ಮಕ್ಕಳಿಗೆ ಓದಿನ ರುಚಿ ಹತ್ತುವುದು ಹೇಗೆ?

ಮಕ್ಕಳಿಗೆ ಓದಿನ ರುಚಿ ಹತ್ತುವುದು ಹೇಗೆ?

ಮಕ್ಕಳು ಹೆಚ್ಚಾಗಿ ಇಷ್ಪಪಡುವುದು ಮಕ್ಕಳೇ ಕಥಾನಾಯಕರಾಗಿರುವ ಕತೆ ಕಾದಂಬರಿಗಳನ್ನು ಎನ್ನುವ ನಂಬಿಕೆಯೊಂದಿದೆ. ಇದು ಸತ್ಯವಲ್ಲ. ಸ್ವಾರಸ್ಯವಾಗಿರುವ ಯಾವುದೇ ಆಖ್ಯಾನಗಳನ್ನು ಅವರು ಇಷ್ಪಪಡುತ್ತಾರೆ. ನನಗೆ ‘ರಾಜಾ ಮಲಯಸಿಂಹ’ ಎಂಬ ಬಹುಸಂಪುಟಗಳ ಕಾದಂಬರಿಯ ನೆನಪಾಗುತ್ತದೆ. ಇದು ಅಲೆಕ್ಸಾಂಡರ್ ಡ್ಯೂಮಾನ ‘ದ ಕೌಂಟ್ ಆಫ್ ಮಾಂಟಿಕ್ರಿಸ್ಟೋ’ ಎಂಬ (ಮೂಲತಃ ಫ್ರೆಂಚ್) ಕಾದಂಬರಿಯ ಕನ್ನಡ ರೂಪಾಂತರ ಎಂದು ನನ್ನ ನೆನಪು. ಆದರೆ ಮೂಲ ಕನ್ನಡವೇ ಎಂಬಂತಿರುವ ಸೊಗಸಾದ ಕೃತಿ. ಕನ್ನಡಕ್ಕೆ ಯಾರು ರೂಪಾಂತರಿಸಿದರೋ ನೆನಪಿಲ್ಲ, ಹಾಗೂ ಚಿಕ್ಕಂದಿನಲ್ಲಿ ನನಗೆ ಓದಲು ದೊರೆತುದು ಒಂದು ಸಂಪುಟ ಮಾತ್ರ. ಓದಿ ಆನಂದಿಸಿದ ಅನುಭವ ಇನ್ನೂ ನೆನಪಿದೆ. ಇದೊಂದು ಅದ್ಬುತರಮ್ಯ ಕಾದಂಬರಿ- ಯಾರೂ ಓದಬಹುದಾದಂಥದು. ‘ಮೇದಿನಾಪುರದ ಮಲ್ಲ’ ಎಂಬ ಇನ್ನೊಂದು ಕೃತಿ. ಇದರ ಕರ್ತೃ ಕೂಡಾ ಯಾರು ಎಂಬುದು ನನಗೀಗ ನೆನಪಿಲ್ಲ. ಆದರೆ ಓದಲು ಖುಷಿ ಕೊಡುವ ಕಾದಂಬರಿ.

ನಮ್ಮ ಮಕ್ಕಳು ಓದುವುದಿಲ್ಲ. ಎಂದು ನಾವು ಆತಂಕಗೊಳ್ಳುತ್ತೇವೆ. ಆದರೆ ಅವರಿಗೆ ಸಂತೋಷ ನೀಡುವಂಥ ಪುಸ್ತಕಗಳು ಲಭ್ಯವೇ ಎಂಬ ಬಗ್ಗೆ ಚಿಂತಿಸುವುದಿಲ್ಲ. ಕನ್ನಡದಲ್ಲಿ ಸ್ವಂತದ್ದೂ ಅನುವಾದದ ಮೂಲಕ ತಂದದ್ದೂ ಆದ ಸಾಕಷ್ಟು ಮಕ್ಕಳ ಸಾಹಿತ್ಯವೇನೋ ಇದೆ. ಚಂದಮಾಮದ ಕತೆಗಳು (ಅದರಲ್ಲೂ ಅವಳಿ ಸೋದರರ ಮಕ್ಕಳ ಕತೆ, ಬಾಲನಾಗಮ್ಮ ಮುಂತಾದ ಧಾರಾವಾಹಿಗಳು!), ಅರೇಬಿಯನ್ ನೈಟ್ಸ್ (ಪರಿಷ್ಕೃತ ರೂಪ), ಹ್ಯಾನ್ಸ್ ಆಂಡರ್ಸನ್ ಕತೆಗಳು, ಗ್ರಿಮ್ ಸೋದರರ ಕತೆಗಳು, ಪಂಚತಂತ್ರ, ಬುದ್ಧನ ಜಾತಕ ಕತೆಗಳು, ಅಗೋಳಿ ಮಂಜಣ್ಣ, ಹೆಡ್ಡದೂಮ ಮುಂತಾದ ಅದೆಷ್ಟೋ ಜಾನಪದ ಕತೆಗಳು, ಮಂಗೇಶರಾಯ ತ್ರಿವಳಿಗಳು ಬರೆದ ಕತೆ ಕವಿತೆಗಳು – ಹೀಗೆ ಈ ಪಟ್ಟಿ ನಮ್ಮ ಅದೃಷ್ಟಕ್ಕೆ ಸಾಕಷ್ಟು ದೀರ್ಘವಾಗಿದೆ. ಇವುಗಳೊಂದಿಗೆ ನಾನು ಅನಕೃರವರ ಕೆಲವು ಸಾಮಾಜಿಕ ಕಾದಂಬರಿಗಳನ್ನೂ, ತರಾಸುರವರ ಚಿತ್ರದುರ್ಗ ಇತಿಹಾಸಾಧಾರಿತ ಕಥಾನಕಗಳನ್ನೂ, ಎಂ. ರಾಮಮೂರ್ತಿಯವರ ಪತ್ತೇದಾರಿ ಕಾದಂಬರಿಗಳನ್ನೂ, ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಐತಿಹಾಸಿಕ ಕಾದಂಬರಿಗಳನ್ನೂ, ಗಳಗನಾಥರ ಕೃತಿಗಳನ್ನೂ ಸೇರಿಸುವೆ. ಇವೆಲ್ಲ ಕ್ಲಾಸಿಕ್ಸ್. ಕನ್ನಡ ಕಲಿಯುವ ಮಕ್ಕಳು ಓದಲೇಬೇಕಾದ ಕೃತಿಗಳು. ಜತೆಗೆ ರಾಮಾಯಣ, ಮಹಾಭಾರತದ ಕತೆಗಳಂತೂ ಇರಲೇಬೇಕು. ಇಲ್ಲಿ ಹೆಸರಿಸಿದ ಎಲ್ಲ ಕೃತಿಗಳೂ ಮಕ್ಕಳಿಗೋಸ್ಕರ ಬರೆದುವೇನೂ ಅಲ್ಲ. ನಾನು ಮುಖ್ಯವಾಗಿ ಉದ್ದೇಶಿಸುತ್ತಿರುವುದು ಆರಂಭದ ಓದುಗರನ್ನು. ಅವರನ್ನು ಓದಿನ ಕಡೆ ಆಕರ್ಷಿಸುವುದು ಹೇಗೆ ಎನ್ನುವುದು ಪ್ರಶ್ನೆ.

