Home / ಕವನ / ನೀಳ್ಗವಿತೆ / ಕೇಳುತಿದೆ ಆಹ್ವಾನ

ಕೇಳುತಿದೆ ಆಹ್ವಾನ

ಕೇಳುತಿದೆ ಆಹ್ವಾನ ದಿಶೆದಿಶೆಯ ತುದಿಯಿಂದ
ದಳ್ಳುರಿವ ನೆಲದಿಂದ ಬೇವ ಜನದೆದೆಯಿಂದ
ಕೇಳಿಯಲ್ಲಿ ರಾಜ್ಯ ಸಾಮ್ರಾಜ್ಯಗಳ ನುಂಗಲಿಹ
ಕಾಲಭೈರವನಿಂದ.  ೧
‘ಶಾಂತಿಯಲಿ ಪ್ರೀತಿಯಲಿ ಸೊಗಬಾಳು ಬಾಳೋಣ
ಅಂತಿರುವ ಇಂತಿರುವ ‘ ಎಂದು ಕನಸನು ಕಂಡು
ನೋಂತ ಕವಿಜೀವಕದು ಕೇಳುತಿದೆ ಆಹ್ವಾನ
ಕಿವಿದುಂಬಿ ಎದದುಂಬಿ.  ೨
ಹೊರಗೆ ಉರಿ ಒಳಗೆ ಉರಿ ಎಲ್ಲಿಯದು ಆಶಾಂತಿ
ಮರುಕವಿಲ್ಲದ ಹಗೆಯು ಜನಜನವ ಮುತ್ತಿರಲು
ಹಿರಿದಾದ ಆ ಪ್ರೀತಿಗೆಲ್ಲಿಯದು ಆಸರೆಯು
ಯಾರು ಕೇಳುವರದನು?  ೩
ಸೊಗಬಾಳೆ? ಛೀ ಮರುಳೆ ಸೊಗವೆಲ್ಲಿ ಬಾಳೆಲ್ಲಿ?
ಜಗದ ಮಾಮಸಣದಲಿ ಹೊತ್ತಿದುರಿಯನು ಸುತ್ತಿ
ನಗುತ ರಿಂಗಣಗುಣಿವ ಪ್ರೇತದಂಪತಿಗಳಿಗೆ
ಸೋಗಬಾಳ ಸವಿಗೇಳು!  ೪
( ೧ )
ವಿಜ್ಞಾನಯುಗವಿಂದು ಜಗವು ಕಿರಿಕಿರಿದಾಯ್ತು
ಸುಜ್ಞವಾಯಿತು ಜನತೆ ಸುಖದ ಸವಿ ಹೆಚ್ಚಿಹುದು
ಅಜ್ಞರಾ ಹಳೆಯಜನವೆಂದು ಹಿರಿಹುಬ್ಬಿನಾ
ಜರ‍್ಬಿನಲಿ ಹಳಿಯುತಿರೆ-  ೫
ಹೊಂಬಿಸಿಲ ಮಾಯೆಯಲಿ ಮೈ ಮನವು ನೆರೆಮಸುಕಿ
ನಂಬಿನಡೆದಿರುವ ನವದಂಪತಿಗಳೊಡಲಲ್ಲಿ
ಯೊಮ್ಮೆಲೇ ಕಾರ‍್ಮೋಡ ಕವಿಕವಿದು ಬರಸಿಡಿಲು
ಬಡಿದಂತೆ ಆಗಿಹುದು.  ೬
ಇಂದೆಲ್ಲವೂ ಕುದಿಯಲಿದೆ ಸಾವಿನಾವಿಗೆಯ
ಹೊಂದಿಹುದು, ಕ್ಷೇಮವೆಂಬುದು ಕ್ಷಾಮವೊಂದಕ್ಕೆ
ಸಂದಿಹುದು, ನಾಶವೇ ಲೋಕವನು ಬಿಗಿದಾಳ್ವ
ಹಿರಿಪಾಶವಾಗಿಹುದು.  ೭
ಯಾಕೆ ಎಂತಿದು ಎಂದು ಕೇಳುವ ಚಿತ್ತ
ಮೂಕಶೋಕದ ಬಳಿಗೆ ಮರೆಹೊಕ್ಕು ಹುದುಗಿಹುದು
‘ ನಾಕವನು ಮರೆ ಇಲ್ಲಿ ನರಕವನು ನೋಡಬಾ ‘
ಎಂದಾರೊ ಕರೆಯುತಿರೆ.  ೮
ನಿನ್ನೆಯದೆ ಮೊನ್ನಿನದೆ ಮಾನವರ ಎದೆಯಲ್ಲಿ
ಬಿತ್ತಿರುವ ರಾಗದ್ವೇಷದ ಬೀಜವೇಸೇಸೊ
ಶತಮಾನಗಳ ಗನ್ನ ಗತಕದಲಿ ಮೊಳೆಯೊಡೆದು
ವಿಷದ ಹೆಮ್ಮರವಾಗಿ-  ೯
ನಾಡುನಾಡಿನ ಯುದ್ಧದಲಿ ಹೂತು ಕಾಯಾಗಿ
ಪಾಡಳಿದು ನಾಡುಗರ ಕೋಟಲೆಯ ಕೋಟೆಯಲಿ
ಹಣ್ಣು ಬಿಡುತಿಹುದಯ್ಯ ಎಂದೊರೆಯುತಿದೆ ಒದರಿ
ಕಾಲರಾಯನ ಕೊರಲು,  ೧೦
ಬಾಂಬುಸುರಿಮಳೆಯಾಗಿ ತೋಪುಗುಂಡುಗಳಾಗಿ
ಹೊಮ್ಮುತಲೆ ಹೊರಸಿಡಿವ ದ್ವೇಷದುಂಡೆಗಳಿಂದ
ಸೋಂಬಳಂತಿಹ ಸರ‍್ವಸಹೆಯಾದ ಭೂಮಾತೆ
ಕೆರಳಿ ಉರಿಉರಿಯುತಿಹಳು.  ೧೧
ಉರಿಯುತಿವೆ ನಗರಗಳು ಹರಿಯುತಿವೆ ರಕ್ತನದಿ
ನರರ ಹೆಣ ಉರುಳುತಿವೆ ಚಿಟ್ಟೆಗಳ ಮೊಟ್ಟೆಯೊಲು
ಕರುಣೆಯೆಂಬುದ ಹೂಳಿ ಪಾತಾಳದಾಳದಲಿ
ಕುಣಿಯುತಿದೆ ಮರಣ ನೆಲದಿ.  ೧೨
ಕಿರಿದಾದ ಜಗದಿಂದ ಫಲವೇನು, ಅರಿದಾದ
ಹಿರಿದಾದ ನೋವುನೆರೆ ಎಲ್ಲ ಮೂಲೆಗಳಿಂದ
ತೆರೆಯಾಗಿ ನುಗ್ಗಿ ನೂಕಲು ಮಾಡಿ ಎದೆಗಳನು
ಪ್ರಳಯದಲಿ ಮುಳುಗಿಸಿದೆ.  ೧೩
ಯಾವ ಬದಿ ಸತ್ಯವೊ, ಎಲ್ಲಿ ತಪ್ಪಿದೆ ಸೂತ್ರ
ಯಾವುದೂ ತಿಳಿಯಾಗಿ ತಿಳಿಯದಿರೆ, ಹೊಳೆಯುತಿದೆ
ಸಾವಿನದ್ಭುತಲೀಲೆಯೊಂದೆ ಹಿರಿಸತ್ಯವೆನೆ
ಇರಿದಿರಿದು ಕವಿಮನವ.  ೧೪
ಹೊಸರಕ್ಕಸರ ತೋರ ಕಾಲ್ತುಳಿತದಲಿ ಜಬ್ಬಿ
ನುಸಿಯಾದ ಕಿರಿರಾಷ್ಟ್ರಗಳ ಪ್ರಜೆ ಬಲುಮೆಯಾ
ಮುಸಿಯಲದ್ದಿದ ಬೊಂಬೆಯೊಲು ಹಡುವ ಬವಣಿಗಳ
ಕತೆ ಕುದಿಸೆ ರಕ್ತವನು-  ೧೫
ಮನೆಯು ನೆಲಸಮವಾಗೆ ಹಸುಗೂಸುಗಳ ತಬ್ಬಿ
ಗಂಟುಗದಡಿಯ ಹೊತ್ತು ಗಾಳಿಯಲಿ ಚಳಿಯಲ್ಲಿ
ಕ್ಷಣ ಕ್ಷಣಕೆ ಉಸಿರೆಳೆದು ನಡೆವ ಜನಜಂಗುಳಿಯು
ಕಂಬನಿಯನುಕ್ಕಿಸಿದೆ.  ೧೬
`ಈ ನೆಲವೆ ಯಮಲೋಕ, ಸತ್ತವರೆ ಸುಖಸುಧೆಯ
