ಎದೆಯ ಹೊಂಡದಲೆಲ್ಲ ಎಚ್ಚರದಿ ಕೈಯಾಡಿ
ಹುಡುಕಿ ಎತ್ತಿದ್ದೇನೆ ನಿನ್ನ,
ನಿನ್ನ ಮಲಗಿಸಿ ಮೈಯ ಅಂಗುಲಂಗುಲವನ್ನು
ದುರ್ಬೀನುಗಣ್ಣಿನಲ್ಲಿ ಬೆದಕಿ
ನೋಡಿದರೆ ಇದೇನು, ಎಲ ನೀನು
ಪ್ರತಿ ಕಣದಲೂ ಖುದ್ದು ನಾನು!

ಜವಳಿಯಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ
ಬಟ್ಟೆ ಹರಿಸುತ್ತಿರಲು ಪಕ್ಕದಲೆ ನೀನು
ಅದೆ ಬಟ್ಟೆಗಳ ತೊಟ್ಟು ನಿಂತಿರುವೆ ಅದಕೂ
ಒಂದೆರಡು ಕಡೆ ಹರಕು;
ಎಂದೊ ಹೊಲಿಸಿದ್ದೆ ಬಿಡು ಇದನು ಎಂಬಂತೆ
ಮುಖದಲ್ಲಿ ಒಂದು ನಗೆ ಪಲುಕು;
ನನಗೊ, ಬದುಕು ಎಲ್ಲ ಥರದಲು ಹೊಸದು ಬೇಕು.

ಒಳಗೆ ಆಳದಲೆಲ್ಲೊ ತೇಲಿಬಂದರೆ
ಒಂದು ತುಣುಕು,
ಬಹಳ ಸಡಗರದಲ್ಲಿ ಎತ್ತಿ
ಕುಕ್ಕಿ, ಇದು ಗಟ್ಟಿ
ಹೊಸ ಮಾತಿನಲ್ಲಿ ಹೆಕ್ಕಿ ತರುವೆನೆನ್ನುತ್ತೇನೆ;
ಆದರಗೊ ಅಲ್ಲಿ,
ತಲೆಯ ಮೇಲೇ ಕಂಡ ಹಾಗೆ ಹೆಣ್ಣಿಗೆ ಹಲ್ಲಿ,
ಊರ ಹೆಬ್ಬಾಗಿಲಿನ ಮೇಲೆ ನಿಂತು
ಅದನೆ ಸಾರುತಲಿರುವೆ ಗಂಟೆಗೊರಳಲ್ಲಿ.
ಬೆವರುತ್ತೇನೆ ನಾನು ಎತ್ತಿ ಬೀಸುತ್ತೇನೆ ಕತ್ತಿ
ನೀನೋ,
ನಗುವೆ ಥಣ್ಣಗೆ ಎಗ್ಗೆ ಇರದೆ, ಮಿಣ್ಣಗೆ ನನ್ನ ಹೂಳಿ
ನನ್ನ ಮಾತ್ಸರ್ಯವೇ ಪ್ರತಿಬಿಂಬಿಸುತ್ತಿರುವ ನಿನ್ನೆ ಗೆಲುವಲ್ಲಿ.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)