ಕೆಲವರು ಅಂದುಕೊಂಡಿದ್ದಾರೆ ಸಾಹಿತ್ಯಕ್ಕೆ ‘ಬಾಲ’ ಹಚ್ಚಿದರೆ ಬಾಲಸಾಹಿತ್ಯವಾಗುತ್ತದೆ ಎಂದು! ಆದರೆ ವಾಸ್ತವದಲ್ಲಿ ಎಳೆಯರಿಗಾಗಿ ಬರೆಯುವವರು ಹಾಗೂ ಅವರ ಓದಿನಲ್ಲಿ ಕಾಳಜಿಯಿರುವವರು ಅರಿಯಬೇಕಾದ ಸಂಗತಿಯೊಂದಿದೆ: ಅದೆಂದರೆ ದೊಡ್ಡವರಿಗೆ ಬೋರಾಗುವ ಸಾಹಿತ್ಯ ಎಳೆಯರಿಗೂ ಬೋರಾಗುತ್ತದೆ ಎನ್ನುವುದು. ಆದರೆ ದೊಡ್ಡವರಿಗೆ ಸ್ವಾರಸ್ಯಕರವೆನಿಸುವ ಸಾಹಿತ್ಯವೆಲ್ಲ ಎಳೆಯರಿಗೆ ಸ್ವಾರಸ್ಯಕರ ಎನಿಸಬೇಕಾದ್ದಿಲ್ಲ. ಮಕ್ಕಳು ಆರಂಭದಲ್ಲೇ ಶಿವರಾಮ ಕಾರಂತರ ಕಾದಂಬರಿಗಳನ್ನೋ, ಅಡಿಗರ ಕವಿತೆಗಳನ್ನೋ ಓದಿ ಆನಂದಿಸಬೇಕು ಎಂದು ನಾವು ನಿರೀಕ್ಷಿಸಬಾರದು. ಹಾಗೇನೇ ಮಕ್ಕಳಿಗೆಂದೇ ನಿರ್ಮಿತವಾಗಿರದ, ಆದರೆ ಮಕ್ಕಳೂ ಓದಿ ಖುಷಿಪಡಬಹುದಾದ ಕೃತಿಗಳನ್ನು ಅವರಿಗೆ ನಿರಾಕರಿಸಲೂಬಾರದು. ಓದುಗನಾಗಿ ನನ್ನದೇ ಅನುಭವವನ್ನು ಹೇಳಬಹುದಾದರೆ, ಐವತ್ತರ ದಶಕದಲ್ಲಿ ನನಗೆ ಹೆಚ್ಚಿನ ಓದಿನ ಗೀಳು ಹಿಡಿಸಿದ್ದು ಅನಕೃರವರ ಕಾದಂಬರಿಗಳಲ್ಲದೆ ಶಿವರಾಮ ಕಾರ೦ತರದ್ದಲ್ಲ. ಆಗಿನ ಚಿಕ್ಕ ವಯಸ್ಸಿನಲ್ಲಿ ನನಗೆ ಕಾರಂತರ ಕಾದಂಬರಿಗಳಲ್ಲಿಲ್ಲದ ಆಕರ್ಷಣೆ ಅನಕೃರವರ ಕಾದಂಬರಿಗಳಲ್ಲಿ ಕಾಣಿಸುತ್ತಿತ್ತು: ಬಹುಶಃ ಅನಕೃ ಕೃತಿಗಳು ನನಗೆ ಗೊತ್ತಿರದಂಥ ಲೋಕವೊಂದನ್ನು ನನ್ನ ಮುಂದೆ ತೆರೆದಿರಿಸಿದುವೆಂದು ತೋರುತ್ತದೆ; ಕಾರಂತರ ಕೃತಿಗಳು ಹಾಗೇನೂ ಮಾಡಲಿಲ್ಲ. ಅವುಗಳನ್ನು ನಾನು ಆಸ್ವಾದಿಸತೊಡಗಿದ್ದು ಕೆಲವು ವರ್ಷಗಳ ನಂತರವೇ.

