ಹಣದ ಚೈತನ್ಯವನು ಜೀವನ ಚೈತನ್ಯವೆನಬಹುದೇ?

ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? - ವಿಜ್ಞಾನೇಶ್ವರಾ *****

ಅದೆಂತು ಕೊರತೆಯಪ್ಪುದು? ಅನ್ನದ ವಿಧಿಯನರಿತರೆ

ವಿಧವಿಧದೊಳಿಲ್ಲಿರ್‍ಪ ಜೀವಕೆಲ್ಲಕು ಹುದುಗಿಹುದಲ್ಲಲ್ಲೇ ಪ್ರತ್ಯೇಕದನ್ನಡುಗೆ ಅದಕೆಂದೆ ಇಷ್ಟೊಂದು ಹಸುರುಡುಗೆ ಅದರನ್ನ ಇದಕಲ್ಲ ಕಿತ್ತೆಸೆವ ಕೇಡಿಲ್ಲ ಆದೊಡಂ ಮನಜನಿದಕಪವಾದವಲಾ - ವಿಜ್ಞಾನೇಶ್ವರಾ *****

ಕೃಷಿ ವಿಜ್ಞಾನಿಯಾಗುವುದಿಂದು ಬಲು ಸುಲಭ ಗೊತ್ತಾ?

ವಿಷವನೌಷಧಿಯೆಂದು ಎಮ್ಮನ್ನದಾ ಕೃಷಿಯೊಳದಾವ ಹಿಡಿತವಿಲ್ಲದೆರೆಯುತಿರೆ ಔಷಧ ವಿಜ್ಞಾನಕಿಂದಮಿತದವಕಾಶವಲಾ ವೇಷದೊಳಿಪ್ಪಜ್ಞಾನವನೆ ವಿಜ್ಞಾನವೆನೆ ವಿಶೇಷದವಕಾಶವೆಲ್ಲರಿಗು ಭಲಾ - ವಿಜ್ಞಾನೇಶ್ವರಾ *****

ಬಿಗು ವಿಷವನೌಷಧಿ ಎನಬಹುದೇ?

ಜಗದ ನಗುವಾಗಿ ಸೊಗದ ಬೆಳಕಾಗಿ ಆ ರೋಗ್ಯದಚ್ಚರಿಯೊಳನುದಿನವು ಬಪ್ಪಾ ಉಷೆಯ ಸೊ ಬಗನೆಲ್ಲರೊಳೆಲ್ಲೆಲ್ಲೂ ಉಳಿಸಿದರದನನು ರಾಗದೊಳೌಷಧಿ ಎನಬೇಕಲ್ಲದೊಡಿದೇನು ರೋಗವೋ ಕೃಷಿವಿಷವನೌಷಧಿ ಎನಲು - ವಿಜ್ಞಾನೇಶ್ವರಾ *****

ಅನ್ನದಾನಕ್ಕಿಂದೇನಾದರೂ ಮಹತ್ವ ಉಂಟಾ?

ಅನ್ನದಾನಗಳಿಂದ ಮುನ್ನದಾನಗಳಿಲ್ಲ ಉನ್ನತದೀ ಮಾತಿಗಿಂದಾವ ತೂಕವು ಇಲ್ಲ ದಾನದನ್ನವದಾರಿಗೆ ಬೇಕು? ದಾರಿ ದಾರಿಗು ಅನ್ನ ಸತ್ರಕುನ್ನತದ ಹೆಸರಾಗಿ ಮಿನುಗುತಿದೆ ಘನತೆಯೊಳೆಸೆವ ಕಾಸಿಗನ್ನವೆಲ್ಲೆಡೆಗುದುರುತಿದೆ - ವಿಜ್ಞಾನೇಶ್ವರಾ *****

ಧಾನ್ಯದ ಹೊಟ್ಟು ತೂರಿದಂತೆ ಒಟ್ಟು ತೂರಬಹುದೇ?

ಅನ್ನವೆಂದೇನು ಕೊಂಡಾಡುವುದೋ ಭತ್ತವೊಂ ದನೆ ಉಜ್ಜುಜ್ಜಿ ಬಿಳಿಗೊಳಿಸುತಲುಂಡನ್ನದಾ ಹೀನ ಮನವನ್ನ ಮೂಲವನೆಲ್ಲ ಕೆಡಿಸಿರಲು ಅನ್ನದೊಳಮಿತ ವಿಧವಿಹುದದನು ಋತು ಮಾನಕಪ್ಪಂತೆ ತಿನುವಾತ್ಮಜ್ಞಾನವಳಿದಿರಲು - ವಿಜ್ಞಾನೇಶ್ವರಾ *****

ಅನ್ನ ಬೀಜವನು ಬಂಜೆ ಮಾಡಿದರದು ವಿಜ್ಞಾನವೇ?

ಅನ್ನದೊಳು ಕ್ರಾಂತಿಯೋ, ಜಗದೊಳೀ ಮನುಜ ಹುಟ್ಟುವ ಮೊದಲೆ ಹುಟ್ಟರಿ ವಿನೊಳದ್ಭುತವ ಮೆರೆದಿದ್ದ ಹಸುರು ಮಂದಿರದೊಳಗೆ ತನ್ನ ಬಲದೊಳಗಿನ್ನುಹುಟ್ಟದಧಿಕ ಫಸಲಿನ ಬೀಜ ತಿನ್ನುತ ಬಯಲು ಮಾಡಿದ ಬರಡು ನೆಲದೊಳಗೆ - ವಿಜ್ಞಾನೇಶ್ವರಾ *****

ಅಡುಗೆಯ ರುಚಿಗೆ ಮಾತ್ರ ಗಮನಕೊಟ್ಟರೆ ಸಾಕಾ?

ಅಡುಗೆಯೊಳಿರಲಿ ರುಚಿಗಷ್ಟು ಗಮನ ಜೊತೆ ಗೂಡಿ ದೇಶಕಾಲದೊಳಡಗಿರ್‍ಪಾರೋಗ್ಯ ದೆಡೆಗಿರಲಿ ಸರಿ ಮಿಗಿಲು ನಮನ ತುಡುಗಿನಡುಗೆಗಾರೋಗ್ಯದಡಿಸುಡಲು ಹೂಡಿದೆಲ್ಲ ಸಮಯ ಸಂಪದ ವ್ಯರ್‍ಥ - ವಿಜ್ಞಾನೇಶ್ವರಾ *****

ಶಿರ ಕೆಳಗಾಗಿ ನಡೆಯುವುದೇನು?

ಜಾರುಗತಿಯೊಳೆಮ್ಮ ಬೇಕಿನೊಳನ್ನ ಮೊದಲೊ ಳಿರುತಿರಲು ಅನ್ನದುದ್ಯೋಗವೆಲ್ಲದಕು ಮೊದಲಿರಬೇಕು ವಸ್ತ್ರ ವಸತಿಯುದ್ಯೋಗಗಳದರ ಹಿಂದಿರಬೇಕು ನೇರ ನಡೆಯಲರಿಯದದೇನು ಸಾಧನೆಯೋ ಶಿರಸಾಸನವನೆಲ್ಲರೆಲ್ಲೆಲ್ಲೂ ಮಾಳ್ಪರಲಾ - ವಿಜ್ಞಾನೇಶ್ವರಾ *****

ಮತ್ತೆ ವಿಷ ಹೊರುವುದನೆ ಕೌಶಲವೆನಬಹುದೇ?

ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ ಹೊತ್ತವರು ಹೊತ್ತು ಕಳೆಯಲು ಬೆಟ್ಟವನು ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys