ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟ...