ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ,
ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು
ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು
ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು
ಜನಸೇವಾ ಭವನಗಳಲ್ಲಿ ಇಲಿ ಹೆಗ್ಗಣಗಳು ಕೊಬ್ಬಲು
ಕುರಿಮಂದಿಯ ಕರಾರಿಲ್ಲದೆ ತಿಂಬ ತೋಳಗಳು ಬೆಳೆಯಲು
ದೀನ ದಲಿತರ ಹೆಸರು ಕೂಗಿಕೂಗಿ ದಬ್ಬಾಳಿಕೆಯ ಬಸಿರುಬ್ಬಿಸಲು
ನಮ್ಮ ಹೂದೋಟಗಳಲ್ಲಿ ಮುಳ್ಳುಕಂಟಿಗಳ ಧಾರಾಳ ಬೆಳೆಸಲು
ನಮ್ಮ ಮನೆಯಂಗಳಗಳಲ್ಲೆ ತಿಪ್ಪೆಯೊಟ್ಟಿಕೊಳ್ಳಲು
ಪೂರ್ವ ಶಿಖಿಯ ಕತ್ತರಿಸಲು ಪಾಶ್ಚಾತ್ಯ ಕಸಿಯ ತಲೆತುಂಬಾ
ಸಿಕ್ಕಾಪಟ್ಟೆ ಬೆಳೆಸಲು ಸ್ವಾತಂತ್ರ್ಯ ಬಂದಿದೆ.
ಬೇಕು ಬೇಕಾದವರ ಬೇಕಾದೆಡೆಗಳಲ್ಲಿ ತುಂಬಿಸಿಕೊಳ್ಳಲು
ಬೇಡಾದವರ ಆಗದವರ ಮೇಲೆಲ್ಲಾ ರೊಚ್ಚೆ ಚಿಮ್ಮಿಸಲು
ದುಡಿದು ತಿಂಬವರ ಒಡಲ ತುಳಿದು ನಮ್ಮ ಬೊಜ್ಜು ಬೇಕಾದಂತೆ
ಬೆಳೆಸಲು ಸ್ವಾತಂತ್ರ್ಯ ಬಂದಿದೆ
ಕುಡಿದು ಬೇಕಾದಷ್ಟು ಬೀದಿಯಲ್ಲಿ ಹೊರಳಾಡಿ ಸ್ವರ್ಗಕಾಣಲು
ಮಾತುಗಳೊಲೆಯ ಮೇಲೆ ಸ್ವಾರ್ಥದಡಿಗೆ ಬೇಯಿಸಿಕೊಳ್ಳಲು
ಬುದ್ದಿ ಶಕ್ತಿ, ಯೋಗ್ಯತೆ, ಗುಣಗಳನ್ನು
ಹೆಣಮಾಡಿ ಹೂಳಿಡಲು
ಗೂಂಡಾ ಗುಂಪುಗಾರಿಕೆ, ಹಣಗಳನ್ನು ಸಿಂಹಾಸನಕ್ಕೇರಿಸಲು
ಕೆಳಬಿದ್ದವರನೆಬ್ಬಿಸುವ ನೆಪದಲ್ಲಿ ಎದ್ದವರ ಹೊಡೆದು ಬೀಳಿಸಲು
ಸ್ವಾತಂತ್ರ್ಯ ಬಂದಿದೆ.
*****