ಆನಾಕದಜ್ಞಾತಖಂಡವನು ಸೇರಿದರು
ಎಂದೊರಲಿ ಚೀರುವಂತಿದೆ ಮೇಲೆ ಮೊಗವೆತ್ತಿ
ಬದುಕಿರುವ ಮನುಜಗಣವು.  ೧೭
(೨)
ಕಾಲಚಕ್ರದ ಘೋರ ಘರ‍್ಘರದ ಬುಡದಲ್ಲಿ
ಸಿಲುಕಿರುವ ಜಗದಲ್ಲಿ ಭಾರತದ ಸ್ಥಿತಿಗತಿಯ
ಶೂಲಜಾಲವ ಮನದಿ ನೆನೆನೆನೆದು ಕುದಿಕುದಿದು
ಜೀವ ತಲ್ಲಣಿಸುವುದು.  ೧೮
ವೇದವಿದ್ಯೆಯ ತವರು ವೀರ-ಧೀರರ ತಾಣ
ಗಾದೆಮಾತಿನ ಕುಂತಿಸುತರಂತೆ ಕಂಗೆಟ್ಟು
ತೊತ್ತುತನದೊತ್ತಿನಲಿ ಹೇಡಿಗಳ ಬೀಡಾಗಿ
ಹಾಳ್ಸುರಿದು ಮೆರೆಯುತ್ತಿದೆ.  ೧೯
ತನ್ನ ಪುಣ್ಯವನೆಲ್ಲ ಹೆರವರಿಗೆ ಮಾರಿರುವ
ಪುಣ್ಯಭೂಮಿಯು ತನ್ನ ಪ್ರಾಚೀನ ಕರ‍್ಮತತಿ
ಹಣ್ಣಾಗಿ ದಾಸ್ಯದಲಿ ಲೋಲಾಡಿ ಕೊಳೆಯುತಿಹ
ಕರ‍್ಮಭೂಮಿಯಿದು ಸೈ!  ೨೦
ಖಂಡಮಾಂಸವ ತಿಂದು ನೆತ್ತರವ ತವೆಹೀರಿ
ತುಂಡುಗೊಳಿಸುವ ಪರರ ಆಳರಸರಾಳ್ಕೆಯಲಿ
ಬೆಂಡಾದ ಅಸ್ಥಿ ಪಂಜರವುಳಿದ ಸುವಿಶಾಲ-
ಶ್ರೀಭರತಖಂಡವಿದು.  ೨೧
ರಾಷ್ಟ್ರವೇ? ವಿಧವಿಧದ ಜನಭಾಷೆ ಧರ‍್ಮಗಳ
ಗೋಷ್ಠಿಯಿದು, ಹಿಂಡುದನ, ಹಿಂಡುವಾಕಳುವೆಂದು
ಮುಷ್ಟಿಯಲಿ ಲೀಲೆಯಲಿ ನಾಲ್ವತ್ತು ಕೋಟಿಗಳ
ಬಿಗಿದಜನ ಬಗೆಗಿಹರು.  ೨೨
ನಿರ‍್ವೀರ‍್ಯ ನಿಸ್ತೇಜ ನಿರ‍್ಧನವು ನಿರ‍್ಗತಿಕ
ಭಾರತವು ಕೋಟಿಜನ ಕೋಟಿಮನವಾಗಿದ್ದು
ಪಾರತಂತ್ರ್ಯವೆ ತನ್ನ ಪರಮಾರ‍್ಥವೆಂಬಂತೆ
ಆಳಾಗಿ ಬಾಳುತಿದೆ.  ೨೩
ಅದರಜ್ಞತನ ಮೂಢತನ ಭೇದಗಳ ಕಂಡು
ಎದೆಯುಬ್ಬಿರೋಡಾಡುವರು ತಮ್ಮ ಸಾಮ್ರಾಜ್ಯ-
ಮದದಲ್ಲಿ ಕುಣಿಯುವರು ಅದರಿಂದಲೇ ತಮಗೆ
ಉಳಿವೆಂದು ಅರಿತಿರಲು.  ೨೪
ಯುಗಯುಗವು ನೂಗಿದರು ಮನುಜಮದವಳಿದಿಲ್ಲ
ಜಗವು ಪಲ್ಲಟಿಸಿಲ್ಲ ಭಾರತದ ಕಣದಲ್ಲಿ
ಮೊಗವೆತ್ತಿ ಮರುಕಳಿಸಿದಂತಿಹುದು ಕುರುಪಾಂಡವರ