ಮಕ್ಕಳು ಇಷ್ಟಪಡುವ ಲೋಕವೊಂದಿದೆ: ಅದರಲ್ಲಿ ವಾಸ್ತವತೆಗಿಂತ ಅವಾಸ್ವತೆಯೇ ಜಾಸ್ತಿ. ಅಲ್ಲಿ ಅನೇಕ ವರ್ಷಗಳಿಂದಲೂ ನಿದ್ರಿಸುತ್ತಿರುವ ರಾಜಕುಮಾರಿಯರು, ಅವರನ್ನು ಕಾಪಾಡುವ ರಾಜಕುಮಾರರು, ಮಂತ್ರದಂಡದಿಂದ ರೂಪಾಂತರಗೊಳಿಸುವ ಮಂತ್ರವಾದಿಗಳು, ಪರಕಾಯಪ್ರವೇಶಿಗಳು, ಮಾರುವೇಷದ ಕಳ್ಳರು, ದಾರಿತಪ್ಪಿಸುವ ಮಾಯಾಜಾಲಗಳು, ಕ್ರೂರಿಗಳಾದ ರಕ್ಕಸರು, ಕುರುಡುಗತ್ತಲ ಗುಹೆಗಳು, ಮಾತಾಡುವ ಪ್ರಾಣಿಗಳು, ತಲೆ ಕೆಳಗಾಗಿ ನಿಂತಿರುವ ವ್ಯಕ್ತಿಗಳು, ಭರಣಿಯೊಳಗಿನ ಬೂತಗಳು, ಮರೆತುಹೋಗುವ ಮಂತ್ರಗಳು, ಏಳು ಸಮುದದ ಆಚೆ ಗಿಣಿಯೊಂದರ ದೇಹದಲ್ಲಿ ಬಂಧಿತವಾಗಿರುವ ಜೀವ, ಮರವೊಂದರಲ್ಲಿ ನೇತಾಡುವ ಬೇತಾಳ ಒಂದೇ, ಎರಡೇ? ಇವಕ್ಕೆ ಕೊನೆಯಿಲ್ಲ. ಯಾಕೆಂದರೆ ಕಲ್ಪನೆಗೆ ಕೊನೆಯಿಲ್ಲ. ಅದೇ ರೀತಿ ಕತೆಯೊಳಗೆ ಕತೆ, ಭಟ್ಟಿ ವಿಕ್ರಮಾದಿತ್ಯ ಕತೆಗಳಂತೆ ಸವಾಲೆಸೆಯುವ ಕತೆ-ಇಂಥ ವಿಚಿತ್ರ ರೀತಿಯ ಕಥನಗಳೂ ಮಕ್ಕಳಿಗೆ ಇಷ್ಟವಾಗುತ್ತವೆ.

ಅದ್ಬುತರಮ್ಯವೆಂದರೆ ಮೂಗುಮುರಿಯುವ ವಿಚಾರವಾದಿಗಳಿದ್ದಾರೆ. ಅವರಿಗೆ ಮಕ್ಕಳ ಸಾಹಿತ್ಯವೂ ವೈಚಾರಿಕವಾಗಿರಬೇಕು, ‘ಮೂಢನಂಬಿಕೆ’ಯ ಕಟ್ಟುಕತೆಗಳನ್ನು ಮಕ್ಕಳು ಓದಲೇಬಾರದು. ಆದರೆ ಮಂತ್ರ ಮಾಟ ಅದ್ಭುತ ರಮ್ಯಗಳನ್ನು ಕತೆಗಳಿಂದ ತೆಗೆದರೆ ಮತ್ತೆ ಸ್ವಾರಸ್ಯಕರವಾಗಿ ಉಳಿಯುವುದೇನೂ ಇಲ್ಲ. ಅಳಲೆಕಾಯಿ ಉತ್ತಮ ಔಷಧಿ ನಿಜ, ಆದರೆ ಅಡುಗೆಗೆ ಬರದು. ಅಡುಗೆಗೆ ಹಲವು ಬಗೆಯ ತರಕಾರಿ ಉಪ್ಪು ಖಾರ ಬೇಕಾಗುತ್ತದೆ. ಕತೆಯೆಂದರೆ ಅದೇ ರೀತಿ. ಮಕ್ಕಳು ಯಾವತ್ತೂ ಸತ್ಯ ನ್ಯಾಯಗಳು ಗೆಲ್ಲಬೇಕೆಂದೇ ಬಯಸುತ್ತಾರೆ, ಅವರೆಂದೂ ಕೆಟ್ಟ ಪಾತ್ರಗಳ ಗೆಲುವನ್ನು ಬಯಸುವುದಿಲ್ಲ; ಆ ಮಟ್ಟಿಗೆ ಅವರ ನೈತಿಕ ಪ್ರಜ್ಞೆಗೆ ಇಂಥ ಸಾಹಿತ್ಯದಿಂದ ಹಾನಿಯೇನೂ ಉಂಟಾಗಲಾರದು. ಹಾಗೂ ಕತೆಯನ್ನು ವಾಸ್ತವವೆಂದೇನೂ ಅವರು ಭ್ರಮಿಸುವುದೂ ಇಲ್ಲ. ವೈಚಾರಿಕತೆಯೇನಿದ್ದರೂ ಅವರು ಮುಂದಿನ ಓದಿನಿಂದ ಬೆಳೆಸಿಕೊಳ್ಳಬಹುದು. ಆದರೆ ಆ ಮುಂದಿನ ಓದು ಸಾಧ್ಯವಾಗಬೇಕಿದ್ದರೆ ಆರಂಭದ ಮನರಂಜನೆಯ ಓದು ಅಗತ್ಯ. ಇದು ಕೇವಲ ಮನರಂಜನೆಗೆ ಸೀಮಿತವಾದ ಸಂಗತಿಯೂ ಅಲ್ಲ, ಒಟ್ಟಾರೆ ಮನೋವಿಕಸನಕ್ಕೆ ಸಂಬಂಧಿಸಿದ ಸಂಗತಿ. ಯಾಕೆಂದರೆ ಕತೆಗಳು ಮನೋವಿಕಸನಕ್ಕೆ ಅತ್ಯಗತ್ಯವಾದ ಕಲ್ಪನಾಶಕ್ತಿಯನ್ನು ಚುರುಕುಗೊಳಿಸುತ್ತವೆ. ದೊಡ್ಡ ತತ್ವಜ್ಙಾನಿಯಾಗಿದ್ದ ಲುಡ್ವಿಗ್ ವಿಟ್ಗೆನ್‌ಸ್ಟೈನ್ ಕೂಡಾ ಮನರಂಜನೆಯ ಪುಸ್ತಕಗಳನ್ನು (ಮುಖ್ಯವಾಗಿ ಪತ್ತೇದಾರಿ ಕಾದಂಬರಿಗಳನ್ನು) ಓದುತ್ತಿದ್ದ; ಸಾಧಾರಣವಾದ ಫಿಲ್ಮುಗಳನ್ನೂ ನೋಡುತ್ತಿದ್ದ. ಇವೆಲ್ಲವೂ ಅವನ ತತ್ವಜ್ಞಾನದ ಚಿಂತನೆಗೆ ಒಂದು ರೀತಿಯಿಂದ ಅಗತ್ಯವಾಗಿದ್ದುವು ಎನ್ನಬಹುದು. ಈ ನಿಟ್ಟಿನಲ್ಲಿ ಅಕ್ಷರಮಾಧ್ಯಮ ದೃಶ್ಯಮಾಧ್ಯಮಕ್ಕಿಂತಲೂ ಹೆಚ್ಚು ಉತ್ತೇಜಕವಾದದ್ಧು. ಇಂದು ಈ ‘ದ್ವಿತೀಯ ಮೌಖಿಕತೆ’ಯ (secondary orality) ಯುಗದಲ್ಲಿ ಎಲ್ಲೆಡೆಯೂ ದೃಶ್ಯಮಾಧ್ಯಮ ಮತ್ತು ಶ್ರವಣ ಮಾಧ್ಯಮಗಳದ್ದೇ ಆಡಳಿತ. ಆದರೆ ಮನಸ್ಸನ್ನು ಯೋಚನೆಗೆ ಹಚ್ಚುವುದರಲ್ಲಿ ಇಂಥ ಶೀತಲ ಮಾಧ್ಯಮ’ಗಳ (cool medium) ಪಾತ್ರ ತುಲನಾತ್ಮಕವಾಗಿ ಕಡಿಮೆ; ಅದಕ್ಕೆ ಅಕ್ಷರ ಮಾಧ್ಯಮದಂಥ ‘ಉಷ್ಣ ಮಾಧ್ಯಮ’ವೇ (hot medium) ಬೇಕು. ನಾನಿಲ್ಲಿ ಬಳಸುತ್ತಿರುವುದು ಮಾಧ್ಯಮತಜ್ಞ, ಮಾರ್ಶಲ್ ಮೆಕ್ಲೂಹನ್ ಬಳಕೆಗೆ ತಂದ ಪರಿಕಲ್ಪನೆಗಳನ್ನು. ಶೀತಲ ಮಾಧ್ಯಮಗಳು ಮನಸ್ಸನ್ನು ಜಡಗೊಳಿಸಿದರೆ ಉಷ್ಣ ಮಾಧ್ಯಮಗಳು ಅದನ್ನು ಚುರುಕುಗೊಳಿಸುತ್ತವೆ ಎನ್ನುತ್ತಾನೆ ಮೆಕ್‌ಲೂಹನ್.

