ನಿದ್ದೆ ತಬ್ಬದ ಇರುಳುಗಳಲ್ಲಿ
ಮೇಲಿಂದಿಳಿಯುವ ಉರುಳುಗಳು;
ಅರ್ಧ ಎಚ್ಚರದ ಮಂಪರಿನಲ್ಲಿ
ಕೊರಳನು ಬಿಗಿಯುವ ಬೆರಳುಗಳು;
ಮನಸಿನ ಒಳನೆಲಮಾಳಿಗೆಯಲ್ಲಿ
ಪೇರಿಸಿದಾಸೆಯ ಮದ್ದುಗಳು;
ಮದ್ದಿನ ಮನೆಯ ಕದವ ಒದೆಯುತಿವೆ
ಕೊಳ್ಳಿ ಹಿಡಿದ ಕರಿದೆವ್ವಗಳು.

ಚಿತ್ತದ ಕತ್ತಲೆ ಮಸಣಗಳಲ್ಲಿ
ಹೆಣಗಳ ಮೇಯುವ ಬೆಂಕಿಗಳು,
ಮಸಣದ ಪಿಶಾಚಿ ಮುಖದಿಂದೇಳುವ
ವಿಕಾರ ದನಿಯ ಊಳುಗಳು;
ಅಟ್ಟಲು, ಬೆಳಗಲು, ಬಳಸಲಾಗದ
ಚಟ್ಟದ ಉರಿಗಳ ಬೆಳಕಲ್ಲಿ
ತಬ್ಬಿಕೊಳ್ಳುತಿವೆ ಶಾಕಿನಿ ಡಾಕಿನಿ
ಕರುಳನು ಧರಿಸಿ ಕೊರಳಲ್ಲಿ.

ನೆಟ್ಟು ಬೆಳೆದ ರಸಗಬ್ಬಿನ ತೋಟಕೆ
ಕೂಗಿ ನುಗ್ಗುತಿವೆ ಸಲಗಗಳು ;
ಬಂದು ಬೀಳುತಿವೆ ಹೋಮಕುಂಡಕ್ಕೆ
ರಕ್ತಮಾಂಸಗಳ ಕೊಳಗಗಳು;
ಹೊತ್ತಿ ಉರಿಯುತಿವೆ ಸುಪ್ತಕಾಮಗಳು
ಜ್ವಲಿಸುವ ಸುವರ್ಣ ಲಂಕೆಗಳು ;
ಸರಕು ಇಡಿಕಿರಿದ ಹಡಗು ಸ್ಫೋಟಿಸಿದೆ
ಚೆಲ್ಲಾಡಿವೆ ಅವಶೇಷಗಳು.
ಕಾಮದ ಬೆಕ್ಕನ್ನಟ್ಟಿ ಧಾವಿಸಿವೆ
ಕಪ್ಪನೆ ಬೇಟೆಯ ನಾಯಿಗಳು,
ಮರಗಿಡ ಸುತ್ತಿ ಸಂದಿಗೊಂದಿಗಳ
ಹೊಕ್ಕು ತಪ್ಪಿಸುವ ಆಟಗಳು
ಮುಗಿದುವೊ ಏನೋ, ಬಳಲಿದೆ ಕಾಲು
ಬಲಿಗೆ ಎರಗುತಿವೆ ಬೇಟೆಗಳು;
ಬೆರಗು ಕವಿಸುತಿವೆ ಈ ಹೊತ್ತಿನೊಳೂ
ಜಿಗಿಯುವ ಆಸೆಯ ಚಿಗರೆಗಳು!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)