ಕಲಹಪ್ರಪಂಚ.  ೨೫
ಮಾನಿನಿಯೆ ದ್ರೌಪದಿಯೆ ಭಾರತದ ಭಾರತಿಯೆ
ಇನ್ನು ಸಹ ದುರ್ಯೋಧನರ ದುಷ್ಟ ದುಶ್ಯಾಸ-
ನಾದಿಗಳ ದುರ್ದಮ್ಯದಾನವೀ ದರ್ಪವದು
ಸರ್ಪದೋಲು ಹೆಡೆಯೆತ್ತಿ  ೨೬
ತಿರುತಿರುಗಿ ವಿಷದುಸಿರು ಬಿಡುತಲಿದೆ, ಭೀಮಾರ್ಜು-
ನರ ಕೋಪಪಾವಕದಿ ರುದ್ರಾವತಾರವನು
ಬರಿಸುತಿದೆ, ಅದಜಾತಶತ್ರುಗಳ ಕೆರಳಿಸುತ
ರಣರಂಗಕಿಳಿಸುತಿದೆ.  ೨೭
ಕೇಶಪಾಶವ ತುಡುಕಿಯೋಲಗಕೆ ಹಿಡಿತಂದು
ಹಾಸ್ಯ ಮಾಡಿದಕೈಯು ಧೀಂಕಿಟ್ಟ ಮೈ ತನ್ನ
ನಾಶದೇವತೆಯನ್ನೆ ಬರಮಾಡಿರುವೆನೆಂದು
ಅರಿಯದಿದೆ ಮಾತಾಯಿ!  ೨೮
ಭಯವಿಲ್ಲ ಪಾಂಡವರ ವನವಾಸ ಮುಗಿಯಲಿದೆ,
ದಯವಳಿದು ಸೂಜಿನೆಲವೀಯೆನೆಂದಂಧಸುತ-
ರಯನ ತಿರುಗಲು ತಾವೆ ಭಾರತದ ಕಾಳಗದಿ
ನೆಲವೆಲ್ಲ ತೊರೆಯುವರು.  ೨೯
ಮುಕ್ತತೆಯ ಕಾಲ ಬಳಿಸಂದಿಹುದು ಹೊಸಭಕ್ತಿ-
ಶಕ್ತಿಗಳು ಚಿಮ್ಮಿಹವು ಧ್ಯೇಯದಾಹವು ಹೆಚ್ಚಿ
ವ್ಯಕ್ತಿ ವ್ಯಕ್ತಿಗಳಲ್ಲಿ ತ್ಯಾಗಪರಮಾವಧಿಯು
ಬೇರೂರಿ ನೆಲಸಿಹುದು.  ೩೦
ತಲೆಗೊಂದನಾಡುತಿಹ ಮತಪಂಥಗಳ ಜನತೆ
ಕಲೆತು ಒಂದಾಗಿ ಶತಶತಕದೀ ಶೃಂಖಲೆಯ
ಹೊಲೆಕಳೆದು ಮಡಿಯಾಗಿ ನಿನ್ನ ಸಿರಿಯಡಿಗಳಲಿ
ತಲೆಯಿಕ್ಕಿಬಾಗುವುದು.  ೩೧
( ೩ )
ಈ ನಿನ್ನ ಲೀಲೆಯಲಿ ನಾನೆಲ್ಲಿ ನಿಂತಿರುವೆ
ನನ್ನ ಬೆಸನವದೇನು ಎಂದು ಯೋಚಿಸುತಿರಲು
ನನಗೆ ನಾ ಸಿಗ್ಗಾಗಿ ಮುದುಡಿ ಮುಗ್ಗರಿಸುವೆನು
ಲೋಕನಾಯಕ ತಂದೆ! ೩೨
ಸುತ್ತುಮುತ್ತಲು ನಡೆದ ನಿನ್ನ ತಾಂಡವದಲ್ಲಿ
ಎತ್ತಿ ಹೆಜ್ಜೆಯನಿಡದೆ ಭಯಭೀತನಾಗಿಹೆನು
ಮತ್ತೆ ನಿನ್ನಯ ರುದ್ರ ಸಂಗೀತ ಮೇಳದಲಿ
ಸೇರದವಸರ ನಾನು.  ೩೩
ಬಾನ್ಗೆ ಬಾನೇ ಹೊತ್ತಿ ನಕ್ಷತ್ರಕೋಟಿಗಳು