ಹಿಂದಿನ ಕಾಲದಲ್ಲಿ ಮಕ್ಕಳಿಗೆ ಕತೆಗಳಲ್ಲಿನ ಆಸಕ್ತಿ ಕತೆ ಹೇಳುವ ಹಿರಿಯರ ಮೂಲಕ ಬರುತ್ತಿತ್ತು. ಇದು ಹೆಚ್ಚಾಗಿ ಅವರವರ ಮನೆಗಳಲ್ಲಿ ನಡೆಯುತ್ತಿದ್ದುದು. ಆದರೆ ಇಂದು ಅಂಥ ಕತೆ ಹೇಳುವ ಸಂಪ್ರದಾಯ ಇಲ್ಲದಾಗಿದೆ. ಶಾಲೆಯಿಂದ ಬಂದ ಮಕ್ಕಳು ಮನೆ ಕೆಲಸ ಮುಗಿಸಿ ಟೀವಿ ಮುಂದೆ ಕೂತುಕೊಳ್ಳುತ್ತಾರೆ. ಇಲ್ಲವೇ ಆಟವಾಡಲು ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಮಕ್ಕಳಲ್ಲಿ ಕಥಾಸಕ್ತಿಯನ್ನು ಕುದುರಿಸುವುದು ಹೇಗೆಂದು ನಾವು ಯೋಚಿಸಬೇಕಾಗಿದೆ. ಮನೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಅಸಮರ್ಥವಾದಾಗ ಶಾಲೆಯೇ ಇದನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಎಂದರೆ ಪ್ರತಿ ಶಾಲೆಯಲ್ಲೂ ಚಿಕ್ಕ ಮಕ್ಕಳಿಗೆ ಕತೆ ಹೇಳುವ, ದೊಡ್ಡ ಮಕ್ಕಳಿಂದ ಕತೆ ಕಾದಂಬರಿ ಓದಿಸುವ ಅನುಕೂಲತೆ ಇರಬೇಕಾಗಿದೆ.

ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯದ ಅಕಾಡೆಮಿಯೊಂದಿದೆ ಎಂದುಕೊಂಡಿದ್ದೇನೆ. ಇದು ಮಾಡಬಹುದಾದ ಒಂದು ಕಾರ್ಯವೆಂದರೆ ಸಣ್ಣ ಶಾಲಾಬಾಲಕರು ಓದಬಹುದಾದಂಥ ಒಂದು ನೂರು ಕನ್ನಡ ಕ್ಲಾಸಿಕ್ಸ ಗಳನ್ನ ಗುರುತಿಸಿ ಇವುಗಳ ಚಂದವಾದ ಹೊಸ ಮುದ್ರಣ ಹಾಕಿಸುವುದು ಹಾಗೂ ಇವುಗಳ ಒಂದೊಂದು ಸೆಟ್ಟುಗಳನ್ನ ಪ್ರತಿ ಕನ್ನಡ ಶಾಲೆಗಳಿಗೂ ಒದಗಿಸುವುದು. ಇದು ಅಗತ್ಯ ಯಾಕೆಂದರೆ ಶಾಲೆಗಳಲ್ಲಿ ಇಂಥ ಉಪಪಠ್ಯಗಳೇ ಓದುವುದಕ್ಕೆ ಸಿಗುವುದಿಲ್ಲ. ಗ್ರಾಮಾಂತರದ ಲೈಬ್ರರಿಗಳಲ್ಲೂ ಇವು ಸಿಗುತ್ತವೆ ಎನ್ನುವುದಕ್ಕಾಗದು. ಆದ್ದರಿಂದ ಶಾಲೆಗಳಲ್ಲೇ ಈ ಓದಿನ ಚಳುವಳಿ ಸುರುವಾಗಬೇಕು. ಓದು ಒಂದು ಹವ್ಯಾಸವಾಗಿ ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಅದು