು.
ದಶಾವತಾರಗಳೆಲ್ಲ
ನೀನೆ ತಾಯ್ ಎಂದು,
ಎಲ್ಲ ಕುಲಧರ‍್ಮಗಳು
ನೀನೆ ಕಾಯ್ ಎಂದು,
ಇಂದು ನೇಸರ ಚಿಕ್ಕೆ
ನೀ ಕರುಣಿಯೆಂದು,
ಅನುಭಾವಿ, ಕವಿ, ಜ್ಞಾನಿ,-
ಚಿರತರುಣಿಯೆಂದು :
ಒಡನುಡಿದು ಬಾಳಿರಲು
ನಿನ್ನ ಪದತಲದಿ
ನಾವಿಂದು ನಿಂತಿಹೆವು
ನಿನ್ನ ಎಡಬಲದಿ.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ನಿಂದ ಭಕ್ತರನ್ನು ಹರಸು, ಕಾಪಾಡು.
ಧಾರುಣಿಯ ಹುಡಿಯಿಂದ
ಬಾನ್ ಹುಡೆಯ ವರೆಗೆ
ಸಾಗರದ ನಡುವಿಂದ
ಅದರ ಕೊನೆವರೆಗೆ
ಎಂಟು ದಿಗ್ದೆಸೆಯಿಂದ
ಧ್ರುವತಾರೆವರೆಗೆ
ನರ‍್ತಿಸುವ ಧರೆಯಿಂದ
ಶೂನ್ಯದಾ ಗೆರೆಗೆ:-
ನಾವು ಕಂಡಿಹುದೊಂದೆ:
ತಾಯ್: ನಿನ್ನನೊಂದೇ.
ನಾವರ‍್ಚಿಸಿಹುದೊಂದೆ:
ಬಾಳ್! ನಿನ್ನನೊಂದೇ.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಯಾತ್ರಿಕರನ್ನು ಹರಸು ಕಾಪಾಡು.
ಏಸುಕ್ರಿಸ್ತನು ನಿನ್ನ
ಬೆಸ್ತರವನಹುದು.
ಕೃಷ್ಣಯಾದವ ನಿನ್ನ ಬೇಡರವನಹುದು.
ರಾಮ ರಾಘವ ನಿನ್ನ
ಬಡಪಾಯಿಯಹುದು.
ಬುದ್ಧ ಗೌತುಮ ನಿನ್ನ
ಬೇಹಿನವನಹುದು.
ಬಂದು ಜನಿಸಿದರಿವರು
ನಿನ್ನುದರದಲ್ಲಿ
ಕಂಡು ಮುಕ್ತಿಯನಲ್ಲಿ-
ಕಾಣ್ವುದಿನ್ನೆಲ್ಲಿ?
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ನಿಂದ ಯಾತ್ರಿಕರನ್ನು ಹರಸು. ಕಾಪಾಡು.
ಮಣ್ಣಿನಲಿ ಮೊಳೆಯುತ್ತ
ಕಣ್ಣಿನಲ್ಲರಳಿ
ದೇಹ ಮನದಲಿ ನರಳಿ
ಪ್ರಾಣದೆಡೆ ಹೊರಳಿ
ಬುದ್ಧಿಯಲಿ ಜೋತಾಡಿ
ನೇತಾಡಿ ಕೆರಳಿ
ಆತುಮನ ಜ್ಯೋತಿಯಲಿ
ನಿನ್ನೆಡೆಗೆ ಮರಳಿ
ನಿನ್ನ ಪದಪದ್ಮದಲಿ
ಬಾಳ್ವುದೆಂಬುವರು.
ಅಲ್ಲಿಂದ ಲೋಕವನೆ
ಆಳ್ವುದೆಂಬುವರು.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಭಕ್ತರನಿನ್ನು ಹರಸು ಕಾಪಾಡು.
ಕ್ರಿಮಿಕೀಟಕಂಗಳಲಿ
ಅಣುರೇಣಿನಲ್ಲಿ
ಧಾತುಲೋಂಹಗಳಲಿ
ತೃಣಕಾಷ್ಠದಲ್ಲಿ
ನರದೇಹಪಂಜರದಿ
ಮನಬುದ್ದಿಯಲ್ಲಿ
ನೆಲಿಸಿರುವೆ, ನೀನಿರದ
ಸಮೃದ್ಧಿಯೆಲ್ಲಿ ?
ನೀನೆ ಸೌದಾಮಿನಿಯು,
ನೀನೆ ಮೋಹಿನಿಯು.
ಎಲ್ಲೆಡೆಗೆ ತುಂಬಿಹುದು
ನಿನ್ನ ವಾಹಿನಿಯು.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಭಕ್ತರನಿನ್ನು ಹರಸು. ಕಾಪಾಡು
ಭೂಮಿಯಲಿ ಸುಖದುಃಖ
ಭೋಗಿಸಿದೆಯೆಂದು
ಗಂಧರ‍್ವಲೋಕದಲಿ
ರಾಗಿಸಿದೆಯೆಂದು
ದೇವಲೋಕದಿ ತಪವ
ಮಾಗಿಸಿದೆಯೆಂದು
ಮರಳಿ ಭೂ-ವೈಕುಂಠ-
ವಾಗಿಸುವಿಯೆಂದು
ನಿನ್ನ ಖ್ಯಾತಿಯ ಕೇಳಿ
ಬಳಿಗೆ ಬಂದಿಹೆವು
ಹಸುಳ ಜೀವವ ಕಾಣ್ಕೆ-
ಯೆಂದು ತಂದಿಹೆವು.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಯಾತ್ರಿಕರನ್ನು ಹರಸು. ಕಾಪಾಡು.
ತುಂಬಿ ಬೆಸಲಾದ ಶೂ-
ನ್ಯದ ರಾಣಿ ನೀನು.
ಎಲ್ಲ ಕುಲವೆಲ್ಲ ಜಗ-
ಗಳ ಜನನಿ ನೀನು.
ಕಾಲಗೋಲಗಳುಸಿರು
ಸಿರಿ ವಾಣಿ ನೀನು
ಸಾವೆಂಬ ತೆರೆಮರೆಯ-
ಲಿಹ ಜಾಣಿ ನೀನು.
ನೀನೊಲಿದು ಕರುಣಿಸುವ
ವಿಶ್ವಚೇತನವು
ಪಟ್ಟ ಕಷ್ಟಕ್ಕಿಂತ
ಮಿಗಿಲು ವೇತನವು.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಭಕ್ತರನ್ನು ಹರಸು. ಕಾಪಾಡು.
ಪ್ರಾಣದರಗಿಳಿ ನುಡಿಸಿ
ಬಗೆಗೊಡೆಯ ಹಿಡಿದು
ರಾಗವಾಗಿಸಿ ಕೊರಲ
ವೀಣೆಯನು ಮಿಡಿದು
ಮಂಗಳಾರತಿಯೆತ್ತಿ
ಕಂಗಳಲಿ ತಡೆದು
ನಿನ್ನರ‍್ಚಕನ-ದೈವ-
ದಾಣತಿಯ ಪಡೆದು
ನಿಂತಿಹೆವು ನಾವಿದೊ ಉ-
ಧೋ! ಉಧೋ! ಎಂದು
ಸಾಲುದೀವಟಿಗರೆನೆ
ಮೂಲಕೈತಂದು:
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಕನಸಿಗರನ್ನು ಹರಸು. ಕಾಪಾಡು.
ಎಲ್ಲ ಶೋಧವು ಮುಗಿದು
ನಿನ್ನ ದೇಗುಲದಿ
ನೆರೆದಿಹುದು ಜನಜಾತ್ರೆ
ನಿನ್ನ ಬಾಗಿಲದಿ;
ಪಾಪಪುಣ್ಯದ ಕಥೆಯ-
ದೆಂದು ಮನುಕುಲದಿ.
ತೊಡೆದು ಹೋಗುವದೆಂದು
ತಡೆದು ವ್ಯಾಕುಲದಿ.
ನಿನ್ನ ದರುಶನಕೆಲ್ಲ
ಪಾಪ ಹರಿಯುವದು
ಪುಣ್ಯಸಂಚಯವೆಲ್ಲ
ಹಣ್ಣಿ ಬಿರಿಯುವದು.
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಯಾತ್ರಿಕರನ್ನು ಹರಸು. ಕಾಪಾಡು.
ಗರ‍್ಭಗುಡಿಯಲ್ಲಿ ನಿನ್ನ
ಮೂರ‍್ತಿಯಿಹುದೆಂದು
ಹೊರಗಿಲ್ಲಿ ಬರಿ ನಿನ್ನ
ಕೀರ‍್ತಿಯಿಹುದೆಂದು
ಕಾಣದಾ ಸೊಬಗಿಂಗೆ
ನಾವ್ ಲುಬ್ಧರೆಂದು
ನಿನ್ನ ಕಾಣುವವರೆಗೆ
ನಾವ್ ಸ್ತಬ್ಧರೆಂದು
ನಿಂತಿಹೆವು. ತರೆಯಲಿ ಮ-
ಹಾದ್ವಾರ, ತಾಯೆ!
ಬೆಳಕು ಹೊಳೆಯಿಳಿದು ಸರಿ-
ಯಲಿ ನಿನ್ನ ಮಾಯೆ:
ಓ ದೇವಿ! ಮಾದೇವಿ! ಕಣ್ದೆರೆದು ನೋಡು.
ಬಂದ ಭಕ್ತರನ್ನು ಹರಸು, ಕಾಪಾಡು.
*****








