ಕಾಶೀಬಾಯಿ- “ಟಾಂಗಾ ಬಂತು! ಎಂಥಾ ಲಗೂನ ಗಾಡೀ ಹೊತ್ತಾತಿದೂ. ಮುಂಜಾನಿಂದ ಗಡಿಬಿಡಿ ಗಡಿಬಿಡಿ ಇನ್ನೂ ಕೆಲಸ ಮುಗಿದಽ ಇಲ್ಲ. ಆಯ್ತು. ಕೈಕಾಲ ಘಟ್ಟಿ ಇರೂದ್ರೊಳಗಽ ಉಡುಪಿ ಕೃಷ್ಣನ್ನಽ ನೋಡೆರ ಬರೂಣ. ಗಂಟ ಕಟ್ಟಿದ್ದಽ ಅದ. ವೈದು ಟಾಂಗಾದಾಗ ಇಡಪಾ. ನೀ ಬ್ಯಾಡ ಮಲ್ಯಾ. ಈಗಽ ಮೈಲಿಗಿ ಮಾಡಬ್ಯಾಡ, ಗೋವಿಂದಾ ನೀ ಒಯ್ದು ಇಡ ಬಾಳಾ. ಹಿಂದಿನ ಮಗ್ಗಲ ಇಡು. ಟಾಂಗಾದ ಇಮಾಮಗ ಮುಟ್ಟಿಸ ಬ್ಯಾಡ.

ಹೋಗಿಬರ್‍ತಿನಾ ಗಂಗಾಬಾಯಿ, ಹುಡುಗುರು ಹುಪ್ಚಿ ಜ್ವಾಕೀಲೆ ಇರ್‍ಯಾಽ. ಅಂದಾಕರಾ ಉಲಳಕೋಚಿ ಹುಡುಗರು. ಭಾವಿಕಡೆ ಹೋಗ್ಗೊಡ ಬ್ಯಾಡಾ. ಭಾಂವ್ಯಾಗ ಹಣಿಕಿ ಹಾಕ್ಯಾವು ಎಲ್ಯಾರೆ. ಒಂದು ಹೋಗಿ ಒಂದು ಆದೀತು. ಹಿಂದಿನ ಬಾಗಲಾನ ಇಕ್ಕಿ ಚಿಲಕಾ ಹಾಕು. ಅಂದರ ನಿಶ್ಚಿಂತಿ ಆಗತದ. ಇಷ್ಟು ಹುಡುಗುರ್‍ನ ಕಟಿಕೊಂಡು ಹ್ಯಾಂಗ ಇರ್‍ತೀಯೋ ಏನೋ. ಇದೇ ಚಿಂತಿ ಹತ್ತೇದ ನನಗ. ಅವು ಕಿರಿಕಿರಿ ಮಾಡತಾವಂತ ಸಿಕ್ಕದ್ದ ತಿನ್ಲಿಕ್ಕೆ ಕೊಡಬ್ಯಾಡ. ಬ್ಯಾಸಿಗೆ ದಿವಸ ನೀರು ಕುಡಕುಡದು ಜಡ್ಡಾಗ್ತದ ಹುಡುಗರಿಗೆ. ಮನ್ಯಾಗೇನಾರ ಮಾಡಿದರ ಇರಿವಿ ಮುಕರಿದ್ಹಂಗ ಮುಕರತಾವ ಖೋಡಿಗೋಳು!

ಹೌದು ನೋಡು. ಮರ್ತೆ ಬಿಟ್ಟಿದ್ದೆ. ಇರವಿ ಅಂಬೋಣ ನೆನಪು ಆಯ್ತು. ಬೆಲ್ಲದ ಹರಿವಿ ಬುಡದಾಗಿನ ಪರಾತದಾಗ ನೀರು ಉಳಿದಿಲ್ಲ. ಎಲ್ಲಾ ಇರಿಬೀ ಪಾಲು ಆದೀತು. ಬೆಲ್ಲಾ ನೋಡಪಾ ರಾಮೂ. ನೀನರೆ ನೆನಪಲೆ ನೀರ್‍ಹಾಕು. ಇಲ್ದ್ರಿದ್ರ ತಟ್ಟಿನಾಗ ಕಟ್ಟಿ ನೆಲವಿನ ಮ್ಯಾಲೆ ಇಡು. ಅಂದರಽ ತಾಪೇ ತಪ್ತದ. ಅದೇನು ಹಾಲ್ಮಸರಿನ ಗಡಿಗೆಲ್ಲಾ. ಬೆಕ್ಕು ಹಾರಿ ಕೆಡವು ಹಾಂಗಿಲ್ಲ. ಅಷ್ಟು ಮಾಡಿ ಬಿಡು.

ಬೆಕ್ಕಂಬೂಣಾ ಧ್ಯಾನಕ್ಕ ಬಂತ ನೋಡು. ಈ ಗಾಡಿ ಗಡಿಬಿಡಿಯೊಳಗ ಹಾಲು ಮಸರಿನ ಕಿಡಕಿ ಬಾಗ್ಲಾನಽ ಹಾಕಿಲ್ನಾನು. ಗೋವಿಂದಾ ಹಾಕಿಬಾರಪಾ ಬಾಗಲಾ. ಮುಪ್ಪಿನಕಾಲ. ನನಗೂ ಅರವು ನುರವು ಆಗ್ಲಿಕ್ಕೆ ಹತ್ತೇದ. ಕೈಕಾಲೊಂದು ಒಣಗಿ ಹತ್ತೀಕಟಗಿ ಆಗ್ಯಾವ. ನೆನಪೊಂದು ಹಾರಲಿಕ್ಹಂತ್ಯಂದ್ರ ಆಗೇ ಹೋತು. ಕೃಷ್ಣಾ ನೀ ಮಾಡಿದ್ದೇ ಖರೇಪಾ ಇರ್‍ಲಿ! ನಂದೇನ ಯಾಕಾಗವಲ್ದು, ಹತ್ತೀ ಕಟಿಗಿ ಅಲ್ಲೇ ಬಿಟ್ಟಿರ್‍ನೋಡ್ರಿ ಬೈಲಾಗ್ಯೆ. ಎಲ್ಲಾರೆ ಒಂದು ಅಡ್ಡ ಮಳಿ ಹೊಡೀತಂದರಽ ಎಲ್ಲಾ ತೊಯ್ದು ಹೋಗ್ತಾವ, ತಂದು ಎಮ್ಮೆ ಕಟ್ಟೊ ಕೊಟ್ರ್ಯಾಗರಽ ಇಡಸು ರಾಮೂ; ಮರೆಯಬ್ಯಾಡಾ. ಅಯ್ಯಯ್ಯ. ಎಮ್ಮಿ ಕರಾ ಕಟ್ಸೂದ್ಸುದ್ದಾ ಮರ್‍ತೆ ಬಟ್ನಾನು! ಮಲ್ಯಾ ನೀನರೇ ನೆನಪ ಮಾಡಬೇಕೋ ಇಲ್ಲೋ! ಹೋಗು ಕರಾಕಟ್ಟು.

ನಾ ಬರ್‍ತೀನ್ಯಾ. ಹೂಂ. ಟಾಂಗಾ ಹೊಡೀಪಾ ಇಮಾಮಾ. ಉಡುಪಿ ಯಾತ್ರೀಯವರೆಲ್ಲಾರೂ ಟೇಸನ ತನ್ಕ ಹೋಗಿದ್ದಾರೋ ಏನೋ! ತಡಾ ಅತ! ಗಾಡೀ ಸಿಗೂದಿಲ್ಲ? ಅಯ್ಯ ನನ್ನ ಕರ್‍ಮ! ನನ್ನ ನಸೀಬ್ದಾಗಿಲ್ಲ ಉಡುಪಿ ಯಾತ್ರಿ. ದೇವರೇನ್ಮಾಡ್ಯಾನು. ಇರ್‍ಲಿ. ಹೊರಟದ್ದು ಹೊರಟೇವು ತೊರವಿಗ್ಹೋಗಿ ನರಸಿಂಹ ದೇವರಿಗೆ ಕಾಯರೇ ಒಡಿಸಿಗೊಂಡು ಬರೋಣ. ನಮ್ಮ ಪಾಲಿಗೆ ತೊರವಿ ನರಸಿಂಹ ದೇವ್ರಽ ಉಡುಪಿ ಕೃಷ್ಣಾಂಬೂಣು. ಇಂದ್ಯಾವಾರ? ಮಂಗಳವಾರ! ತೊರವಿಗ್ಹೋಗೂದಾದ್ರ ನಾಡ್ದ ಬ್ರಸ್ಪತ್ವಾರ ಹೋದರಾತು.

ಇಳಸಪಾ ಸಾಮಾನ. ನಿನ್ಮಾಡೂದು ಹರಿ! ನಿನ್ನಿಛ್ಛಾ!!
*****