ಮಾಯದ ಬೊಂಬೆಯ ಮಾಡಿ,
ಕಂಗಳಿಗೆ ಕಾಮನ ಬಾಣವ ಹೂಡಿ,
ನಡೆನುಡಿಯೊಳಗೆ ರಂಜಕದ ತೊಡೆಗೆಯನೆ ತೊಡಿಸಿ,
ಮುಂದುಗಾಣಿಸದೆ ಹಿಂದನರಸದೆ.
ಲಿಂಗವ ಮರಹಿಸಿ, ಜಂಗಮವತೋರಿಸದೆ,
ಸಂದೇಹದಲ್ಲಿ ಸತ್ತುಹುಟ್ಟುವ,
ಈ ಭವ ಬಂಧನಿಗಳೆತ್ತ
ಬಲ್ಲರೋ ಈ ಶರಣರ ನೆಲೆಯ?
ಅವರ ನೆಲೆ ತಾನೆಂತೆಂದರೆ, ಹಿಂದನರಿದು,
ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಜಗದ ಜಂಗುಳಿಗಳ ಹಿಂಗಿ,
ಕಂಗಳ ಕರುಳನೆ ಕೊಯಿದು,
ಮನದ ತಿರುಳನೆ ಹುರಿದು,
ಅಂಗಲಿಂಗವೆಂಬ ಉಭಯವಳಿದು,
ಸರ್ವಾಂಗ ಲಿಂಗವಾಗಿ,
ಮಂಗಳದ ಮಹಾಬೆಳಗಿನಲ್ಲಿ
ಓಲಾಡುವ ಶರಣರ ನೆಲೆಯ
ಜಗದ ಜಂಗುಳಿಯಗಳೆತ್ತ ಬಲ್ಲರೊ
ಅಪ್ಪಣಪ್ರಿಯ ಚನ್ನಬಸವಣ್ಣಾ?
*****