ಜನ ಪತ್ರಿಕೆ ಓದುವ ಹಾಗೆ. ಪತ್ರಿಕೆ ದಿನವೂ ಓದುವವರಿಗೆ ಪತ್ರಿಕೆ ಒಂದು ದಿನ ಸಿಗದಿದ್ದರೆ ಅದೇನೋ ಕಳೆದುಕೊಂಡಂತಾಗುತ್ತದೆ. ಪುಸ್ತಕದ ಓದೂ ಹಾಗೇ. ಆದರೆ ಓದಿನ ರುಚಿ ಮಕ್ಕಳಿಗೆ ಹತ್ತಬೇಕಾದರೆ ಮೊದಲು ಪ್ರೋತ್ಸಾಹ ಮತ್ತು ಅನುಕೂಲತೆ ಎರಡೂ ಅಗತ್ಯ. ಗ್ರಾಮಾಂತರ ಪರದೇಶಗಳಲ್ಲಿ ಓದಬೇಕೆಂದರೂ ಪತ್ರಿಕೆಗಳಾಗಲಿ ಪುಸ್ತಕಗಳಾಗಲಿ ಸಿಗುತ್ತಿಲ್ಲ. ಹಳೆಯಪುಸ್ತಕಗಳಂತೂ ಎಲ್ಲೂ ದೊರಕುವುದಿಲ್ಲ. ಸಂಸ್ಕೃತಿಯೊಂದು ಜೀವಂತವಾಗಿ ಉಳಿಯಬೇಕಾದರೆ ಇಂಥ ಕೊರತೆಯನ್ನು ನೀಗಿಸಬೇಕಾಗಿದೆ.

ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಭವಿಷ್ಯದ ಬಗ್ಗೆ ಇಂದು ಹಲವರು ಸಹಜವಾಗಿಯೆ ಆತಂಕಗೊಂಡಿದ್ದಾರೆ. ಇಂಗ್ಲಿಷ್ ಭಾಷೆ ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಆಕರ್ಷಿಸುತ್ತಿದೆ. ಇಂಥ ಸಂದರ್ಭದಲ್ಲಿ ಕನ್ನಡವನ್ನೂ ಸ್ಪರ್ಧಾತ್ಮಕವಾಗಿ ಮಾಡಬೇಕಾದರೆ ಕನ್ನಡ ಪುಸ್ತಕಗಳ ಓದಿನ ಒಲವನ್ನು ಮಕ್ಕಳಲ್ಲಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡದ ಜತೆಗೆ ಅವರು ಇಂಗ್ಲಿಷ್ ಅಥವಾ ಇನ್ನು ಯಾವುದೇ ಭಾಷೆಯ ಪುಸ್ತಕಗಳನ್ನು ಬೇಕಾದರೂ ಓದಿಕೊಳ್ಳಲಿ. ವಾಸ್ತವದಲ್ಲಿ ನಾನು ಬಹುಭಾಷಾ ಪರಿಣತಿಯನ್ನು ಪ್ರೋತ್ಸಾಹಿಸುವವ. ಆದರೆ ಕನ್ನಡ ಓದಿನ ಸುಖ ನನಗೆ ಇನ್ನು ಯಾವ ಭಾಷೆ ಓದಿದಾಗಲೂ ಸಿಗುವುದಿಲ್ಲ. ಮಾತೃ ಭಾಷೆಯ ಆಕರ್ಷಣೆಯೇ ಅಂಥಹದು. Language is the house of being ‘ಭಾಷೆ ಜೀವದ ಮನೆ’ ಎಂದ ಜರ್ಮನ್ ತತ್ವಜ್ಞಾನಿ ಹೈಡೆಗ್ಗರ್; ಬಹುಶಃ ಈ ಮಾತು ಮಾತೃಭಾಷೆಗೆ ಹೆಚ್ಚು ಒಪ್ಪುತ್ತದೆ ಎಂದು ಕಾಣುತ್ತದೆ. ಮಾತೃಭಾಷೆಯನ್ನು ಬಿಟ್ಟ ಮನುಷ್ಯ ಮನೆ ಬಿಟ್ಟ ಮಗನ ಹಾಗೆ – ಸದಾ ಅತಂತ್ರನಾಗಿರುತ್ತಾನೆ.

