ನನಗೆ ನನ್ನ ಬೊಬ್ಬರ್ಯ ಬೇಕು
ಕೆಂಪು ಮಣ್ಣಿನ ಹಾದಿ ಬೇಕು

ದಾರಿಯಲಿ ಕಾಲುಗಳು ಸೊಲದಂತೆ
ಕಲ್ಲು ಮುಳ್ಳುಗಳು ತಾಗದಂತೆ
ನನಗೆ ನನ್ನ ಬೊಬ್ಬರ್ಯ ಬೇಕು
ಕೆಂಪು ಮಣ್ಣಿನ ಹಾದಿ ಬೇಕು

ಬಾಯಾರಿ ದಣಿದು ಬೆಂಡಾಗದಂತೆ
ನಡುದಾರಿಯಲಿ ಕುಸಿದು ಬೀಳದಂತೆ
ನನಗೆ ನನ್ನ ಗೇರುಮರ ಬೇಕು
ಮರದ ತುಂಬ ಹಣ್ಣು ಬೇಕು

ಇಳಿರಾತ್ರಿಯಲಿ ಸಿಕ್ಕಿ ದಿಕ್ಕುಗೆಡದಂತೆ
ದಟ್ಟ ಕತ್ತಲೆಗೆ ಹೆದರಿಕೊಳದಂತೆ
ನನಗೆ ನನ್ನ ಚಂದ್ರ ಬೇಕು
ಆಕಾಶದ ತುಂಬ ಬೆಳಕು ಬೇಕು

ಗಾಳಿಮಳೆಯಲಿ ಮೈ ತೊಯ್ಯದಂತೆ
ಮನವ ಬೇಸರ ಸುಯ್ಯದಂತೆ
ನನಗೆ ನನ್ನ ಆಲ ಬೇಕು
ಅಲ್ಲಿ ಇನ್ನೂ ಯಾರೊ ಬೇಕು

ನನಗೆ ನನ್ನ ಬೊಬ್ಬರ್ಯ ಬೇಕು
ಕೆಂಪು ಮಣ್ಣಿನ ಹಾದಿ ಬೇಕು
*****