ಮಾಣದುರಿಯುತಿರೆ ನಾ ನನ್ನ ಕಿರುತಾರಗೆಯು
ಮಿಣಮಿಣುಕಿ ಮಂದವಾಯಿತು ಎಂದು ಮಿಡುಕುವೆನು
ಮೃಗಜಲವ ಬೆಂಬತ್ತಿ.  ೩೪
ಪ್ರಳಯಘನವಾತಗಳು ಗಿರಿದರಿಯನಳ್ಳಾಡಿ
ಸೆಳೆದು ಮರಬಳ್ಳಿಗಳ ಬೀಸುತಿರೆ ನಾ ನನ್ನ
ಕೆಳೆಯ ಜೀವವ ತಬ್ಬಿ ಪೂರ‍್ಣಿಸುವ ಗೂಡಿನಲಿ
ಪೆಳ್ಪಳಿಸಿ ಕುಳಿತಿಹೆನು.  ೩೫
ಗೋಳಿಡುವ ನೂರುಸಾವಿಗಳೊರಳು ಭೋ ಎನಲು
ಕೇಳುತಿರೆ ನಾಣಿಲಿಯು ಸವಿದುತ್ತ ನುಂಗುವೆನು
ತೂಳತಲ್ಪದ ಮೇಲೆ ಒರಗುವೆನು ಸೋಗಬಯಸಿ
ಮಿದುತನದ ಮುದ್ದೆಯೊಲು.  ೩೬
ಬೇತಾಳವಹ ನೆಲದಿ ಧೀರಲಯವನು ತೊರೆದು
ಬೇತಾಳನಾಗಿಹೆನು ಬಾಳನಡೆ ತಪ್ಪಿಹೆನು
ಈ ತ್ಯಾಗಯಾಗದಲಿ ನನ್ನ ಮುಡಿಪನು ಸಲಿಸೆ
ಹೆದರಿ ಮುದುರಿರುವೆನು.  ೩೭
ನನ್ನ ಕಿರುನುನೆಯೆಂಬ ಮರಿವಿಶ್ವರೂಪದಲಿ
ಎಂಥ ಶೋಕದ ಸಂತೆ ಜೊಳ್ಳ ಬಾಳಿನ ಕಂತೆ
ಸಂತತವು ನಿಟ್ಟುಸಿರ ಮಾಲೆಗಳ ಮೈದೊಡವು
ಕಂಬನಿಯ ಅಡಿಪೂಜೆ.  ೩೮
ಲೋಕಚರಿತೆಯ ಹಾಗೆ ಎಲ್ಲಿಯೋ ತಪ್ಪಿತಿದು
ಸಾಕುಸಾಕೆಂದು ನಾ ನನ್ನನ್ನೆ ಹಳಿಯುತಿರೆ
ಸಾಕುವುದು ನಿನ್ನ ಕಿರುದನಿಯೆನ್ನ ಆತ್ಮದಾಳದಿ
ನೆಲಸಿ ಮೊಳಗುತಲಿ.  ೩೯
ನನ್ನ ವಿಶ್ವದ ಕ್ಷೇಮ ನನಗೆ ಹಿರಿದಾಗಿರಲು
ನನ್ನ ಕರ‍್ಮದಿ ಮುಕ್ತಿ ನನಗೆ ಅರಿದಾಗಿರಲು
ಅನಂತಾನಂತ ನಾ ತಿಳಿತಿಳಿದು ದುರ‍್ಭಲನು
ನಿನ್ನ ನಾಟ್ಯದಿ ಬೆರೆವೆನೆ?  ೪೦
ಏನು ಬಂದರು ಬರಲಿ ನಿನ್ನ ನೆರೆನಂಬಿರುವೆ
ನಿನ್ನ ಪ್ರೇರಣೆಗಾಗಿ ಕಾದಿಹೆನು ಧ್ಯಾನದಲಿ
ನನ್ನ ಬದುಕಿನ ಗುರಿಯ ಗೈವಕಾರ‍್ಯದ ಪರಿಯ
ನೀ ತೋರೆ ನಾ ಧನ್ಯ!  ೪೧
*****
Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...