ಶೋಕಗೀತೆ

ಹೋದುದಲ್ಲಾ ಎಲ್ಲಾ ಹೋದುದಲ್ಲಾ |
ಹೋದುದೆಲ್ಲವು ಕಣ್ಣ ಹಿಂದೆ ||
ಖೇದವಿನ್ನೆನಗುಳಿದುದೊಂದೆ |
ಹೇ ದಯಾನಿಧೆ ಪ್ರೇಮದಿಂದೆ
ಹಾದಿ ತೋರಿಸಿ ನಡಿಸು ಮುಂದೆ
ಹೋದುದಲ್ಲಾ ||೧||

ತೊಡೆಯ ತೊಟ್ಟಿಲೊಳೆನ್ನನಿಟ್ಟು |
ಕುಡಿಸಿ ಮಮತೆಯ ಗುಣವ ನೆಟ್ಟು ||
ಬಿಡದೆ ವಿದ್ಯೆಯ ಬಾಯ್ಗೆಕೊಟ್ಟು |
ನಡೆದನೆನ್ನನು ಮರುಗಬಿಟ್ಟು
ಹೋದನಲ್ಲಾ ಅಪ್ಪ ಹೋದನಲ್ಲಾ ||೨||

ಆಟದಿಂದೆನ್ನೊಡನೆ ಬೆಳೆದು |
ಊಟಕೂಟದ ಪ್ರೇಮ ತಳೆದು ||
ಕೋಟಲೆಯ ಸಂಸಾರ ಕಳೆದು |
ದಾಟಿದನು ಮಮಹೃದಯ ಸೆಳೆದು
ಹೋದನಲ್ಲಾ ತಮ್ಮ ಹೋದನಲ್ಲಾ ||೩||

ಮನದಿ ಕೃಷ್ಣತೆಯನ್ನು ಮುಚ್ಚಿ |
ಕನಕತನುಸೌಂದರ್ಯ ಬಿಚ್ಚಿ ||
ಧನದ ಕಪಟಸ್ನೇಹ ಹಚ್ಚಿ |
ಕೊನೆಗೆ ಮಿತ್ರಭುಜಂಗ ಕಚ್ಚಿ
ಹೋದನಲ್ಲಾ ಮಿತ್ರ ಹೋದನಲ್ಲಾ ||೪||

ಅಲೆಯ ಬಡಿತಕೆ ಜಾರ್‍ವ ಮಳಲೋಲ್ |
ಕೆಳಗಿಳಿವ ಹೊತ್ತರೆಯ ನೆಳಲೋಲ್, ||
ತಳದ ತೂತಿನ ಗಡಿಗೆ ಜಲದೋಲ್‌ |
ತಿಳಿದು ತಿಳಿಯದೆ ನೂರಬುದದೋಲ್
ಹೋದುದಲ್ಲಾ ಪ್ರಾಯ ಹೋದುದಲ್ಲಾ ||೫ ||

ತೋರದಂದದಿ ಸೇರಿ ತೋರುತ |
ಭೂರಿ ಸುಖಸಂತಸವ ಕೋರುತ ||
ನೀರಿನೋಲ್ ಕೈಯಿಂದ ಜಾರುತ |
ಹಾರಿ ಹೋದುದು ದುಃಖಕಾರುತ
ಹೋದುದಲ್ಲ ದ್ರವ್ಯ ಹೋದುದಲ್ಲಾ ||೬||

ಅಕಟ ಈ ಸಂಸಾರದೊಳಗೆ |
ಸಕಲ ನಾಶಕ ಮೂರುಗಳಿಗೆ ||
ಶಕಟನಂದದಿ ತಿರುಗಿ ಕೆಳಗೆ |
ವಿಕಟ ಭಾರತನಾದೆ ನಿಳೆಗೆ ||೭||

ಹೋದುದನು ನಾ ಮರುಗದಂದವ |
ಗೈದು ಬಿಗಿ ವೈರಾಗ್ಯಬಂಧವ, |
ಓ ದಯಾನಿಧೆ ಭಕ್ತಬಾಂಧವ |
ಮೋದದಿಂದವತರಿಸಿ ಬಂದವ ||೮||

(ಕಂಠೀರವ, ೧೯೩೫)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕದನ ವಿರಾಮದ ಮಾತು
Next post ಸಾವು ಬಂದಾಗ

ಸಣ್ಣ ಕತೆ