Cogito ergo sum ‘ಚಿ೦ತಿಸುತ್ತೇನೆ ಆದ್ದರಿಂದ ಇದ್ದೇನೆ’ ಎಂದ ದೆಕಾರ್ತ್. ಮನುಷ್ಯನ ಅಸ್ತಿತ್ವವೇ ಚಿ೦ತನಾಶಕ್ತಿಯಲ್ಲಿ ಎಂದು ಇದರ ಅರ್ಥ. ಈ ಮೂಲಕ ದೆಕಾರ್ತ್ ಮನುಷ್ಯಕಲ್ಪನೆಯನ್ನು ದೇಹ ಮತ್ತು ಯೋಚನೆ ಎಂಬುದಾಗಿ ಭಗ್ನಗೊಳಿಸಿದ ಮತ್ತು ದೇಹವನ್ನು ಯೋಚನೆಗಿ೦ತ ಕೀಳಾಗಿಸಿದ ಎಂದು ನವ್ಯೋತ್ತರ ಚಿಂತನೆಯವರು ಟೀಕಿಸುವುದಿದೆ. ಆದರೆ ಹೀಗೆ ಟೀಕಿಸುವುದೂ ಕೂಡಾ ಚಿಂತನೆಯಿಂದಲೇ ಎಂಬುದನ್ನು ಮರೆಯಬಾರದು. ಓದು ಬರಹ ಇಲ್ಲದವರು ಸಹಾ ಚಿಂತಿಸುತ್ತಾರೆ ಎನ್ನುವುದು ನಿಜ. ಇದಕ್ಕೆ ಸಾಕ್ರೆಟೀಸನ ಉದಾಹರಣೆಯಿದೆ. ಸಾಕ್ರೆಟೀಸ್ ಅಕ್ಷರ ಸಂಸ್ಕೃತಿಯನ್ನು ವಿಸ್ಮೃತಿಮೂಲವೆಂದು ಟೀಕಿಸಿದವನೂ ಸರಿ. ಆದರೂ ನಮಗಿಂದು ಆತನ ವಿಚಾರಗಳು ಹರಿದುಬಂದುದು ಅಕ್ಷರಸಂಸ್ಕೃತಿಯ ಮೂಲಕವೇ. ಓದಿನಿಂದ ನಮ್ಮ ಚಿಂತನಾಶಕ್ತಿ ವರ್ಧಿಸುತ್ತದೆ ಎಂದು ಬೇರೆ ಹೇಳಬೇಕಾದ್ದಿಲ್ಲ. ಇದಕ್ಕೆ ಅನುವು ನೀಡುವ ಅಕ್ಷರಸಂಸ್ಕೃತಿ ಇಂದು ನಮ್ಮ ದೊಡ್ಡ ಸಂಪನ್ಮೂಲ ಹಾಗೂ ಅದಕ್ಕೆ ಎಲ್ಲರೂ ಹಕ್ಕುದಾರರು; ಕೇವಲ ‘ಬುದ್ಧಿಜೀವಿ’ಗಳಷ್ಟೇ ಅದರ ಉಪಯೋಗ ಪಡೆದರೆ ಸಾಲದು. ಆರ್ಥಿಕ ಸಮಾನತೆಯಿಂದ ಎಲ್ಲವೂ ಸರಿಯಾಗುತ್ತದೆ ಎನ್ನುವ ಒಂದು ವಾದವಿದೆ. ಕೇವಲ ಆರ್ಥಿಕ ಸಮಾನತೆಯಿಂದ ವೈಚಾರಿಕ ಸಾಮರ್ಥ್ಯವೇನೂ ಬರುವುದಿಲ್ಲ. ಯಾಕೆಂದರೆ ಅಧಿಕಾರ ಯಾವತ್ತೂ ಬೌದ್ಧಿಕ ವರ್ಗದ ಕೈಯಲ್ಲಿಯೇ ಇರುತ್ತದೆ. ನಿಜವಾದ ಸಮಾನತೆ ಸಮಾನ ಶಿಕ್ಷಣ ಮತ್ತು ಅವಕಾಶದಿಂದ ಮಾತ್ರವೇ ಸಾಧ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಟೆ ಸುತ್ತಿನ ಮೇನೆ (ಆಲಾಪ)
Next post ಕಡಿಮೆ-ಜಾಸ್ತಿ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys