ಮೂರು ಕಾಸಿನ ಗಂಧ ಬೊಟ್ಟು
ಮೊಣಕಾಲು ಮಾರುದ್ದ ಸೀರೆ
ತಲೆ ತುಂಬಾ ಸೆರಗು
ತಲೆ ಬಾಗಿಲಲೇ ನಿಂತು
ಪತಿದೇವ ನಿರೀಕ್ಷೆ
ನನ್ನಜ್ಜಿ ಪರಂಪರೆ

ಬಳೆಯಂಡಿಯ ದೊಡ್ಡ ಬಿಂದಿಯಿಟ್ಟು
ಆರು ಮಾರುದ್ದ ಸೀರೆಯುಟ್ಟು
ಮೈತುಂಬಾ ಸೆರಗ ಹೊದ್ದು
ಟಿ.ವಿ. ನೋಡುತ್ತ ಮತ್ತೆ
ಅಡಿಗಡಿಗೆ ಬಾಗಿಲಲಿ ಇಣುಕುತ್ತ
ಗಂಡನಿಗೆ ಕಾದವಳು – ನನ್ನಮ್ಮ

ಹಣೆಯಲ್ಲಿ ಚಿಕ್ಕ ಚುಕ್ಕಿ
ತುಟಿಗೊಂದಿಷ್ಟು ಬಣ್ಣ ತಿಕ್ಕಿ
ಚೂಡಿದಾರದ ಪೋಷಾಕು ತೊಟ್ಟು
ಸ್ಕೂಟಿ ಹತ್ತಿ ಮಕ್ಕಳ ಸ್ಕೂಲಿಗೆ ಬಿಟ್ಟು
ಮನ ಬಾಗಿಲಿಗೆ ಬೀಗ ಜಡಿದು
ಗೃಹಿಣಿ ಗೃಹಮುಚ್ಯತೆ ಆಗದೇ
ಗೃಹಿಣಿ ಉದ್ಯೋಗಮುಚ್ಯತೆ
ಆದವಳು ನಾನು

ಪರಂಪರೆಯ ಮಾರ್ಪಾಟು
ಹಣೆಯಲ್ಲಿ ಬೊಟ್ಟಿಲ್ಲ
ಪರ್ಯಾಯಕ್ಕೆ
ತೋಳಲ್ಲಿ ಬೆನ್ನಲ್ಲಿ ಹಚ್ಚೆ
ಮೈಗಂಟಿದ ಬಟ್ಟೆಯಲ್ಲಿ
ಅರನಗ್ನ ವೇಷದಲಿ
ಕೈಯಲ್ಲಿ ಮೊಬೈಲು
ಕಾಲಲ್ಲಿ ಶೂತೊಟ್ಟು
ಹುಡುಗನೋ ಹುಡುಗಿಯೋ
ನೋಟಕ್ಕೆ ಅಳೆಯಲಾಗದು
ಬರುತಿಹಳು ಅಂತೆ
ನನ್ನ ಮಗಳು
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)